ಚಾಮರಾಜನಗರ ಅಧಿಕಾರಿಗಳಿಗೆ ಸಿಎಂ ಕ್ಲಾಸ್: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿದ್ದರಾಮಯ್ಯ
ಚಾಮರಾಜನಗರ, ಸೆಪ್ಟೆಂಬರ್ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೂರುವರೆ ಗಂಟೆ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ಸಭೆಯ ಆರಂಭದಲ್ಲೇ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದ ಸಿಎಂ, ಅನ್ನಭಾಗ್ಯ ಯೋಜನೆಯಡಿ ಡಿಬಿಟಿ ಮೂಲಕ ಹಣ ಪಾವತಿ ಮಾಡಲು ಬ್ಯಾಂಕ್ ಖಾತೆ ಸಮಸ್ಯೆಯಿಂದ ಹಲವರಿಗೆ ತಲುಪಿಸಿಲ್ಲ ಎಂದು ಉತ್ತರ ಕೊಟ್ಟ ಅಧಿಕಾರಿ ಯೋಗಾನಂದಗೆ, ಮೂರು ತಿಂಗಳು ನಿಮಗೆ ಬೇಕ ಎಂದು ಕ್ಲಾಸ್ ತೆಗೆದುಕೊಂಡರು.

ಇನ್ನು, ಶಕ್ತಿ ಯೋಜನೆ ಆರಂಭಗೊಂಡ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಪಡೆದ ಮುಖ್ಯಮಂತ್ರಿ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು, ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಸಮಯದಲ್ಲಿ ಬಸ್ ಗಳು ತೆರಳಬೇಕು ಎಂದು ಸೂಚಿಸಿದರು. ಚಾಮರಾಜನಗರ ಜಿಲ್ಲೆಯ ಜನರ ಸರಾಸರಿ ವಿದ್ಯುತ್ ಬಳಕೆ ಮಾಹಿತಿ ಕೊಡಲು ತಡವರಿಸಿದ ಸೆಸ್ಕ್ ಅಧಿಕಾರಿಗೆ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಜೂನ್‌ನಿಂದ ಆಗಸ್ಟ್‌ವರೆಗೂ ಅಗತ್ಯವಾದಷ್ಟು ಮಳೆ ಆಗದ ಕಾರಣದಿಂದ ಬರದ ಮತ್ತು ಸಂಕಷ್ಟದ ಪರಿಸ್ಥಿತಿ ಇದೆ. 161 ತೀವ್ರ ಬರಗಾಲ, 34 ತಾಲೂಕುಗಳು ಸಾಧಾರಣ ಬರಗಾಲದ ಸ್ಥಿತಿ ಇದೆ. ಇದಕ್ಕೆ ಇನ್ನಷ್ಟು ತಾಲೂಕುಗಳು ಸೇರಬಹುದು. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಬರ ಇದೆ ಆದರೆ ದುಡ್ಡಿಗೆ ಬರವಿಲ್ಲ, ಕುಡಿಯುವ ನೀರಿಗೆ ಕೊರತೆ ಆಗಬಾರದು. ಸಾವಜನಿಕರಿಂದ ದೂರುಗಳು ಬರಬಾರದು ಎಂದು ಸೂಚಿಸಿದರು.
ಕೆಲಸ ಹುಡುಕಿಕೊಂಡು ವಲಸೆ ಹೋಗುವ,ಗುಳೆ ತೆರಳುವ ಸ್ಥಿತಿ ಬಾರದಂತೆ, ನರೇಗಾ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. 150 ದಿನ ಕೆಲಸ ಕೊಡಬೇಕು. ಉದ್ಯೋಗ ಸೃಷ್ಟಿಯ ಇತರೆ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೇವು, ಕುಡಿಯುವ ನೀರು, ಉದ್ಯೋಗ ಸಮಸ್ಯೆ ನಿವಾರಣೆಗೆ ಎಲ್ಲವನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕು, ಇವುಗಳ ಬಗ್ಗೆ ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಖಚಿತ ಎಂದು ಸಿಎಂ ಎಚ್ಚರಿಸಿದರು.
ಒಟ್ಟಿನಲ್ಲಿ ಚಾಮರಾಜನಗರಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಸಭೆಯಲ್ಲಿ ಸಚಿವರುಗಳಾದ ಕೆ.ವೆಂಕಟೇಶ್, ಎಚ್.ಸಿ.ಮಹಾದೇವಪ್ಪ, ಶಾಸಕರು, ಉನ್ನತ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications