ಕೊಳ್ಳೇಗಾಲದ "ಕೈ" ಮಾಜಿ ಶಾಸನಕನ ಪುತ್ರನಿಂದ ಕಿಚ್ಚ ಸುದೀಪ್ ವಿರುದ್ಧ ಅವಹೇಳನಕಾರಿ ಹೇಳಿಕೆ: ರೊಚ್ಚಿಗಿದ್ದ ಅಭಿಮಾನಿಗಳ ಬಳಗ
ಚಾಮರಾಜನಗರ, ಏಪ್ರಿಲ್, 28: ಚಿತ್ರನಟ ಕಿಚ್ಚ ಸುದೀಪ್ ಅವರ ಪ್ರಚಾರದ ಬಗ್ಗೆ ಮಾಜಿ ಶಾಸಕರ ಪುತ್ರ ಆಡಿದ ಮಾತೊಂದು ವೈರಲ್ ಆಗಿದ್ದು, ಇದರಿಂದ ಸುದೀಪ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಕೊಳ್ಳೇಗಾಲ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಜಿ.ಎನ್.ನಂಜುಂಡಸ್ವಾಮಿ ಪುತ್ರ ಜಿ.ಎನ್.ಲೋಕೇಶ್ ಅವರು ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ವೀಡಿಯೋ ತುಣುಕೊಂದು ವೈರಲ್ ಆಗಿದೆ. ಸುದೀಪ್ ಬರುತ್ತಾರೆ, ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ಶಾಸಕರು ಹೇಳುತ್ತಾರೆ. ಆದರೆ ನಮ್ಮಲ್ಲಿ ಯಾರೇ ಬಂದರೂ ಊಟ ಮಾಡಿ, ಜೇಬಿಗೆ ಹಾಕಿಕೊಂಡು ಹೋಗುತ್ತಾರೆ ಎಂದು ಹೇಳಿರುವ ಮಾತು ಈಗ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಸರಗೂರು ಶಿವು ಈ ಬಗ್ಗೆ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಪುತ್ರ ಜಿ.ಎನ್. ಲೋಕೇಶ್ ಮಾತಿನ ಭರದಲ್ಲಿ ಕಿಚ್ಚ ಸುದೀಪ್ ಅವರನ್ನು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಇದು ನಾಯಕ ಸಮಾಜಕ್ಕೆ ಮತ್ತು ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಬಹಳ ನೋವುಂಟಾಗಿದ್ದು, ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಕ್ಷಮೆಯಾಚಿಸದಿದ್ದರೆ ಜಿಲ್ಲಾದ್ಯಂತ ಜಿ.ಎನ್.ಲೋಕೇಶ್ ವಿರುದ್ಧ ಪ್ರತಿಭಟಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಯಳಂದೂರಿನಲ್ಲಿ ಸುದೀಪ್ ಅಭಿಮಾನಿಗಳು ಕೂಡ ಲೋಕೇಶ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಚಾರಕ್ಕಿಳ್ಳಿದ ಕೈ, ಕಮಲ ಅಭ್ಯರ್ಥಿಗಳ ಕುಟುಂಬ
ವಿಧಾನಸಭೆ ಚುನಾವಣೆ ಹಿನ್ನಲೆ ಅಭ್ಯರ್ಥಿಗಳ ಪರ ಕುಟುಂಬ ವರ್ಗವೇ ಪ್ರಚಾರಕ್ಕಿಳಿದ ಘಟನೆ ಚಾಮರಾಜನಗರ ಕ್ಷೇತ್ರದಲ್ಲಿ ನಡೆದಿದೆ. ಚಾಮರಾಜನಗರದಲ್ಲಿ ಪತಿ ವಿ.ಸೋಮಣ್ಣನವರ ಪರ ಪತ್ನಿ ಶೈಲಜಾ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ.
ಶೈಲಜಾ ಸೋಮಣ್ಣ ಅವರು ಅಸಮಾಧಾನಿತರನ್ನು ಭೇಟಿ ಮಾಡುವ ಮೂಲಕ ಅಖಾಡದಲ್ಲಿ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ. ವಿವಿಧ ಗ್ರಾಮಗಳಿಗೆ ತೆರಳಿ ಸೋಮಣ್ಣ ಪರ ಬ್ಯಾಟಿಂಗ್ ಮಾಡುವ ಮೂಲಕ ಮತಯಾಚನೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಪರ ಅವರ ಇಬ್ಬರು ಪುತ್ರಿಯರಾದ ಶೀಲಾ ಮತ್ತು ವೇದಾವತಿ ಪ್ರಚಾರಕ್ಕಿಳಿದಿದ್ದಾರೆ. ಅಲ್ಲದೆ ಪುಟ್ಟರಂಗಶೆಟ್ಟಿ ಪರ ಅವರು ಕ್ಷೇತ್ರದ ವಿವಿಧೆಡೆ ಮತಬೇಟೆಗೆ ಮುಂದಾಗಿದ್ದಾರೆ.
ಸತತ ಮೂರು ಬಾರಿ ಗೆದ್ದು ನಾಲ್ಕನೇ ಬಾರಿಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಲು ಪುಟ್ಟರಂಗಶೆಟ್ಟಿ ಈ ಬಾರಿ ಸೋಮಣ್ಣನ ವಿರುದ್ಧ ಪ್ರಬಲ ಪೈಪೋಟಿ ಎದುರಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಪುಟ್ಟರಂಗಶೆಟ್ಟಿ ಅವರ ಪುತ್ರಿಯರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಆಕ್ರೋಶ
ಇನ್ನು ಸೋಮಣ್ಣ ಯಾರು ಎಂದು ಸಿದ್ದರಾಮಯ್ಯ ಇತ್ತೀಚೆಗಷ್ಟೇ ಕೇಳಿದ್ದರು. ಇದಕ್ಕೆ ವಿ.ಸೋಮಣ್ಣ ಇದೀಗ ಚಾಮರಾಜನಗರದಲ್ಲಿ ತಿರುಗೇಟು ನೀಡಿದ್ದರು.
2006 ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಏಟು ತಿಂದಿದ್ದೇನೆ. ಬರಿಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ಆಗ ನನ್ನ ಕಾರಿನ ಗ್ಲಾಸ್ ಒಡೆದು ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮಾಜವನ್ನು ಎದುರು ಹಾಕಿಕೊಂಡು ಅವರುಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬ್ರ ತಲೇಲಿ ಇಲ್ಲ ಎಂದು ತಿರುಗೇಟು ನೀಡಿದ್ದರು.
ನಾನು ಸಾಹೇಬ್ರೆ ಅಂತಾ ಕರೆಯುತ್ತೇನೆ. ಅವರು ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ಇದೆ ನನಗೂ, ಅವರಿಗೂ ಇರುವ ವ್ಯತ್ಯಾಸ. ಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರೀನೂ ಅಲ್ಲ. ಇಬ್ಬರೂ ಅಭ್ಯರ್ಥಿಗಳು ಅಷ್ಟೇ. ಸಿದ್ದರಾಮಯ್ಯ ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ. ಅವನ್ಯಾರು, ಇವನ್ಯಾರು ಅನ್ನುವ ಡೈಲಾಗ್ ಕಡಿಮೆ ಮಾಡಿದರೆ ಒಳ್ಳೆಯದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ. ನಾನು ವರುಣಾದಲ್ಲಿ ಸ್ಪರ್ಧೆ ಮಾಡುತ್ತಿರುವುದು ವಿಧಿ ನಿಯಮವಾಗಿದೆ ಎಂದು ವಿ.ಸೋಮಣ್ಣ ಹೇಳಿದ್ದರು.












Click it and Unblock the Notifications