ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೊಂದು ಆನೆ ಸಾವು-ವಾರದಲ್ಲಿ ಮೂರಾನೆ ಕಳೇಬರ ಪತ್ತೆ.!
ಚಾಮರಾಜನಗರ, ಆಗಸ್ಟ್, 31: ಈಗಾಗಲೇ ನಿನ್ನೆಯಷ್ಟೇ ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2 ಆನೆಗಳ ಕಳೆಬರಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಇಂದು (ಆಗಸ್ಟ್ 31) ಬಿಳಿಗಿರಿ ರಂಗಸ್ವಾಮಿ ದೇವಾಲಯದ ಪ್ರದೇಶದಲ್ಲಿ ಮತ್ತೊಂದು ಆನೆಯ ಕಳೇಬರ ಪತ್ತೆ ಆಗಿದೆ ಎಂದು ಅರಣ್ಯ ಇಲಾಖೆ ಶನಿವಾರ (ಆಗಸ್ಟ್ 31) ಸಂಜೆ ಮಾಹಿತಿ ನೀಡಿದೆ.
ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದ ಮಾವತ್ತೂರು ಬಿ ಗಸ್ತಿನಲ್ಲಿ ಹೆಣ್ಣಾನೆ ಮೃತ ದೇಹ ಪತ್ತೆಯಾಗಿದ್ದು, ಇದಕ್ಕೆ 60-65 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಆನೆಯು ಸ್ವಾಭಾವಿಕವಾಗಿ 7-8 ದಿನಗಳ ಹಿಂದೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.

ಯಳಂದೂರು ಮತ್ತು ಬೈಲೂರು ವಲಯದಲ್ಲಿ 2 ಆನೆಗಳು ಮೃತಪಟ್ಟಿದ್ದ ಬಗ್ಗೆ ಶುಕ್ರವಾರ(ಆಗಸ್ಟ್ 30) ಅರಣ್ಯ ಇಲಾಖೆ ಮಾಹಿತಿ ಹಂಚಿಕೊಂಡಿತ್ತು. ಇಂದು ಮತ್ತೊಂದು ಆನೆ ಅಸುನೀಗಿರುವ ಮಾಹಿತಿ ಪರಿಸರ ಪ್ರೇಮಿಗಳಲ್ಲಿ ಆತಂಕ ತರಿಸಿದೆ.
ಎರಡು ಆನೆಗಳ ಕಳೆಬರಹ ಪತ್ತೆ: ಬೈಲೂರು ವಲಯದ ಆಳದ ಕೆರೆ ಬಳಿ 45-50 ವರ್ಷದ ಗಂಡಾನೆ ಕಳೇಬರ ಪತ್ತೆಯಾಗಿದ್ದು, 7-8 ತಿಂಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇನ್ನು ಯಳಂದೂರು ವಲಯದ ಬೇತಾಳಕಟ್ಟೆ ಎಂಬಲ್ಲಿ ಗಂಡಾನೆ ಕಳೇಬರ ಪತ್ತೆಯಾಗಿದ್ದು, ಇದು 20 ದಿನಗಳ ಹಿಂದೆ ಮೃತಪಟ್ಟಿದ್ದು, 40 ವರ್ಷದ್ದು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಈ ಎರಡು ಆನೆಗಳ ದಂತಗಳು ಸುರಕ್ಷಿತವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದೆ.
ಇನ್ನು ಆನೆ ಕಳೇಬರ ಪತ್ತೆ ಬಹಳ ತಡವಾಗಿ ಪತ್ತೆಯಾಗಿರುವ ಬಗ್ಗೆ ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಕಿಡಿಕಾರಿದ್ದು, ಒಂದಾನೆ ಮೃತಪಟ್ಟು 7-8 ತಿಂಗಳು, ಮತ್ತೊಂದು ಆನೆ ಸತ್ತು 20 ದಿನಗಳಾಗಿವೆ. ಇದು ಅರಣ್ಯ ಇಲಾಖೆಯ ಗಸ್ತಿನ ವೈಖರಿ ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications