ಕಾವೇರಿ ವಿವಾದ: ಚಾಮರಾಜನಗರದಲ್ಲಿ ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟಿಸಿದ ಹೋರಾಟಗಾರರು
ಚಾಮರಾಜನಗರ, ಅಕ್ಟೋಬರ್, 30: ಇಷ್ಟು ದಿನ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು ಒಂಟಿ ಕಾಲಿನ ಮೇಲೆ ನಿಂತು ಪ್ರತಿಭಟಿಸಿದರು.
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಾವೇರಿ ನೀರು ನಿರ್ವಹಣಾ ಮಂಡಳಿಯು ಕರ್ನಾಟಕದ ಪರ ಆದೇಶ ಕೊಡಬೇಕು. ವಸ್ತುನಿಷ್ಠ ಆದೇಶ ಕೊಡಬೇಕು, ನಮಗೇ ನೀರಿಲ್ಲ, ತಮಿಳುನಾಡಿಗೆ ಹೇಗೆ ನೀರು ಕೊಡಲು ಸಾಧ್ಯ ಎಂದು ಆಕ್ರೋಶ ಹೊರಹಾಕಿದರು.

ಕಳೆದ 48 ದಿನಗಳಿಂದ ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದು, ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಬಾರದೆಂದು ಆಗ್ರಹಿಸುತ್ತಲೇ ಇದ್ದಾರೆ.
ಕಪ್ಪು ಬಾವುಟ ಪ್ರದರ್ಶಿಸಿ ಹೋರಾಟ
ಇನ್ನು ರಾಜ್ಯದ ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಇತ್ತೀಚೆಗಷ್ಟೇ ಧರಣಿ ನಡೆಸಿದ್ದು, ಈ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ವಿಜಯದಶಮಿಯನ್ನು ಕರಾಳ ದಿನವನ್ನಾಗಿ ಹೋರಾಟಗಾರರು ಆಚರಿಸಿದ್ದರು.
ನಗರದ ಜೆ.ಸಿ.ವೃತ್ತದಲ್ಲಿ ಜಮಾಯಿಸಿದ್ದ ಚಳವಳಿಗಾರರು, ಕಪ್ಪು ಬಾವುಟ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಜೊತೆಗೂಡಿದ ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಧರಣಿ ಸತ್ಯಾಗ್ರಹ ಮುಂದುವರೆಸಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ತಮಿಳುನಾಡಿಗೆ ಕರ್ನಾಟಕದಿಂದ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸರ್ಕಾರ ನಿರ್ಣಯ ಕೈಗೊಂಡಿರುವುದು ಬೆಳಕಿಗೆ ಬಂದಿದ್ದು, ಇದನ್ನು ಕಠಿಣ ಶಬ್ಧಗಳಿಂದ ಧಿಕ್ಕರಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಿದೆ. ಈ ಬಗ್ಗೆ ಬಹಳ ಸಮಾಧಾನ ಚಿತ್ತರಾಗಿ ಮಾತನಾಡುತ್ತಾರೆ. ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಹರಿಸುವ ಆದೇಶ ನಮಗೆ ಸಮಾಧಾನಕರ ಸಂಗತಿ ಎಂದಿದ್ದಾರೆ. ಎಂದರೆ, ರೈತರ ಹಿತ ರಕ್ಷಣೆಗಿಂತ ಸರ್ಕಾರ ಅಧಿಕಾರದ ರಕ್ಷಣೆ ಮಾಡಿಕೊಳ್ಳುವುದೇ ಮುಖ್ಯ ಎಂದಂತಾಯಿತು. ಆದ್ದರಿಂದ ನಾವಿದನ್ನು ಕಟು ಶಬ್ಧಗಳಿಂದ ಖಂಡಿಸುವುದಾಗಿ ಹೇಳಿದ್ದರು.
ಈಗಾಗಲೇ ಕಾವೇರಿ ಕುಟುಂಬದ ಪ್ರೊ.ಕೆ.ಸಿ.ಬಸವರಾಜು ಅವರು ತಿಳಿಸಿರುವಂತೆ ತೀರ್ಪಿನಲ್ಲೇ ಸಂಕಷ್ಟ ಸೂತ್ರವೂ ಇದ್ದು, ಅದರಲ್ಲಿ ಶೇಕಡಾ 50ರಿಂದ 60ರಷ್ಟು ಮಳೆ ಕೊರತೆಯಾದಾಗ ಮಳೆ ನೀರಿನ ಲಭ್ಯತೆ ಆಧರಿಸಿ ಎರಡೂ ರಾಜ್ಯಗಳು ನೀರಿನ ಹಂಚಿಕೆ ಮಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಇದನ್ನು ಸರ್ಕಾರ ಮರೆಮಾಚಿದ್ದು, ತಮಿಳುನಾಡಿಗೆ ಬೇಕೆಂದಾಗಲೆಲ್ಲ ನೀರು ಹರಿಸುತ್ತಲೇ ಬಂದಿದೆ. ಹಾಗೇ ಕಾವೇರಿಕೊಳ್ಳದ ರೈತರಿಗೆ ನಿರಂತರ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಕಿಡಿಕಾರಿದ್ದರು.
ಪ್ರಸ್ತುತ ಸನ್ನಿವೇಶದಲ್ಲಿ ತಮಿಳುನಾಡಿನಲ್ಲಿ ಸತತ ಮಳೆಯಾಗುತ್ತಿದ್ದು, ನೀರಿನ ಪ್ರಮಾಣ ಹೆಚ್ಚಾಗಿದೆ. ಆದರೆ, ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ ಸರ್ಕಾರದ ಕ್ರಮದಿಂದಾಗಿ ಈ ಭಾಗದ ರೈತರು ಹೊಸದಾಗಿ ನಾಟಿ ಮಾಡಲಾಗಿಲ್ಲ. ಬೆಳೆದು ನಿಂತಿರುವ ಬೆಳೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ನೋವಿನ ಸ್ಥಿತಿಯಲ್ಲೂ ಕೂಡ ರಾಜ್ಯ ಸರ್ಕಾರ 30ನೇ ತಾರೀಖಿನ ತನಕ 3,000 ಕ್ಯೂಸೆಕ್‌ನಂತೆ ನಿತ್ಯ ನೀರು ಹರಿಸುತ್ತಲೇ ಇದೆ.
ಈ ಕೂಡಲೇ ಸಂಕಷ್ಟ ಸೂತ್ರದಲ್ಲಿರುವಂತೆ ನೀರು ಹಂಚಿಕೆ ಮಾಡಿ ಎಂದು ರಾಜ್ಯ ಸರ್ಕಾರ ಅಧಿಕೃತ ಕ್ರಮ ಕೈಗೊಳ್ಳಬೇಕಿದೆ. ಎರಡೂ ರಾಜ್ಯಗಳ ವಸ್ತುಸ್ಥಿತಿ ಅಧ್ಯಯನವಾಗಬೇಕು. ಅದಕ್ಕಾಗಿ ನೀರಾವರಿ ಮತ್ತು ಕಾನೂನು ತಜ್ಞರ ಆಯೋಗ ರಚನೆಯಾಗಿ ಸುಪ್ರೀಂಕೋರ್ಟ್ ಮುಂದೆ ಕೋರಿಕೆ ಸಲ್ಲಿಸಿದಾಗ ವಸ್ತುಸ್ಥಿತಿ ಅಧ್ಯಯನ ಮಾಡಿ, ಇರುವ ನೀರಿನಲ್ಲಿ ಹಂಚಿಕೆ ಮಾಡಿಕೊಳ್ಳಲು ಬದ್ಧರಾಗುವಂತೆ ಎರಡೂ ರಾಜ್ಯಗಳಿಗೆ ಉನ್ನತ ಪ್ರಾಧಿಕಾರ ಆದೇಶಿಸಲು ಸಾಧ್ಯವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಅಭಿಪ್ರಾಯಪಟ್ಟಿದ್ದರು.
ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನವೆಂಬರ್ 4 ರಿಂದ ಆರಂಭವಾಗುವ ವಿಧಾನಸಭೆ ಉಭಯ ಸದನಗಳಲ್ಲಿ ಚರ್ಚೆಯಾಗಿ ಸರ್ಕಾರದ ನಿಲುವು ಪ್ರಕಟಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ತಮಿಳುನಾಡಿನಲ್ಲಿ ಬಹುತೇಕ ಹೊಸ ಯೋಜನೆಗಳನ್ನು ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಯಾವ ಪೂರ್ವಾನುಮತಿಯೂ ಇಲ್ಲದಂತೆ ಆರಂಭಿಸಿ ಪೂರ್ಣಗೊಳಿಸುತ್ತಿದ್ದಾರೆ. ಅವರು ಎಲ್ಲದರಲ್ಲೂ ಮುಂದಿದ್ದರೆ ನಾವು ಕರ್ನಾಟಕದವರು ಎಲ್ಲದರಲ್ಲೂ ಹಿಂದುಳಿಯುತ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
ಜಿಲ್ಲಾ ರೈತ ಹಿತಕ್ಷಣ ಸಮಿತಿ ಸೇರಿದಂತೆ ಎಲ್ಲಾ ಪ್ರಗತಿಪರ ಸಂಘಟನೆಗಳು ಕೂಡಿ ಪ್ರತಿಭಟನಾ ಧರಣಿ ಆರಂಭಿಸಿ 50 ದಿನಗಳೆದರೂ ಕೂಡ ರಾಜ್ಯ ಸರ್ಕಾರ ಹೋರಾಟಗಾರರನ್ನು ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವನ್ನು ತೋರಿಲ್ಲ. ಇದನ್ನು ನಾವು ಮೊದಲು ಖಂಡಿಸುತ್ತೇವೆ ಎಂದಿದ್ದರು.
ಕಾನೂನು ಹಾಗೂ ನೀರಾವರಿ ತಜ್ಞರ ಸಂಘಟಿತ ಹೋರಾಟವಿಲ್ಲದೆ ಇದುವರೆಗೂ ನಡೆದಿದ್ದ ಕಾವೇರಿ ಚಳವಳಿಗೆ ಇದೀಗ ಒಂದು ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿದೆ. ಏಕೆಂದರೆ ಸ್ವತಃ ನಿವೃತ್ತ ನ್ಯಾಯಮೂರ್ತಿ ಸಂತೋಷ ಹಗ್ಡೆ ಅವರೇ ರಾಜಕೀಯ ಹೊರತುಪಡಿಸಿದ ಕಾನೂನು ಹೋರಾಟದ ನೇತೃತ್ವ ವಹಿಸುವುದಾಗಿ ತಿಳಿಸಿದ್ದು, ಚಳವಳಿಗಾರರಿಗೆ ಆನೆ ಬಲ ಬಂದಂತಾಗಿದೆ ಎಂದಿದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಉಭಯ ಸದನ ಕರೆದು ಜಂಟಿಯಾಗಿ ಚರ್ಚೆ ನಡೆಸಿ ಸಂಕಷ್ಟ ಸೂತ್ರದ ಒತ್ತಾಯ ಮಂಡಿಸಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದ ಅವರು, ಇದಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.












Click it and Unblock the Notifications