ಚಾಮರಾಜನಗರ: ಆನೆ ಮೇಲೆ ಕುಳಿತು BSP ಅಭ್ಯರ್ಥಿ ಚುನಾವಣಾ ಪ್ರಚಾರ
ಚಾಮರಾಜನಗರ, ಏಪ್ರಿಲ್ 29: ಚುನಾವಣಾ ಕಣ ದಿನೇದಿನೇ ರಂಗೇರುತ್ತಿದ್ದು ಅಭ್ಯರ್ಥಿಗಳ ವಿಭಿನ್ನ ಪ್ರಚಾರಕ್ಕೆ ಇಳಿದಿದ್ದಾರೆ. ಅಭ್ಯರ್ಥಿಗಳ ಕುಟುಂಬಸ್ಥರು ಅಖಾಡಕ್ಕೆ ಇಳಿದು ಮನೆ-ಮನೆಗೆ ಭೇಟಿ ಕೊಡುತ್ತಿದ್ದು ಚಾಮರಾಜನಗರ ಬಿಎಸ್‌ಪಿ ಅಭ್ಯರ್ಥಿ ಒಂದು ಹೆಜ್ಜೆ ಮುಂದೆ ಹೋಗಿ ಆನೆ ಸವಾರಿ ಮಾಡುತ್ತಿದ್ದಾರೆ.
ಚಾಮರಾಜನಗರ ಬಿಎಸ್‌ಪಿ ಅಭ್ಯರ್ಥಿ ಹ.ರಾ.ಮಹೇಶ್ ಆನೆ ಮಾದರಿ ಪ್ರಚಾರ ರಥವನ್ನು ನಿರ್ಮಾಣ ಮಾಡಿಸಿಕೊಂಡಿದ್ದು, ಆನೆ ಮೇಲೆ ಕುಳಿತು ಭರ್ಜರಿ ಪ್ರಚಾರ ನಡೆಸಿ ಗಮನ ಸೆಳೆಯುತ್ತಿದ್ದಾರೆ. 15 ಅಡಿ ಎತ್ತರದ ಆನೆ ಮೇಲೆ ಕುಳಿತು ಮತಬೇಟೆ ನಡೆಸಲಿದ್ದು ಮತದಾರರು ಒಂದು ಕ್ಷಣ ಆನೆ ಕಂಡು ಮುದಗೊಳ್ಳುವ ಜೊತೆಗೆ ನಿಂತು ಅಭ್ಯರ್ಥಿ ಮಾತು ಕೇಳಿ ಹೋಗುವಷ್ಟರ ಮಟ್ಟಿಗೆ ಆನೆ ಪ್ರಚಾರ ರಥ ವರ್ಕೌಟ್ ಆಗುತ್ತಿದೆ.

ಹಳ್ಳಿ-ಹಳ್ಳಿಗಳಿಗೆ ಆನೆ ಪ್ರಚಾರ ರಥ ಲಗ್ಗೆ ಇಡುತ್ತಿದ್ದು ಒಟ್ಟಿನಲ್ಲಿ ವಿಭಿನ್ನವಾಗಿ ಮತ ಬೇಟೆ ನಡೆಸುತ್ತಿದ್ದಾರೆ. ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿರುವ ಚಾಮರಾಜನಗರದಲ್ಲಿ ಗಣನೀಯವಾಗಿ ಬಿಎಸ್ಪಿ ಅಭ್ಯರ್ಥಿ ಗುರುತಿಸಿಕೊಂಡಿದ್ದಾರೆ.
ಅಭ್ಯರ್ಥಿಗೆ ಆಮೀಷ ಆಡಿಯೋ: ಮೂವರ ವಿರುದ್ಧ ಕೇಸ್ ದಾಖಲು
ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಅವರಿಗೆ ನಾಮಪತ್ರ ವಾಪಾಸ್ ಪಡೆಯುವಂತೆ ಆಮಿಷ ಒಡ್ಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮೂವರು ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮಣ್ಣ, ನಟರಾಜು, ಸುದೀಪ್ ಎಂದು ಆಡಿಯೋದಲ್ಲಿ ಉಲ್ಲೇಖಗೊಂಡ ಮೂವರು ಹೆಸರುಗಳ ಮೇಲೆ ಅಪರಿಚಿತರು ಎಂದು ನಮೂದಿಸಿ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯೋಗಾನಂದ ಮೌಖಿಕ ಆದೇಶದ ಮೇರೆಗೆ ಜಯಣ್ಣ ಎಂಬವರು ದೂರು ಕೊಟ್ಟಿದ್ದು ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.











Click it and Unblock the Notifications