ಚಾಮರಾಜನಗರ; ನಾಟಿವೈದ್ಯೆ ಜೀರಿಗೆಗದ್ದೆ ಪೋಡಿನ ಮಾದಮ್ಮಗೆ ರಾಜ್ಯೋತ್ಸವ ಪ್ರಶಸ್ತಿ
ಚಾಮರಾಜನಗರ, ಅಕ್ಟೋಬರ್, 31: ಹನೂರು ತಾಲೂಕಿನ ಜೀರಿಗೆಗದ್ದೆ ಪೋಡಿನ 85 ವರ್ಷದ ಮಾದಮ್ಮ ಗಿಡಮೂಲಿಕೆ ಗುರುತಿಸುವಲ್ಲಿ ಮತ್ತು ನಾಟಿ ವೈದ್ಯ ಮಾಡುವುದರಲ್ಲಿಯೂ ಪ್ರಖ್ಯಾತಿ ಪಡೆದವರಾಗಿದ್ದಾರೆ. ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಮಾದಮ್ಮಗೆ ಇದೀಗ ರಾಜ್ಯ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿದೆ.
ಮಾದಮ್ಮನವರು ಶಿಕ್ಷಣ ಹಾಗೂ ಮೂಲಸೌಕರ್ಯದಿಂದ ವಂಚಿತರಾಗಿದ್ದರು. ಆದರೂ ಅವರು 40 ವರ್ಷಗಳ ಹಿಂದೆಯೇ ಸಮಾಜಸೇವಕ ಡಾ.ಸುದರ್ಶನ್ ಜೊತೆಗೂಡಿ ಸೋಲಿಗ ಅಭಿವೃದ್ಧಿ ಸಂಘಟನೆ, ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಗಟ್ಟಿಗಿತ್ತಿಯಾಗಿದ್ದರು. ರಾಜ್ಯಾದ್ಯಂತ ಪ್ರವಾಸ, ಮಹಿಳಾ ಸಮುಖದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೋಲಿಗರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದ ಮಾದಮ್ಮ ಅವರನ್ನು ಈ ಬಾರಿ ಆಯ್ಕೆ ಸಮಿತಿಯು ಹುಡುಕಿ ಪ್ರಶಸ್ತಿ ಘೋಷಣೆ ಮಾಡಿದೆ.
ಮಾದಮ್ಮಗೆ ರಾಜ್ಯೋತ್ಸವ ಪ್ರಶಸ್ತಿ
ಮಾದಮ್ಮನವರು ಕೇವಲ ಸಂಘಟನೆ, ಹೋರಾಟದಲ್ಲಿ ಅಷ್ಟೇ ಅಲ್ಲ. ಹೆರಿಗೆ ಮಾಡುವುದರಲ್ಲೂ ಕೌಶಲ್ಯತೆಯನ್ನು ಹೊಂದಿದ್ದಾರೆ. ಇಲ್ಲಿಯವರೆಗೆ 2 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಯಶಸ್ಸು ಇವರದ್ದಾಗಿದೆ. ಜೊತೆಗೆ ಇವರು ನಾಟಿ ವೈದ್ಯದಲ್ಲೂ ಪರಿಣತಿ ಹೊಂದಿದ್ದು, ಹಲವಾರು ರೋಗ-ರುಜಿನಗಳಿಗೆ ಪರಿಣಾಮಕಾರಿ ಮದ್ದನ್ನು ಕೊಟ್ಟಿದ್ದಾರೆ. ಇನ್ನು ಅದ್ಭುತವಾಗಿ ಗಾಯನ ಪ್ರತಿಭೆ ಹೊಂದಿರುವ ಮಾದಮ್ಮ ಸೋಲಿಗ ಸಂಸ್ಕೃತಿ ಅನಾವರಣಗೊಳಿಸುವ ಗಾಯನ, ಗೊರುಕನ ನೃತ್ಯದಲ್ಲೂ ಪ್ರಖ್ಯಾತಿ ಪಡೆದಿದ್ದಾರೆ. ಚಾಮರಾಜನಗರದ ಜಲ್ಲೆಯಲ್ಲಿ ಮಾದಮ್ಮ, ಹೊಸಪೋಡಿನ ಶಿವನೇಗೌಡ ಬಳಿಕ ಜೀರಿಗೆಗದ್ದೆಯ ಮಾದಮ್ಮಗೆ ಕಾರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯೊಂದು ತಾನಾಗಿಯೇ ಹುಡುಕಿಕೊಂಡು ಬಂದಿದೆ.

67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳು, ಸಂಸ್ಥೆಗಳಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಸರ್ಕಾರ ಅನುಸರಿಸಿಕೊಂಡು ಬಂದಿದೆ. ಈ ಬಾರಿ ಚಲನಚಿತ್ರ ಕ್ಷೇತ್ರದಲ್ಲಿ ದತ್ತಣ್ಣ, ಅವಿನಾಶ್, ಕಿರುತೆರೆ ಕ್ಷೇತ್ರದಲ್ಲಿ ಸಿಹಿಕಹಿ ಚಂದ್ರು, ಲೇಖಕ ಅ.ರಾ. ಮಿತ್ರಾ ಸೇರಿದಂತೆ 67 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ.












Click it and Unblock the Notifications