ಚಾಮರಾಜನಗರ: ಬೆಂಕಿ ಜ್ವಾಲೆಗೆ ಹೊತ್ತಿ ಉರಿದ ತೆಂಗಿನ ಮರಗಳು, ಅನ್ನದಾತ ಕಂಗಾಲು
ಚಾಮರಾಜನಗರ, ಮಾರ್ಚ್, 02: ಜಮೀನಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ತೆಂಗಿನಕಾಯಿ, ತೇಗದ ಮರಗಳು, ತೆಂಗಿನಮರಗಳು ಸುಟ್ಟು ಕರಕಲಾದ ಘಟನೆ ಚಾಮರಾಜನಗರದ ತಾಲೂಕಿನ ಆಲೂರುಹೊಮ್ಮ ಗ್ರಾಮದಲ್ಲಿ ಶನಿವಾರ (ಮಾರ್ಚ್ 02) ಮಧ್ಯಾಹ್ನ 2ಕ್ಕೆ ನಡೆದಿದೆ.
ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ಎಚ್ಎಸ್ ಮಲ್ಲಣ್ಣ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿದ್ದ ತೆಂಗಿನಕಾಯಿ ರಾಶಿಗೆ ಬೆಂಕಿ ಬಿದ್ದು, ಬಳಿಕ ಜಮೀನಿನಲ್ಲಿದ್ದ ತೇಗದ ಮರಗಳು ತೆಂಗಿನ ಮರಗಳಿಗೂ ಬೆಂಕಿ ತಗುಲಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇನ್ನು ತೆಂಗಿನ ಮರಗಳ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಬಸ್ ಪಲ್ಟಿ, 30 ಮಂದಿ ಕಾರ್ಮಿಕರಿಗೆ ಗಾಯ: ಕಾರ್ಖಾನೆ ಬಸ್ ಪಲ್ಟಿಯಾಗಿ 30 ಮಂದಿ ಗಾಯಗೊಂಡ ಘಟನೆ ಚಾಮರಾಜನಗರದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ (ಮಾರ್ಚ್ 01) ಮಧ್ಯಾಹ್ನ ನಡೆದಿದೆ.
ಚಾಮರಾಜನಗರದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಕಲರ್ ಟ್ಯೂನ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಕಂಪನಿ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ಈ ಅವಘಡ ನಡೆದಿದೆ.
ಕೆಸಲ ಮುಗಿಸಿದ್ದ ಕಾರ್ಮಿಕರನ್ನು ಕರೆದೊಯ್ಯುವಾಗ ತಿರುವಿನಲ್ಲಿ ಬಸ್ ಪಲ್ಟಿಯಾಗಿದ್ದು, ಈ ವೇಳೆ ಗಾಯಗೊಂಡಿದ್ದ 30 ಮಂದಿಯಲ್ಲಿ 4 ಮಂದಿಗೆ ಗಂಭೀರ ಪೆಟ್ಟು ಬಿದ್ದು ಐಸಿಯುಗೆ ದಾಖಲಾಗಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಚಾಲಕನ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ












Click it and Unblock the Notifications