ಬಂಡೀಪುರ ಅರಣ್ಯಕ್ಕೆ ಲಂಟಾನ ಕಾಟ, ಪ್ರಾಣಿಗಳ ಪಾಡು ಕೇಳೋರ್ಯಾರು?

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 6: ಇತ್ತೀಚಿನ ವರ್ಷಗಳಲ್ಲಿ ಅರಣ್ಯಗಳಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳು ಹೂ ಬಿಟ್ಟು, ನಾಶವಾದ ಕಾರಣ ಅಲ್ಲಿ ಯಥೇಚ್ಛವಾಗಿ ಲಂಟಾನ, ಪಾರ್ಥೇನಿಯಂ ಹಬ್ಬಿದೆ. ಇದರಿಂದ ವನ್ಯಪ್ರಾಣಿಗಳಿಗೆ ತೀವ್ರ ತೊಂದರೆಯಾಗಿದೆ.

ಈ ಸಸ್ಯಗಳು ಇಡೀ ಅರಣ್ಯವನ್ನು ಆಕ್ರಮಿಸಿ ಬೆಳೆಯುವುದರಿಂದಾಗಿ ಹುಲ್ಲು ಸೇರಿದಂತೆ ಯಾವ ಸಸ್ಯವೂ ಬೆಳೆಯಲಾರದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಜಿಂಕೆ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಉಂಟಾಗುತ್ತಿದೆ.[ಅರಣ್ಯ ಅಧಿಕಾರಿಗಳಿಂದಲೇ ವಾಹನಶೆಡ್ ಗೆ ಕಾಡುಮರ ಬಳಕೆ!]

Bandipur national park full of lantana, threat to wild animals

ಮೇಲ್ನೋಟಕ್ಕೆ ಹಸಿರಿನಿಂದ ಅರಣ್ಯ ಕಂಗೊಳಿಸಿದರೂ ಲಂಟಾನದಿಂದಾಗಿ ಇತರೆ ಯಾವುದೇ ಸಸ್ಯಗಳು ಬೆಳೆಯಲಾರವು. ಅಲ್ಲದೆ ಚಿಕ್ಕಪುಟ್ಟ ಗಿಡ-ಮರಗಳನ್ನು ಆಕ್ರಮಿಸಿ ಕೊಳ್ಳುವುದರಿಂದ ಅವುಗಳು ಬೆಳವಣಿಗೆ ಕಾಣದೆ ಸಾವನ್ನಪ್ಪುತ್ತವೆ. ಇದರ ಅಡಿಯಲ್ಲಿ ಹುಲ್ಲು ಕೂಡ ಬೆಳೆಯುವುದಿಲ್ಲ. ಇದರಿಂದಾಗಿಯೇ ಮೇವು ಸಿಗದೆ ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ.

ಈ ಬಾರಿ ಮಳೆ ಸುರಿದಿದ್ದರಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಬಹುತೇಕ ಕೆರೆ-ಕಟ್ಟೆಗಳು ತುಂಬಿವೆ. ಪರಿಣಾಮ ಅರಣ್ಯದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದು. ಆದರೆ ಮೇವಿಗೆ ಮಾತ್ರ ಲಂಟಾನದಿಂದಾಗಿ ತೊಂದರೆ ತಪ್ಪಿದಲ್ಲ.[ಬಂಡೀಪುರದಲ್ಲಿ ಅರಣ್ಯಾಧಿಕಾರಿಗಳಿಗೆ ಜಿಂಕೆ ಮಾಂಸ, ಮದ್ಯ ಪೂರೈಸಿದರೆ?]

ಕೆಲವೇ ಕೆಲ ಭಾಗದಲ್ಲಿದ್ದ ಲಂಟಾನ ಮತ್ತು ಪಾರ್ಥೇನಿಯಂ ಬಹುತೇಕ ಅರಣ್ಯವನ್ನು ವ್ಯಾಪಿಸಿದೆ. ಬಂಡೀಪುರಕ್ಕೆ ಬರುವ ಪ್ರವಾಸಿಗರನ್ನು ಅರಣ್ಯ ಪ್ರದೇಶದೊಳಕ್ಕೆ ಸಫಾರಿಗೆ ಕರೆದೊಯ್ಯುವ ವಾಹನಗಳ ಚಕ್ರಕ್ಕೆ ಅಂಟಿಕೊಂಡು ಒಂದೆಡೆಯಿಂದ ಮತ್ತೊಂದೆಡೆಗೆ ಬೀಜ ಪ್ರಸಾರವಾಗಿದೆ. ಮುಂದೊಂದು ದಿನ ಇಡೀ ಅರಣ್ಯವನ್ನೇ ವ್ಯಾಪಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

Bandipur national park full of lantana, threat to wild animals

ಇದೀಗ ಪ್ರವಾಸೋದ್ಯಮ ವಲಯದ ಮಾರ್ಗಗಳ ಇಕ್ಕೆಲಗಳಲ್ಲಿಯೂ ಆಳೆತ್ತರದಲ್ಲಿ ಪಾರ್ಥೇನಿಯಂ ಬೆಳೆದಿದ್ದು, ಇದರ ಮಧ್ಯೆ ಯಾವ ಪ್ರಾಣಿಯಿದ್ದರೂ ಕಾಣದಂತಾಗಿದೆ. ಮಳೆ ಬಿದ್ದಾಗ ಗರಿಕೆಹುಲ್ಲು ಸೇರಿದಂತೆ ಹಲವು ಜಾತಿಯ ಸಣ್ಣ-ಪುಟ್ಟ ಸಸ್ಯಗಳು ಬೆಳೆಯುತ್ತವೆ. ಇವುಗಳನ್ನು ತಿಂದು ಪ್ರಾಣಿಗಳು ಬದುಕುತ್ತವೆ. ಲಂಟಾನ ಮತ್ತು ಪಾರ್ಥೇನಿಯಂ ಬೆಳೆಯುತ್ತಿರುವುದರಿಂದ ಮೇವಿಗೂ ಕೊರತೆಯಾಗುತ್ತಿದೆ.[ಬಂಡೀಪುರದಲ್ಲಿ ಸರಸ-ಸಲ್ಲಾಪದಲ್ಲಿದ್ದ ಪ್ರೇಮಿಗಳ ಮೇಲೆ ಕೇಸು]

ಅರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆದಿರುವ ಲಂಟಾನ ತೆರವು ಅಷ್ಟು ಸುಲಭದ ಕೆಲಸವಲ್ಲ. ಹಲವು ವರ್ಷಗಳಿಂದ ಅವುಗಳ ತೆರವು ಕಾರ್ಯ ನಡೆಸುತ್ತಾ ಬಂದಿದ್ದರೂ ಅಳಿಸುವುದು ಕಷ್ಟವಾಗುತ್ತಿದೆ. ಅಷ್ಟೇ ಅಲ್ಲ ಲಂಟಾನವನ್ನು ಕಡಿದು ಬೇರೆಡೆಗೆ ಸಾಗಿಸಿ ನಾಶಪಡಿಸಲು ಕೋಟ್ಯಂತರ ರೂಪಾಯಿ ಅನುದಾನ ಬೇಕಾಗುತ್ತದೆ. ಇದು ಸಾಧ್ಯವಾಗದ ಕಾರಣದಿಂದ ಲಂಟಾನ ನಾಶಪಡಿಸುವುದು ಕಷ್ಟಸಾಧ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chamarajanagar taluk Bandipur national park full of lantana, it is threat for wild animals. Animal sighting also dificult for tourists. Government should take action to clear lantana.
Please Wait while comments are loading...