ಡಾ. ಬಿ.ಆರ್ ಅಂಬೇಡ್ಕರ್ ನಿಂದನೆ ಆರೋಪ: ಸಿಮ್ಸ್ ಡೀನ್ ಮುಖಕ್ಕೆ ಮಸಿ, ಕಾರು ಜಖಂ
ಚಾಮರಾಜನಗರ, ಮೇ 19: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಸಂಜೀವ್ ಕುಮಾರ್ ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿರುವ ಘಟನೆ ಇಂದು ಚಾಮರಾಜನಗರದಲ್ಲಿ ನಡೆದಿದೆ.
ಸಿಮ್ಸ್ ಡೀನ್ ಡಾ. ಸಂಜೀವ್ ಕುಮಾರ್ ರೆಡ್ಡಿ ಅವರನ್ನು ಮುತ್ತಿಗೆ ಹಾಕಿದ ಬಿಎಸ್‌ಪಿ ಹಾಗೂ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಸಂಜೀವ್ ಕುಮಾರ್ ಅವರ ಕಾರನ್ನು ಜಖಂಗೊಳಿಸಿ ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.

ವಿಚಾರ ಅರಿತ ಪೊಲೀಸರು ದೌಡಾಯಿಸಿ ಡೀನ್ ಅವರನ್ನು ಪ್ರತಿಭಟನಾಕಾರರಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಳಿಕ, ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಟೈರ್ ಸುಟ್ಟು ರಸ್ತೆ ತಡೆ ನಡೆಸಿ ಡೀನ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಿಡಿಕಾರಿದರು.
ಗುರುವಾರ ಸಂಜೆ ತನ್ನ ಹಾಗೂ ಡಾ.ಗಿರೀಶ್ ಪಾಟೀಲ್, ಡಾ.ಹರ್ಷ ಸಮ್ಮುಖದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಡಾ.ಸಂಜೀವ್ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಾರುತಿ ಚಾಮರಾಜನಗರ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ.

ಆರೋಪ ಏನು..?
ಹಲವು ತಿಂಗಳುಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ವೇತನ ಆಗಿಲ್ಲ. ಇದನ್ನು ಕೇಳಲು , ಗುರುವಾರ ಡೀನ್ ಕೊಠಡಿಗೆ ತೆರಳಿದ್ದ ವೇಳೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಸಂಜೀವ್ ಕುಮಾರ್ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications