ಶಾಲೆಯಲ್ಲೆ ಕುಸಿದು ಬಿದ್ದ 8 ವರ್ಷದ ಬಾಲಕಿಗೆ ಹೃದಯಾಘಾತ!, ಮಗಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಿಗೆ ಆಘಾತ
ಚಾಮರಾಜನಗರ, ಜನವರಿ 06: ಹದಿ ಹರೆಯದವರಲ್ಲಿ ಇತ್ತೀಚೆಗೆ ಹೃದಯಾಘಾತ ಸಂಭವಿಸಿ, ಸಾವು ನೋವು ವರದಿ ಆಗಿದ್ದನ್ನು ನೋಡಿದ್ದೇವೆ. ಆದರೆ ಚಾಮರಾಜನಗರದಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ 08 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಸೋಮವಾರ ನಡೆದಿದೆ. ಮಗಳು ಕಳೆದುಕೊಂಡು ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಸೈಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ತೇಜಸ್ವಿನಿ ಸೋಮವಾರವು ಎಂದಿನಂತೆ ಶಾಲೆಗೆ ತೆರಳಿದ್ದಾರೆ. ಈ ವೇಳೆ ಕೊಠಡಿಯಲ್ಲಿದ್ದಾಗ ಆಕೆ ದಿಢೀರನೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯ ಕೈ ಕಾಲು ಉಜ್ಜಿ ಎಬ್ಬಿಸಲು ಯತ್ನಿಸಿದರೂ ಆಗಿಲ್ಲ.

ಶಾಲಾ ಸಿಬ್ಬಂದಿ ತಕ್ಷಣವೇ ವಿದ್ಯಾರ್ಥಿನಿ ತೇಜಸ್ವಿನಿಯನ್ನು ಸ್ಥಳೀಯ ಜೆಎಸ್‌ಎಸ್ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದಾರೆ. ವಿದ್ಯಾರ್ಥಿನಿ ಪರಿಶೀಲಿಸಿದ ವೈದ್ಯರು ಆಕೆಗೆ ಹೃದಯಾಘಾತ ಆಗಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಶಾಲೆ ಮುಗಿಸಿ ಎಂದಿನಂತೆ ಮಗಳ ಮನೆಗೆ ಹಿಂತಿರುತ್ತಾಳೆ ಎಂದು ಕೊಂಡಿದ್ದ ಮೃತ ಬಾಲಕಿ ಪೋಷಕರಿಗೆ ಈ ಸುದ್ದಿಯಿಂದ ಬರ ಸಿಡಿಲು ಬಡಿದಂತಾಗಿದೆ.
ಪೋಷಕರ ಆಕ್ರಂದನ: ಸ್ಥಳಕ್ಕೆ ಪೊಲೀಸ್ ಭೇಟಿ
ಮಗಳು ಶಾಲೆಯಲ್ಲಿ ಮೃತಪಟ್ಟಿದ್ದಾಳೆ ಎಂಬ ವಿಷಯ ಕೇಳುತ್ತಿದ್ದಂತೆ ಪೋಷಕರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಚೀರಾಡುತ್ತ, ಕಣ್ಣೀರಿಡುತ್ತಲೇ ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಮಗಳ ಮುಖ ನೋಡುತ್ತಿದ್ದಂತೆ ಆಸ್ಪತ್ರೆಯಲ್ಲಿಯೇ ಪೋಷಕರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ. ಬಾಲಕಿ ಕುಸಿದು ಬಿದ್ದ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಕುಟುಂಬಸ್ಥರು, ಪ್ರಾಂಶುಪಾಲರು ಪರಿಶೀಲಿಸಿದ್ದಾರೆ. ಶಾಲಾ ಸಿಬ್ಬಂದಿ ಇಂದಿನ ಘಟನೆಗೆ ಮರುಕ ವ್ಯಕ್ತಪಡಿಸಿದೆ. ದಿನವಿಡೀ ಸಖತ್ ಆಕ್ಷಿವ್ ಆಗಿಯೇ ಇರುತ್ತಿದ್ದ ವಿದ್ಯಾರ್ಥಿನಿ ದಿಢೀರ್ ಕುಸಿದು ಬಿದ್ದರು, ಮೃತಪಟ್ಟರು ಎಂದರೆ ಶಾಲಾ ಆಡಳಿತ ಸಿಬ್ಬಂದಿ, ಬಾಲಕಿ ಮನೆಯ ಅಕ್ಕಪಕ್ಕದ ನಿವಾಸಿಗಳು ಆ ಗಳಿಗೆ ನಂಬಲು ನಿರಾಕರಿಸಿದ್ದಾರೆ.
ಹರಿಯದವರಿಗೆ, ಮಧ್ಯ ವಯಸ್ಕರಲ್ಲಿಯೂ ಈ ಸಮಸ್ಯೆ
ಬೀಡಿ, ಸಿಗರೇಟ್, ಆಲ್ಕೋಹಾಲ್ ಸೇವನೆ ಮಾಡುವವರಿಗೆ, ದುರಭ್ಯಾಸ ಇರುವವರಿಗೆ, ತೀವ್ರ ಹೊಟ್ಟೆ ಬೊಜ್ಜು ಸೇರಿದಂತೆ ಇನ್ನಿತರ ಕಾರಣಗಳಿಂದ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೃದಯಾಘಾತ ಸಂಭವಿಸುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಆರೋಗ್ಯವಂತ ವ್ಯಕ್ತಿಗಳಿಗೂ, 20-30ರ ವಯೋಮಾನದವರಿಗೂ ಹೃದಯಸ್ತಂಭನ ಕಾಯಿಲೆಗಳು ಎದುರಾಗಿ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಆರೋಗ್ಯವಂತ ವ್ಯಕ್ತಿಗಳೇ ಹೃದಯಾಘಾತಕ್ಕೆ ಬಲಿಪಶು ಆಗುತ್ತಿದ್ದಾರೆ. ವಿದ್ಯಾಭ್ಯಾಸ ಮಾಡಿ, ಹೆಚ್ಚು ಅಂಕ ಗಳಿಸಿ ಎಲ್ಲರಿಂದಲೂ ಶಬ್ಬಾಶ್‌ಗಿರಿ ಪಡೆಯಬೇಕಿದ್ದ, ಬಾಳಿ ಬದುಕಬೇಕಿದ್ದ ಬಾಲಕಿ ದಿಢೀರನೇ ವಿಧಿಯ ಕ್ರೂರತ್ವಕ್ಕೆ ಬಲಿಯಾಗಿದ್ದಾಳೆ. ಆಕೆಯ ಪೋಷಕರು ಮಗಳ ಮೇಲಿಟ್ಟುಕೊಂಡಿದ್ದ ಆಶಾ ಗೋಪುವರವೇ ಕಳಚಿಬಿದ್ದಂತಾಗಿದೆ.












Click it and Unblock the Notifications