ನಿಷೇಧದ ನಡುವೆಯೂ ಕಾವೇರಿ ನದಿಯಲ್ಲಿ ತೆಪ್ಪದ ಸವಾರಿ
ಚಾಮರಾಜನಗರ, ಅಕ್ಟೋಬರ್ 28: ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಿತ್ತು. ಕಳೆದ ತಿಂಗಳಿನಿಂದ ಪ್ರವಾಸಿ ತಾಣಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ಅನ್ ಲಾಕ್ ಮಾಡಲಾಗಿದೆ.
ಇದೀಗ ದಸರಾ ಹಿನ್ನೆಲೆಯಲ್ಲಿ ಜನರು ಪ್ರವಾಸಿ ತಾಣಗಳತ್ತ ತೆರಳುತಿದ್ದಾರೆ. ಮಾಸ್ಕ್ ಧರಿಸಿ, ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದರೂ ಜನರು ಜಾಲಿ ರೈಡ್ ಹೋಗಿ ಜನಜಂಗುಳಿ ಆಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ನಿತ್ಯವೂ ಹರಿದು ಬರುತ್ತಿದೆ. ಈ ಆಗಮನವನ್ನೇ ಕಾದಿದ್ದ ಸ್ಥಳೀಯರು ಪ್ರವಾಸಿಗರಿಗೆ ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಇವರು ತೆಪ್ಪದ ಮೂಲಕ ಪ್ರವಾಸಿಗರಿಗೆ ಭರಚುಕ್ಕಿ, ಮಧ್ಯ ರಂಗನಾಥಸ್ವಾಮಿ, ಶಿಂಷಾದ ಮಾರಮ್ಮ, ವೆಸ್ಲಿ ಸೇತುವೆ ತೋರಿಸುತ್ತಿದ್ದಾರೆ.

ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತವು ವರ್ಷಗಳ ಹಿಂದೆಯೇ ಇಲ್ಲಿ ತೆಪ್ಪದ ಸವಾರಿಯನ್ನು ನಿಷೇಧಿಸಿದೆ. ಆದರೂ ಇದನ್ನು ಉಲ್ಲಂಘಿಸಿ ಕೆಲವರು ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಇಲ್ಲಿ ಕನಿಷ್ಟ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಿಲ್ಲ.

ನೀರಿನಲ್ಲಿ ಚಲಿಸುವ ಯಾವುದೇ ವಾಹನ ಏರುವ ಪ್ರವಾಸಿಗರಿಗೆ ಕಡ್ಡಾಯವಾಗಿ ಲೈಫ್ ಜಾಕೆಟ್ ಗಳನ್ನು ನೀಡಲೇಬೇಕು. ಎಲ್ಲೆಡೆ ಈ ನಿಯಮ ಪಾಲಿಸಲಾಗುತ್ತಿದೆ. ಇಲ್ಲಿ ತೆಪ್ಪವೆರುವ ಪ್ರವಾಸಿಗರಿಗೆ ಲೈಫ್ ಜಾಕೆಟ್ ಗಳನ್ನು ಕೊಡುತ್ತಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತೆಪ್ಪ ಮುಳುಗಿ ಕಾವೇರಿಯಲ್ಲಿ ಜಲಸಮಾಧಿ ಆಗುವುದು ತಪ್ಪಿದ್ದಲ್ಲ. ಆದರೆ ಹಣ ಮಾಡುವ ಕಾರ್ಯದಲ್ಲಿ ತೊಡಗಿರುವ ತೆಪ್ಪದ ಮಾಲೀಕರು ಈ ಕುರಿತು ತಲೆ ಕೆಡಿಸಿಕೊಂಡಿಲ್ಲ.

ವಿಷಯ ತಿಳಿದ ಬಳಿಕ ಎಚ್ಚೆತ್ತ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಕಾನೂನು ಬಾಹಿರವಾಗಿ ತೆಪ್ಪ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications