ಬಿಳಿಗಿರಿರಂಗನಬೆಟ್ಟದ ಚಿಕ್ಕಜಾತ್ರೆಯಲ್ಲಿ ಮೊಲದ ಬೇಟೆ: ಏನಿದರ ವಿಶೇಷ?
ಚಾಮರಾಜನಗರ, ಜನವರಿ 16: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಸಂಕ್ರಾಂತಿ ಮಾರನೆಯ ದಿನ ನಡೆಯುವ ಚಿಕ್ಕ ಜಾತ್ರೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗಾಗಲೇ ಜಾತ್ರೆಯಲ್ಲಿ ಭಾಗವಹಿಸಿ ಬಿಳಿಗಿರಿ ರಂಗನಾಥನ ದರ್ಶನ ಪಡೆದವರು ತಮ್ಮ ಊರಿನ ಹಾದಿ ಹಿಡಿದಿದ್ದರೆ, ರಥೋತ್ಸವಕ್ಕೆ ಬರಲು ಸಾಧ್ಯವಾಗದವರು ನಂತರದ ದಿನಗಳಲ್ಲಿ ದೇಗುಲಕ್ಕೆ ಆಗಮಿಸಿ ದರ್ಶನ ಪಡೆಯುವುದಲ್ಲದೆ, ಬೇಸಿಗೆಯ ದಿನಗಳಲ್ಲಿ ನಡೆಯುವ ದೊಡ್ಡ ಜಾತ್ರೆಗೆ ಆಗಮಿಸುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಏಕೆಂದರೆ ಇಲ್ಲಿನ ಜಾತ್ರೆಯೇ ಹಾಗೆ ಇತರೆಡೆಯಲ್ಲಿ ನಡೆಯುವ ಜಾತ್ರೆಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ.
ಇನ್ನು ಬಿಳಿಗಿರಂಗನಬೆಟ್ಟದಲ್ಲಿ ನಡೆಯುವ ಜಾತ್ರೆಯಲ್ಲಿ ರಥೋತ್ಸವಕ್ಕೂ ಮುನ್ನ ನಡೆಯುವ ಅದೊಂದು ಸಂಪ್ರದಾಯ ಎಲ್ಲರ ಗಮನಸೆಳೆಯುತ್ತದೆ. ಹಾಗಾದರೆ ಆ ಸಂಪ್ರದಾಯ ಯಾವುದು ಎಂಬುದನ್ನು ನೋಡಿದ್ದೇ ಆದರೆ ಅದು ಮೊಲದ ಬೇಟೆ. ಅಯ್ಯೋ ರಥೋತ್ಸವಕ್ಕೂ ಮೊಲದ ಬೇಟೆಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆಗಳು ಕಾಡದಿರದು. ಆದರೆ ಚಿಕ್ಕ ಜಾತ್ರೆಯಲ್ಲಿನ ರಥೋತ್ಸವದ ಜೊತೆಗೆ ಕಾಡಿನಿಂದ ಮೊಲವನ್ನು ಬೇಟೆಯಾಡಿ ತಂದು ಬಿಳಿಗಿರಿ ರಂಗನಾಥಸ್ವಾಮಿಗೆ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಇದೊಂದು ಸಂಪ್ರದಾಯವಾಗಿ ಮುಂದುವರೆಯುತ್ತಿದೆ.

ಇದೆಲ್ಲದರ ನಡುವೆ ರಥೋತ್ಸವದ ವೇಳೆ ನಡೆಯುವ ವಿಶೇಷತೆಗಳು ವಿಸ್ಮಯವಾಗಿವೆ. ಅಲಂಕೃತವಾದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕುತ್ತದೆ. ಇದೇ ವೇಳೆ ನೆರೆದ ರಂಗಪ್ಪನ ದಾಸರು ಶಂಖ, ಜಾಗಟೆ, ನಾದಸ್ವರ, ಗೋವಿಂದಾ, ಗೋವಿಂದ ಎಂಬ ನಾಮಾವಳಿಯ ಸಪ್ಪಳವನ್ನು ಹಾಡುವ ಮೂಲಕ ರಥವನ್ನು ಎಳೆಯುತ್ತಾರೆ.
ಜೊತೆಗೆ ಭಕ್ತರು ತಾವು ಬೆಳೆದಿದ್ದ ಭತ್ತ, ರಾಗಿ, ಜೋಳ, ಮುಸುಕಿನಜೋಳ, ಸೇರಿದಂತೆ ವಿವಿಧ ಧವಸ ಧಾನ್ಯ, ಚಿಲ್ಲರೆ ಕಾಸು, ನವದಂಪತಿಗಳು ಹಣ್ಣುಜವನ, ಚಿಲ್ಲರೆ ಕಾಸುಗಳನ್ನು ರಥಕ್ಕೆ ಎಸೆಯುತ್ತಾರೆ. ನಂತರ ರಥ ದೇಗುಲಕ್ಕೆ ಸುತ್ತು ಹಾಕಿ ಸ್ವಸ್ಥಾನವನ್ನು ಸೇರುತ್ತದೆ.

