ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ; ರಾಜ್ಯ ಸರ್ಕಾರದಿಂದ ಡಾ.ರಾಜ್‌ಕುಮಾರ್ ಅವರಿಗೆ ಗೌರವ ನಮನ
ಚಾಮರಾಜನಗರ, ಏಪ್ರಿಲ್ 24: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ಏಪ್ರಿಲ್ 24) ಸಚಿವ ಸಂಪುಟ ಸಭೆಯನ್ನು ಆಯೋಜನೆ ಮಾಡಲಾಗಿದೆ. ಈ ವೇಳೆ ರಾಜ್ಯ ಸರ್ಕಾರವು ನಟ ಡಾ.ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದೆ.
ಸಚಿವ ಸಂಪುಟ ಸಭೆಯ ಸಭಾಂಗಣದ ಪಕ್ಕದಲ್ಲಿ ಸಿದ್ಧಪಡಿಸಿರುವ ಮಾಧ್ಯಮಗೋಷ್ಠಿಯಲ್ಲಿ ರಾಜ್‌ಕುಮಾರ್ ಅವರ ಫೋಟೊ ಇಟ್ಟು ಪುಷ್ಪಾಲಂಕಾರ ಮಾಡಲಾಗಿದೆ. ಈ ಮೂಲಕ ಜನ್ಮ ದಿನ ಹಿನ್ನೆಲೆ ವರನಟ ಡಾ.ರಾಜ್‌ಕುಮಾರ್ ಅವರನ್ನು ಗೌರವಿಸಲಾಗಿದೆ. ಅದರಲ್ಲೂ ರಾಜ್‌ಕುಮಾರ್ ಅವರು ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯವರೇ ಆಗಿರುವುದು ವಿಶೇಷ.

ಮಲೆಮಹದೇಶ್ವರದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಸಚಿವ ಸಂಪುಟ ಸಭೆಗೆ ಚಾಮರಾಜನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಭೆ ನಡೆಸಲು ವಜ್ರಮಲೆ ವಸತಿ ಗೃಹದ ಎದುರಿನ ಆವರಣದಲ್ಲಿ ಜರ್ಮನ್ ಟೆಂಟ್ ಅಳವಡಿಕೆ ಮಾಡಲಾಗಿದೆ. ಇದರಿಂದ ಬಿಸಿಲು, ಮಳೆ ಬಂದರೂ ಸಭೆಗೆ ಯಾವುದೇ ರೀತಿಯ ಅಡ್ಡಿಯಾಗುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಆದ್ದರಿಂದ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.
ಅದರಲ್ಲೂ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಆಗಲಿದ್ದು, ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಅಂತಲೂ ಹೇಳಲಾಗುತ್ತದೆ.
ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಹೆಚ್.ಸಿ ಮಹದೇವಪ್ಪ, ಕೆ ವೆಂಕಟೇಶ್ , ಲಕ್ಷ್ಮಿ ಹೆಬ್ಬಾಳ್ಕರ್ ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮಹದೇಶ್ವರರ ಇತಿಹಾಸ ಸಾರುವ ಮ್ಯೂಸಿಯಂ, 376 ಕೊಠಡಿಗಳ ವಸತಿ ಗೃಹ, 1 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ. ಸಂಜೆ ವೇಳೆಗೆ ಸಿಎಂ ಅಧ್ಯಕ್ಷತೆಯಲ್ಲಿ ಮಲೆಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಲಿದೆ. ಬಳಿಕ ಮಹದೇಶ್ವರ ಬೆಟ್ಟದಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜಕಾರಣಿಗಳು ಜಿಲ್ಲೆಯೊಂದಕ್ಕೆ ಭೇಟಿ ಕೊಡುವುದು ಹಾಗೂ ಅದೇ ಸಂದರ್ಭದಲ್ಲಿ ಅಧಿಕಾರವನ್ನು ಕಳೆದುಕೊಳ್ಳುವುದು ಕಾಕತಾಳೀಯ. ಆದರೆ ಇಂತಹ ಕಾಕತಾಳೀಯ ಬೆಳವಣಿಗೆಗೆ ಚಾಮರಾಜನಗರ ತುತ್ತಾಗಿತ್ತು. 1980 ರಲ್ಲಿ ಚಾಮರಾಜನಗರಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ದಿ. ದೇವರಾಜ ಅರಸ್ ಅವರು ಭೇಟಿ ಕೊಟ್ಟಿದ್ದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ ಅವರು ಚಾಮರಾಜನಗರಕ್ಕೆ ಭೇಟಿ ಕೊಟ್ಟ ಆರೇ ತಿಂಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದರು.
ದೇವರಾಜ ಅರಸು ಬಳಿಕ 1982ರಲ್ಲಿ ಚಾಮರಾಜನಗರ ಜಿಲ್ಲೆಗೆ ದಿವಂಗತ ಆರ್ ಗುಂಡೂರಾವ್ ಭೇಟಿ ಕೊಟ್ಟಿದ್ದರು. ಆದರೆ ಇವರು ಜಿಲ್ಲೆಗೆ ಭೇಟಿ ಕೊಟ್ಟದ ಬಳಿಕ ಅಧಿಕಾರವನ್ನು ಕಳೆದುಕೊಂಡರು. ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ರಾಮಕೃಷ್ಣ ಹೆಗ್ಗಡೆ ಅವರು ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು. ಇವರ ರಾಜೀನಾಮೆಗೂ ಹಾಗೂ ಚಾಮರಾಜನಗರ ಜಿಲ್ಲೆಯ ಭೇಟಿಗೂ ಸಂಬಂಧ ಕಲ್ಪಿಸಲಾಗಿತ್ತು.
1990ರಲ್ಲಿ ವೀರೇಂದ್ರ ಪಾಟೀಲ್ ಅವರಯ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು. ಆದರೆ ನಂತರದಲ್ಲಿ ಅವರು ಅನಾರೋಗ್ಯ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು.
ಸರಣಿಯಾಗಿ ಮುಖ್ಯಮಂತ್ರಿಗಳ ರಾಜೀನಾಮೆ ಹಿನ್ನೆಲೆ ಚಾಮರಾಜನಗರ ಭೇಟಿ ಕುರಿತಾಗಿ ಹಲವು ರೀತಿಯಲ್ಲಿ ವದಂತಿಗಳು ಹರಿದಾಡತೊಡಗಿದವು. ಜಿಲ್ಲೆಗೆ ಭೇಟಿ ಕೊಡದಂತೆ ಮುಖ್ಯಮಂತ್ರಿಗಳ ಆಪ್ತರೇ ಸಲಹೆ ಕೊಡಲು ಶುರು ಮಾಡಿದರು. ಈ ಹಿನ್ನೆಲೆ ಅಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್ ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್‌ಡಿ ದೇವೇಗೌಡ, ಜೆ ಎಚ್ ಪಟೇಲ್, ಎಸ್ ಎಂ ಕೃಷ್ಣ ಹಾಗೂ ಧರಂ ಸಿಂಗ್ ಅವರು ಈ ಜಿಲ್ಲೆಗೆ ಭೇಟಿ ಕೊಟ್ಟಿರಲಿಲ್ಲ.
ಆದರೆ, ಇದೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಯನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಂಡಿದ್ದಾರೆ. ಈ ಮೂಲಕ ಮೌಢ್ಯ ಪ್ರತಿಪಾದಿಸುವವರಿಗೆ ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications