ಚಾಮರಾಜನಗರದಲ್ಲಿ ವಿಭಿನ್ನ ಆಚರಣೆ: ಈ ಹುತ್ತಕ್ಕೆ ಕೋಳಿ ರಕ್ತ, ಮೊಟ್ಟೆ ಅರ್ಪಿಸಿದ್ರೆ ಇಷ್ಟಾರ್ಥಗಳ ಈಡೇರಿಕೆ ಪಕ್ಕಾ ಅಂತೆ
ಚಾಮರಾಜನಗರ: ನಾಡಿನೆಲ್ಲೆಡೆ ಇಂದು ಶ್ರದ್ಧಾ-ಭಕ್ತಿಯಿಂದ ಷಷ್ಠಿ ಆಚರಣೆ ಮಾಡುತ್ತಿದ್ದು, ಅದರಂತೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ಷಷ್ಠಿಯನ್ನು ವಿಭಿನ್ನವಾಗಿ ಹಲವರು ಆಚರಿಸಿ ಗಮನ ಸೆಳೆದಿದ್ದಾರೆ.
ಹಾವಿನ ಹುತ್ತಕ್ಕೆ ಹಾಲು, ಬೆಣ್ಣೆ, ಪಂಚಾಮೃತದ ತನಿ ಎರೆಯುವುದು ಸಾಮಾನ್ಯ. ಆದರೆ, ಚಾಮರಾಜನಗರ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಮೊಟ್ಟೆಯನ್ನು ಅರ್ಪಿಸಿ ಭಕ್ತಿ-ಭಾವದಿಂದ ನಾಗಪ್ಪನಿಗೆ ನಮಿಸಿದ್ದಾರೆ. ಇನ್ನು ನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿದ್ದಾರೆ.

ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನು ಹುತ್ತದೊಳಗೆ ಹಾಕುತ್ತಾರೆ. ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು, ಪೂಜೆ ಆಗುವವರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ.
ಕೋಳಿ ಬಲಿಕೊಟ್ಟರೆ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ ಎಂದು ಹಲವರ ನಂಬಿಕೆಯಾಗಿದ್ದು, ಅದರಂತೆ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇನ್ನು, ಕೋಳಿ ಬಲಿ ಕೊಡದವರು ಹುತ್ತಕ್ಕೆ ಹಣ್ಣು, ಹಾಲು, ಬೆಣ್ಣೆ, ತುಪ್ಪ ಅರ್ಪಿಸಿ ಸುಬ್ರಹ್ಮಣ್ಯ ಷಷ್ಠಿ ಆಚರಣೆ ಮಾಡಿದ್ದಾರೆ.
ಎರಡನೇ ಆಸ್ಪತ್ರೆಯಾದ ಈ ದೇವಾಲಯ
ಇತ್ತೀಚಿನ ದಿನಗಳಲ್ಲಿ ರಾಜಕೀಯ, ಶಿಕ್ಷಣ, ಆರೋಗ್ಯ ಎಲ್ಲಾ ಕಡೆಗೂ ಜಾತಿ, ಧರ್ಮ ವರ್ಕ್ ಔಟ್ ಆಗ್ತಾ ಇದೆ. ಇಂತಹ ಸಂದರ್ಭದಲ್ಲಿಯೂ ಇಲ್ಲೊಂದು ದೇಗುಲದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶ ಕಾಣಬಹುದು. ಸರ್ವಧರ್ಮದವರು ಇಲ್ಲಿಗೆ ಬಂದು ತಮ್ಮ ಕಷ್ಟಕರ್ಪಣ್ಯವನ್ನು ಈಡೇರಿಸುವಂತೆ ಪಾರ್ಥನೆ ಮಾಡಿಕೊಳ್ಳುತ್ತಾರೆ. ಹಾಗದರೆ ಆ ದೇವಾಲಯ ಯಾವುದು, ಎಲ್ಲಿದೆ ಎಂದು ಇಲ್ಲಿ ತಿಳಿಯಿರಿ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವೇದಾವತಿ ನದಿ ದಡದಲ್ಲಿರುವ ದೇವಾಲಯವೇ ಐತಿಹಾಸಿಕ ಶ್ರೀ ರಾಜ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ. ಈ ದೇವಾಲಯಕ್ಕೆ ಹಿಂದೂ ಮುಸ್ಲಿಂ, ಕ್ರೈಸ್ತ ಭಕ್ತರು ಆಗಮಿಸುತ್ತಾರೆ. ಹೀಗೆ ಸರ್ವಧರ್ಮದ ಭಕ್ತರ ಬಳಗವನ್ನು ಈ ದೇವಾಲಯ ಹೊಂದಿದೆ. ಇಲ್ಲಿನ ತಾಯತವನ್ನು ಕಟ್ಟಿಸಿಕೊಳ್ಳುಲು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರಂತೆ.
ವರ್ಷದ 365 ದಿನ ಪ್ರತಿನಿತ್ಯವೂ ದೇವಾಲಯದಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಈ ಪೂಜೆಗೆ ಸರ್ವಧರ್ಮಗಳ ಭಕ್ತರು ಆಗಮಿಸಿ ದೇವಿಯ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಹಾಗೂ ಶುಕ್ರವಾರ ಅಮ್ಮನವರಿಗೆ ವಿಶೇಷ ಪೂಜೆ ನಡೆಯುತ್ತದೆ. ಅದರಲ್ಲೂ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಅಲಂಕಾರ, ನೈವೇದ್ಯದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಸಲ್ಲಿಸಲಾಗುತ್ತದೆ. ತಮ್ಮ ಮಕ್ಕಳಿಗೆ ಸರ್ವ ಸಂಕಷ್ಟಗಳು ದೂರಾಗಲಿ ಅಂತಾ ತಾಯತ ಕಟ್ಟಿಸಿ ಜಗನ್ಮಾತೆಗೆ ಬೇಡಿಕೊಳ್ಳುವ ವಾಡಿಕೆ ಅನಾಧಿ ಕಾಲದಿಂದ ನಡೆದುಕೊಂಡು ಬಂದಿದೆ.
ದುರ್ಗಮ್ಮ ದೇವಾಲಯಕ್ಕೆ ಅನಾದಿ ಕಾಲದಿಂದ ಜಾತಿ, ಧರ್ಮ ಅನ್ನದೆ ಎಲ್ಲಾ ಜಾತಿ, ಧರ್ಮಗಳ ಭಕ್ತರು ದೇವಿಯನ್ನು ಆರಾಧಿಸುತ್ತಾ ಬಂದಿದ್ದಾರೆ. ಇಲ್ಲಿಗೆ ಬರುವ ಎಲ್ಲಾ ಧರ್ಮೀಯ ಭಕ್ತರು ತಮ್ಮ ಮಕ್ಕಳಿಗೆ ಒಳ್ಳೆಯದಾಗಲಿ, ಯಾವುದೇ ರೋಗ ರುಜಿನ ಬಾರದಿರಲಿ, ಯಾವುದೇ ಪೀಡೆ ಕಾಟ ಬಾಧಿಸದಿರಲಿ ಅಂತಾ ದೇವಿಯ ತಾಯತ ಕಟ್ಟಿಸುವ ವಾಡಿಕೆ ಇದೆ.
ಇಲ್ಲಿ ತಾಯತ ಕಟ್ಟಿಸಿಕೊಂಡ ಮಕ್ಕಳಿಗೆ ಜ್ವರ, ಕೆಮ್ಮು, ಚಿಕ್ಕ ಮಕ್ಕಳು ಹಠ ಮಾಡುವುದು ಸೇರಿದಂತೆ ವಿವಿಧ ರೋಗರುಜಿನಗಳು ವಾಸಿಯಾಗುತ್ತದೆ ಎನ್ನುವುದು ಭಕ್ತರ ಬಲವಾದ ನಂಬಿಕೆಯಾಗಿದೆ. ಹಾಗಾಗಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ದೇವಾಲಯಕ್ಕೆ ಆಗಮಿಸುವ ಭಕ್ತರು ವಿಶೇಷ ಪೂಜೆ ಸಲ್ಲಿಸಿ ತಮ್ಮ ಮಕ್ಕಳಿಗೆ ಯಾವುದೇ ರೋಗ ರುಜಿನ ಬಾಧಿಸದಿರಲಿ, ದೋಷಗಳು ದೂರವಾಗಲಿ ಅಂತಾ ಪ್ರಾರ್ಥಿಸಿ ತಾಯತ ಕಟ್ಟಿಸುತ್ತಾರೆ. ಅಲ್ಲದೆ ಜಗನ್ಮಾತೆಗೆ ನಮಿಸಿ ಅವಳ ಕೃಪೆಗೆ ಪಾತ್ರರಾಗುತ್ತಾರೆ. ಇದು ಸುಮಾರು 12 ಅಥವಾ 13ನೇ ಶತಮಾನದ ಇತಿಹಾಸ ಹೊಂದಿದೆ.
ದೇವಾಲಯ ಹಿನ್ನೆಲೆ
ಜಿಲ್ಲೆಯ ಹಿರಿಯೂರು ನಗರಕ್ಕೆ ತನ್ನದೇ ಆದ ಪುರಾತನ ಇತಿಹಾಸ ಇದೆ. ಹಿಂದೆ ಈ ನಗರವನ್ನು ಘನಪುರಿ ಎಂದು ಕರೆಯುತ್ತಿದ್ದರು. ಘನಪುರಿ ಕಾಲಘಟ್ಟದಲ್ಲಿ ದೇವಿ ನೆಲೆಸಿದ್ದಳು ಎಂಬ ಪ್ರತೀತಿ ಇದೆ. ಗ್ರಾಮ ದೇವತೆಯಾಗಿ ಮಾರ್ಪಟ್ಟ ಈ ದೇವಿ ಶತ-ಶತಮಾನಗಳಿಂದ ಭಕ್ತರನ್ನು ಹಾರಸುತ್ತಾ ಬಂದಿರುವ ದುರ್ಗಾ ದೇವಿ ಅಮ್ಮನವರ ದೇವಸ್ಥಾನ ನಾಥಪಂಥಕ್ಕೆ ಸೇರಿದ್ದಾಗಿದೆ. ನಾಥಪಂಥದ ಸಂಪ್ರದಾಯದಂತೆ ದೇವಿಗೆ ಪೂಜೆ ಪುನಸ್ಕಾರಗಳು ನಡೆಯುತ್ತವೆ.
ವಿಜಯನಗರ ಅರಸರು, ಚಿತ್ರದುರ್ಗ ಮದಕರಿನಾಯಕರು ಹಾಗೂ ಹಿರಿಯೂರು ಆಳಿದ ರಾಜ ವೀರ ಕೆಂಚಪ್ಪನಾಯಕರಿಂದಲೂ ಪೂಜಿಸಲ್ಪಟ್ಟ ನಗರ ದೇವತೆಯಾಗಿದ್ದಾಳೆ. ಅಲ್ಲದೆ ಪ್ರಾರಂಭದಲ್ಲಿ ಹಿರಿಯೂರು ಆಡಳಿತ ರಾಜಾ ಚಿತ್ರಶೇಖರನಾಯಕ ಹಾಗೂ ಸೋಮಶೇಖರ ನಾಯಕ ಇವರ ಮನೆಯ ಅಧಿದೇವತೆಯಂತೆ.
ಈ ದೇವಾಲಯಕ್ಕೆ ಸುಮಾರು 150 ವರ್ಷಗಳ ಇತಿಹಾಸವಿದೆ. ಹಿಂದೆ ಚಿಕ್ಕಗುಡಿಯಾಗಿತ್ತು. ಇಲ್ಲಿನ ಅರ್ಚಕರು ದೇವಾಲಯವನ್ನು ಮರು ನಿರ್ಮಾಣ ಮಾಡಿದ್ದಾರೆ. ಅದರಲ್ಲೂ ಮರಿಯಪ್ಪ, ಸಿದ್ದಪ್ಪ ಹಾಗೂ ದುರ್ಗಪ್ಪ ಸಹೋದರರಲ್ಲಿ ಕಿರಿಯರಾದ ದುರ್ಗಪ್ಪ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಪ್ರಸ್ತುತ ದೇವಾಲಯದ ಪೂಜೆಯನ್ನು 6ನೇ ತಲೆಮಾರಿನ ಅರ್ಚಕರು ಪೂಜಾ ವಿಧಿ-ವಿಧಾನಗಳನ್ನು ಮುನ್ನಡೆಸುತ್ತಿದ್ದಾರೆ.
ದಿನ ಕಳೆದಂತೆ ದೇವಸ್ಥಾನ ಶಿಥಿಲ ವ್ಯವಸ್ಥೆ ತಲುಪುತ್ತಾ ಬಂದಾಗ 1992ರಲ್ಲಿ ಮತ್ತೊಮ್ಮೆ ದೇವಗುಲ ನೂತನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು 2015ನೇ ಜನವರಿ 25ರಿಂದ 28ರಂದು. ನಂತರ ದೇವಾಲಯ ಉದ್ಘಾಟನೆಗೊಂಡಿತು.












Click it and Unblock the Notifications