ಸಿಮ್ಸ್ ನೌಕರ ಆತ್ಮಹತ್ಯೆ; KRS ಪಕ್ಷದ ಕಾರ್ಯಕರ್ತರ ಬಂಧನಕ್ಕೆ ಆಗ್ರಹ
ಚಾಮರಾಜನಗರ, ಜುಲೈ 22: ಸಿಮ್ಸ್ ನೌಕರ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಗಳೊಟ್ಟಿಗೆ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ವಾಲ್ಮೀಕಿ ಸಮುದಾಯದ ಮುಖಂಡ ಚಾ.ಸಿ.ಸೋಮನಾಯಕ, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ, ನಗರಸಭಾ ಸದಸ್ಯ ಗಾಳಿಪುರ ಮಹೇಶ್, ದಲಿತ ಹೋರಾಟಗಾರ ಸುರೇಶ್ ನೇತೃತ್ವದಲ್ಲಿ ಮೃತ ಮಹೇಶ್ ಕುಟುಂಬಸ್ಥರು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿ ಕೆಆರ್‌ಎಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದರು.
ಕೆಆರ್ ಎಸ್ ಪಕ್ಷದ ಕಾರ್ಯಕರ್ತರಾದ ಶ್ರೀನಿವಾಸಶಾಸ್ತ್ರಿ ಹಾಗೂ ಗಣೇಶ್ ಅವರನ್ನು ಕೂಡಲೇ ಬಂಧಿಸಬೇಕು, ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕು ಜೊತೆಗೆ ಕುಟುಂಬದ ಒಬ್ಬರಿಗೆ ಸಿಮ್ಸ್ ನಲ್ಲಿ ನೌಕರಿ ಕೊಡಬೇಕೆಂದು ಆಗ್ರಹಿಸಿದರು.

ಏನಿದು ಘಟನೆ?
ಕುಡಿದು ಕೆಲಸ ಮಾಡುತ್ತಿದ್ದಾನೆ, ಅವಾಚ್ಯವಾಗಿ ಬೈದನೆಂದು ಫೇಸ್ಬುಕ್ ನಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದರಿಂದ
ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರಗುತ್ತಿಗೆ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡಿಕೊಂಡಿದ್ದ ಗಾಳಿಪುರದ ನಿವಾಸಿ ಮಹೇಶ್(32) ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ 15 ರಂದು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಾದ ಇವರಿಬ್ಬರು ಮಹೇಶ್‌ನ ವಿಡಿಯೋ ಮಾಡಿಕೊಂಡು ಕೆಆರ್‌ಎಸ್ ಚಾಮರಾಜನಗರ ಜಿಲ್ಲೆ ಎಂಬ FACEBOOK ಪೇಜಿನಲ್ಲಿ ಅಪ್ ಲೋಡ್ ಮಾಡಿದ್ದಾರಂತೆ. ವಿಡಿಯೋ ಅಪ್ ಲೋಡ್ ಮಾಡಿದ್ದರಿಂದ ತನಗೆ ಅಪಮಾನವಾಗಿದೆ ಎಂದು ಮನನೊಂದು ಮಹೇಶ್ ನೇಣಿಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಮಂಜುನಾಥ್ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಶ್ರೀನಿವಾಸಶಾಸ್ತ್ರಿ, ಗಣೇಶ್ ವಿರುದ್ಧ ದೂರು ನೀಡಿದ್ದಾರೆ.

ನಾಯಿಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಇಬ್ಬರು ಸಾವು
ಬೈಕ್‌ನಲ್ಲಿ ಹೋಗುವಾಗ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ಹೊರವಲಯದ ಮಾದಾಪುರ ಸಮೀಪ ನಡೆದಿದೆ. ತಾಲೂಕಿನ ಕಟ್ನವಾಡಿ ಗ್ರಾಮದ ಶಿವಮೂರ್ತಿ(46) ಹಾಗೂ ಮಹಾದೇವಪ್ಪ(52) ಮೃತ ದುರ್ದೈವಿಗಳು.
ಬೈಕ್‌ನಲ್ಲಿ ಬಿದ್ದ ತಕ್ಷಣ ಸ್ಥಳದಲ್ಲೇ ಶಿವಮೂರ್ತಿ ಮೃತಪಟ್ಟಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಹಾದೇವಪ್ಪ ಅಸುನೀಗಿದ್ದಾರೆ. ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications