ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಕುಟುಂಬ: ನಿರ್ಲಕ್ಷ್ಯದ ಆರೋಪದಲ್ಲಿ ಮೂವರು ಪೊಲೀಸರ ಅಮಾನತು
ಚಾಮರಾಜನಗರ, ಜೂನ್. 10: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಬಳಿಯ ತಾಳಬೆಟ್ಟದಲ್ಲಿ ಶನಿವಾರ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಒಬ್ಬರು ಮೃತಪಟ್ಟು ಮೂವರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಮೊಮ್ಮಗಲ ಅಶ್ಲೀಲ ವಿಡಿಯೋ ಇದೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಕ್ಕೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದರು. ಮಹಾದೇವನಾಯಕ, ಅವರ ಪತ್ನಿ ಗೌರಮ್ಮ, ಮಗಳು ಲೀಲಾವತಿ, ಅಪ್ರಾಪ್ತ ಮೊಮ್ಮಗಳು ಕ್ರಿಮಿನಾಶಕ ಸೇವನೆ ಮಾಡಿದ್ದರು. ಶನಿವಾರವೇ ಒಬ್ಬರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿತ್ತು. ಸೋಮವಾರ ಮೃತ ಮಹಾದೇವನಾಯಕ ಪುತ್ರಿ ಲೀಲಾವತಿ ಚಿಕಿತ್ದೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೊಮ್ಮಗಳ ಖಾಸಗಿ ವೀಡಿಯೋ ವೈರಲ್ ಮಾಡುತ್ತೇನೆ ಎಂಬ ಯುವಕನ ಬ್ಲಾಕ್ ಮೇಲ್ ಗೆ ಅಂಜಿದ ಕುಟುಂಬ ಕ್ರಿಮಿನಾಶಕ ಸೇವಿಸಿತ್ತು. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಮಹಾದೇವನಾಯಕ ಮೃತಪಟ್ಟರೇ ಇವರ ಪತ್ನಿ ಗೌರಮ್ಮ, ಮಗಳು ಲೀಲಾವತಿ, ಮೊಮ್ಮಗಳು ರಿಷಿಕಾ ಸಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ ಲೀಲಾವತಿ ಇಂದು ಕೊನೆಯುಸಿರೆಳೆದಿದ್ದಾರೆ.
ಮಹದೇವನಾಯಕರ ಮೊಮ್ಮಗಳು ರಿಷಿಕಾ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದು ಚೀರನಹಳ್ಳಿ ಗ್ರಾಮದ ಲೋಕೇಶ್ ಜೊತೆ ಸ್ನೇಹವಿತ್ತು. ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ಸಲುಗೆ ಬೆಳೆಸಿಕೊಂಡ ಯುವಕ ಅಪ್ರಾಪ್ತೆಯನ್ನು ಚುಂಚನಕಟ್ಟೆಗೆ ಕರೆದೊಯ್ದು ಖಾಸಗಿ ವೀಡಿಯೋ ಸೆರೆ ಹಿಡಿದಿದ್ದ. ಬಳಿಕ, ತಾನು ಹೇಳದಿದ್ದನ್ನು ಕೇಳದಿದ್ದರೇ ವೀಡಿಯೋ ಹರಿ ಬಿಡುವುದಾಗಿ ಹುಡುಗಿ ಮನೆಗೇ ಬಂದು ಹೆದರಿಸಿದ್ದ.

ಈ ಬಗ್ಗೆ ಮಹಾದೇವನಾಯಕ ಕುಟುಂಬ ಕೆ.ಆರ್.ನಗರ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ವಹಿಸದ ಆರೋಪ ಕೇಳಿಬಂದಿದೆ. ಪೊಲೀಸರು ಯಾವುದೇ ಕ್ರಮ ವಹಿಸದಿದ್ದದು, ವೀಡಿಯೋ ಹರಿಬಿಡುವ ಆತಂಕ ಎದುರಾಗಿ ಮಾನಕ್ಕೆ ಹೆದರಿದ ಕುಟುಂಬ ಶುಕ್ರವಾರ ಮಧ್ಯಾಹ್ನವೇ ಮಲೆ ಮಹದೇಶ್ವರ ಬೆಟ್ಟದತ್ತ ಬಂದಿದ್ದಾರೆ. ಮಾದಪ್ಪನ ಬೆಟ್ಟದ ತಪ್ಪಲಾದ ತಾಳುಬೆಟ್ಟದಲ್ಲಿ ಕಾಡಿನಹಾದಿಯಲ್ಲಿ ನಾಲ್ವರು ಕ್ರಿಮಿನಾಶಕ ಸೇವಿಸಿದ್ದಾರೆ.
ನಾಲ್ವರೂ ಬಸ್‌ನಲ್ಲಿ ಬಂದು ತಾಳಬೆಟ್ಟದಲ್ಲಿ ಇಳಿದರು. ಅವರು ಸುಮಾರು ಒಂದು ಕಿಲೋಮೀಟರ್ ಕಾಡಿನ ರಸ್ತೆಯೊಳಗೆ ನಡೆದು ಹೋಗಿದ್ದರು. ನಾಲ್ವರು ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ ಜನ ಮಲೆ ಮಹದೇಶ್ವರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗ್ರಾಮಸ್ಥರ ನೆರವಿನೊಂದಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಘಟನೆಯ ನಂತರ ಕೆಆರ್ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಪಿಪಿ ಸಂತೋಷ್ ಕುಮಾರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಿ ಗಿರೀಶ್ ಮತ್ತು ಹೆಡ್ ಕಾನ್ಸ್‌ಟೇಬಲ್ ಎಚ್ ನಾಗರಾಜ ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.












Click it and Unblock the Notifications