ಮೊಲಬೇಟೆ ಹಿಂದಿದೆ ಪೌರಾಣಿಕ ನಂಟು
ರಥೋತ್ಸವದ ವೇಳೆ ಬಿಳಿಗಿರಿ ರಂಗನಾಥ ಸ್ವಾಮಿಗೆ ಮೈಸೂರಿನ ಮಹಾರಾಜರು ನೀಡಿರುವ ಕಿರೀಟ, ರತ್ನಖಚಿತ ವಿವಿಧ ಆಭರಣ ಸೇರಿದಂತೆ ವಿವಿಧ ಚಿನ್ನಾಭರಣವನ್ನು ತೊಡಿಸಿ ಅಲಂಕಾರ ಮಾಡಲಾಗುತ್ತದೆ. ನಂತರ ಭಕ್ತರು ಇಲ್ಲಿರುವ ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಹೊಡಿಸಿಕೊಳ್ಳುವ ಮೂಲಕ ಭಕ್ತಿ ಮೆರೆಯುತ್ತಾರೆ. ಇನ್ನು ಮೊಲದ ಸಮರ್ಪಣೆ ಏಕೆ ಎನ್ನುವುದನ್ನು ನೋಡಿದ್ದೇ ಆದರೆ ಇದರ ಹಿಂದೆ ಒಂದು ಪೌರಾಣಿಕ ಕಥೆಯಿದೆ.
ಆ ಕಥೆ ಹೇಳುವ ಮುನ್ನ ಮೊಲಬೇಟೆಯ ಬಗ್ಗೆ ಹೇಳಲೇ ಬೇಕು. ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಜನಾಂಗದದವರು ರಥೋತ್ಸವದ ಹಿಂದಿನ ದಿನ ಬಿಳಿಗಿರಿರಂಗನಬೆಟ್ಟದ ದೇಗುಲದ ಸಮೀಪದ ಕಮರಿಗೆ ತೆರಳಿ ಮೊಲವನ್ನು ಬೇಟೆಯಾಡಿ ಜೀವಂತವಾಗಿ ಹಿಡಿದು ತರುತ್ತಾರೆ. ನಂತರ ಅದನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಜೆ ವಾದ್ಯ ಮೇಳ ಕೊಂಬುಗಳೊಂದಿಗೆ ಮೆರವಣಿಗೆ ಮಾಡಿ ಬಿಳಿಗಿರಿರಂಗನಬೆಟ್ಟಕ್ಕೆ ಕೊಂಡೊಯ್ಯುತ್ತಾರೆ.

ದೇವತೆಗಳಿಗೆ ನಾರಾಯಣ ಹೇಳಿದ್ದೇನು?
ದೇಗುಲದಲ್ಲಿ ಮೊಲಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಆ ಮೊಲದ ಕಾಲಿಗೆ ಬೆಳ್ಳಿಯ ಗೆಜ್ಜೆ ಕಟ್ಟಿ ಪೂಜೆ ಸಲ್ಲಿಸಿ ಬಳಿಕ ಅದನ್ನು ಕಾಡಿಗೆ ಬಿಡಲಾಗುತ್ತದೆ. ಈ ಮೊಲ ದೇಗುಲದಿಂದ ಯಾವ ದಿಕ್ಕಿನ ಕಡೆಗೆ ಜಿಗಿದು ಓಡುತ್ತದೆಯೋ ಆ ದಿಕ್ಕಿನಲ್ಲಿ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ. ಆದರೆ ಈ ಸಂಪ್ರದಾಯ ಬರಲು ಬಲವಾದ ಕಾರಣಗಳು ಇದ್ದೇ ಇದೆ. ಅದು ಏನು ಕಾರಣ ಎನ್ನುವುದನ್ನು ನೋಡುತ್ತಾ ಹೋದರೆ ಈ ಸಂಪ್ರದಾಯಕ್ಕೆ ಪೌರಾಣಿಕ ನಂಟು ಇರುವುದು ಗೋಚರಿಸುತ್ತದೆ. ತಿರುಪತಿಯಿಂದ ಬಂದ ನಾರಾಯಣ ಇಲ್ಲಿನ ಸೋಲಿಗ ಜನಾಂಗದ ಅಲಮೇಲಮ್ಮನಲ್ಲಿ ಮೋಹಿತನಾಗಿ ಆಕೆಯನ್ನು ವರಿಸಿ ಬಿಳಿಗಿರಿರಂಗನ ಬೆಟ್ಟದಲ್ಲಿಯೇ ನೆಲೆಯೂರಲು ಬಯಸುತ್ತಾನೆ.
ಆದರೆ ಅತ್ತ ದೇವಾನು ದೇವತೆಗಳು ನಾರಾಯಣನ ಬರುವಿಕೆಗಾಗಿ ಕಾದು ಸುಸ್ತಾಗಿ ಬಿಡುತ್ತಾರೆ. ದೇವಾನು ದೇವತೆಗಳು ತನ್ನ ಆಗಮನದ ನಿರೀಕ್ಷೆಯಲ್ಲಿರುವುದನ್ನು ತಿಳಿದ ನಾರಾಯಣ ಅಲ್ಲಿಗೆ ತೆರಳುತ್ತಾನೆ. ಈ ವೇಳೆ ತಡವಾಗಿ ಬಂದಿದಕ್ಕೆ ದೇವಾನುದೇವತೆಗಳು ಕಾರಣ ಕೇಳಿದಾಗ ನಾರಾಯಣ ಮೊಲವನ್ನು ಬೇಟೆಯಾಡಲು ಬಿಳಿಗಿರಿರಂಗನಬೆಟ್ಟದಲ್ಲಿರುವ ಮೊಲದ ಗಿರಿಗೆ ತೆರಳಿದ್ದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾನಂತೆ. ಅದರ ಪ್ರತೀತಿಯಾಗಿ ಮೊಲದ ಬೇಟೆಯಾಡುವ ಸಂಪ್ರದಾಯ ಬಂದಿದೆ ಎಂದು ಹೇಳಲಾಗುತ್ತದೆ. ಅದು ಏನೇ ಇರಲಿ ಚಿಕ್ಕಜಾತ್ರೆಯಲ್ಲಿ ನಡೆಯುವ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ವಿಶೇಷವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications