ಹರದನಹಳ್ಳಿಯಲ್ಲಿ ಕೋಪದಿಂದ ದೇವಸ್ಥಾನ ಏರಿ ನಿಂತ ಬಸವ!
ಚಾಮರಾಜನಗರ, ಮಾರ್ಚ್ 17: ಗ್ರಾಮದಲ್ಲಿದ್ದ ಬಸವ ದೇಗುಲದ ಮೇಲೇರಿ ಕೋಪ ತಾಪ ಪ್ರದರ್ಶಿಸಿದ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲದಲ್ಲಿ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಸೋಮವಾರ ನಡೆಯಬೇಕಿದ್ದ ದಿವ್ಯಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂದೂಡಿತ್ತು. ಹೀಗಾಗಿ ತೇರಿನ ಮುಂದೆ ಹೆಜ್ಜೆ ಹಾಕುತ್ತಿದ್ದ ಬಸವನನ್ನು ಈ ಬಾರಿ ಬಿಟ್ಟು ಉತ್ಸವ ಮೂರ್ತಿಯನ್ನು ಮಾತ್ರ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿತ್ತು. ಆದರೆ ಮೆರವಣಿಗೆ ಮುಗಿಸಿ ದೇಗುಲಕ್ಕೆ ಹಿಂತಿರುಗುವಾಗ ದೇಗುಲದ ಚಾವಣಿ ಮೇಲೆ ಹತ್ತಿ ಬಸವ ನಿಂತಿತ್ತು. ಇದನ್ನು ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ.

ಈ ಘಟನೆ ಇದೀಗ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಸವ ಚಾವಣಿ ಮೇಲೇರಲು ಜಾಗವಿದ್ದು, ಆಗಾಗ್ಗೆ ಅಲ್ಲಿಗೆ ಹತ್ತಿದೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ರಥೋತ್ಸವ ರದ್ದಾಗಿದ್ದರಿಂದ ಬಸವನನ್ನು ಕರೆದೊಯ್ಯಲಿಲ್ಲ. ದೇವರು ದೇಗುಲಕ್ಕೆ ಬರುವ ವೇಳೆಗೆ ಬಸವ ಚಾವಣಿ ಮೇಲೇರಿ ಸ್ವಾಗತ ಕೋರಿದ್ದಾನೆ ಅಷ್ಟೆ" ಎಂದಿದ್ದಾರೆ ಕೆಲ ಗ್ರಾಮಸ್ಥರು. ಇನ್ನು ಕೆಲವರು, ಬಸವನನ್ನು ನಾವು ಉತ್ಸವ ಮೂರ್ತಿಯೊಂದಿಗೆ ಕರೆದೊಯ್ಯದೆ ಇದ್ದುದರಿಂದ ಕೋಪ ಪ್ರದರ್ಶಿಸಿದ್ದು, ಉತ್ಸವ ಮೂರ್ತಿಗೆ ಮಹಾ ಪೂಜೆಯಾದ ಬಳಿಕ ಕೆಳಗಿಳಿದು ಬಂತು ಎಂದು ಹೇಳಿದ್ದಾರೆ.












Click it and Unblock the Notifications