ಚಾಮರಾಜನಗರ: ಹಬ್ಬದ ದಿನವೇ ಕೆರೆಯಲ್ಲಿ ವ್ಯಕ್ತಿ ಶವ ಪತ್ತೆ
ಚಾಮರಾಜನಗರ, ಸೆಪ್ಟೆಂಬರ್, 08: ಕೆರೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಡಿಗಾಲ ಗ್ರಾಮದ ವೆಂಕಟೇಶ್(45) ಮೃತ ದುರ್ದೈವಿ. ಗೌರಿ ಗಣೇಶ ಹಬ್ಬದ ದಿನ ಕೆರೆಯಲ್ಲಿ ಸ್ನಾನ ಮಾಡಬೇಕೆಂದು ಇಬರು ತೆರಳಿದ್ದು, ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇನ್ನು ಬಟ್ಟೆಯನ್ನು ಒಗೆದು ಸ್ನಾನ ಮಾಡಲು ಕೆರೆಗೆ ಇಳಿದ ವೇಳೆ ಕಾಲು ಜಾರಿ ದೊಡ್ಡಗುಂಡಿಗೆ ಬಿದ್ದು ಮೇಲೆ ಬರಲಾರದೇ ಯುವಕ ಅಸುನೀಗಿರುವ ಶಂಕೆ ವ್ಯಕ್ತವಾಗಿದೆ.

ಕೆರೆಯ ಮುಂಭಾಗವೇ ಅಪಾಯ ಸ್ಥಳ ಎಂಬ ನಾಮಫಲಕ ಅಳವಡಿಸಿದ್ದರೂ, ಅನೇಕರು ಜನರು ಪ್ರವಾಸಿ ತಾಣ ಎಂದು ತಿಳಿದುಕೊಂಡು ಈಜಲು ತಮ್ಮ ಕುಟುಂಬದೊಂದಿಗೆ ಬರುತ್ತಾರೆ. ಆದ್ದರಿಂದ, ಕೆರೆಯ ಸುತ್ತ ಬೇಲಿ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಶವವನ್ನು ಮೇಲಕ್ಕೆತ್ತಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರಿಂದ ರೂಟ್ ಮಾರ್ಚ್: ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಚಾಮರಾಜನಗರದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.
ಗೌರಿ- ಗಣೇಶ ಹಬ್ಬದ ಹಿನ್ನೆಲೆ ಚಾಮರಾಜನಗರದ ಜೋಡಿ ರಸ್ತೆ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಚಾಮರಾಜನಗರ ಪಟ್ಟಣ, ಪೂರ್ವ, ಗ್ರಾಮಾಂತರ ಠಾಣೆ ಮೀಸಲು ಹಾಗೂ ಟ್ರಾಫಿಕ್ ಠಾಣೆ ಪೊಲೀಸರು ಪಥ ಸಂಚಲನ ನಡೆಸಿದರು. ಇನ್ನುಈ ವೇಳೆ ಗಣೇಶ ಹಬ್ಬ ಅದ್ದೂರಿಯಾಗಿ ನೆರವೇರಿಸುವ ಜೊತೆಗೆ ಸೌಹಾರ್ದತೆ, ಶಾಂತಿಯಿಂದ ಕೂಡಿರಲಿ ಎಂದು ಎಸ್ಪಿ ಮನವಿ ಮಾಡಿದರು.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್: ಕೆಎಸ್ಆರ್‌ಟಿಸಿ ಬಸ್ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದಿರುವ ಘಟನೆ ಹನೂರು ತಾಲೂಕಿನ ಪುದುರಾಮಪುರದಲ್ಲಿ ನಡೆದಿದೆ.
ಕೊಳ್ಳೇಗಾಲದಿಂದ ಹೊರಟ ಬಸ್ ಇದಾಗಿದ್ದು, ಪುದುರಾಮಪುರ ಬಳಿ ಚಾಲಕ ಸುಭಾಷ್‌ಗೆ ಚಾಲನೆ ಮಾಡುತ್ತಿದ್ದಾಗಲೇ ಏಕಾಏಕಿ ಮೂರ್ಚೆ ಕಾಣಿಸಿಕೊಂಡು ಕೆಳಗೆ ಬಿದ್ದಿದ್ದಾರೆ.
ಬಸ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತುಕೊಂಡಿದೆ. ಆದರೆ, ಆ ಸಮಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಬಸ್‌ನಲ್ಲಿ ನಿರ್ವಾಹಕ ಮತ್ತು ಓರ್ವ ಪ್ರಯಾಣಿಕ ಮಾತ್ರ ಇದ್ದಿದ್ದರಿಂದ ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಸಿಲ್ಲ ಎಂದು ತಿಳಿದುಬಂದಿದೆ.
ಇನ್ನು ಚಾಲಕ ಸುಭಾಷ್ ಕಳೆದ 12 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೂರ್ಚೆ ರೋಗ ಇರುವುದರಿಂದ ಇವರಿಗೆ ಬೇರೆ ಜವಾಬ್ದಾರಿ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದೀಗ ಚಾಲಕ ಸುಭಾಶ್ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications