ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಗೊಳಗಾಗಿದ್ದ 14 ವರ್ಷದ ಬಾಲಕಿ ಸಾವು, 18 ದಿನಗಳಾದರೂ ಬೋನಿಗೆ ಬೀಳದ ಚಿರತೆ
ಚಾಮರಾಜನಗರ, ಜುಲೈ, 15: ಇತ್ತೀಚೆಗಷ್ಟೇ ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯೊಬ್ಬಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಲಕಿ ಸುಶೀಲ (14) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಾಲಕಿಯಾಗಿದ್ದಾಳೆ. ಕಳೆದ ಜೂನ್ 26 ರಂದು ಮನೆಯ ಮುಂಭಾಗ ಆಟವಾಡುತ್ತಿದ್ದ ಸುಶೀಲಾ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯುವ ಪ್ರಯತ್ನ ನಡೆಸಿತ್ತು. ನಂತರ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಮೈಸೂರಿನ ಚೆಲುವಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿರತೆ ದಾಳಿಯಿಂದ ಬಾಲಕಿಯ ದವಡೆ ಮೂಳೆ ಮುರಿದಿದ್ದ ಪರಿಣಾಮ ಮುಖ ಊದಿಕೊಂಡಿದ್ದು, ಕಳೆದ 14 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 11ರಂದು ಆಪರೇಷನ್ ಕೂಡ ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನು, ಚಿರತೆ ದಾಳಿ ಪ್ರಕರಣ ನಡೆದು ಸುಮಾರು 14 ದಿನಗಳು ಕಳೆದಿದೆ. ಚಿರತೆ ಸೆರೆಗಾಗಿ ಚಿರತೆ ದಾಳಿ ನಡೆಸಿದ ಸ್ಥಳ ಹಾಗೂ ಅಕ್ಕಪಕ್ಕದಲ್ಲಿ ಮೂರು ಬೋನ್‌ಗಳನ್ನು ಸಹ ಇಡಲಾಗಿತ್ತು. ಆದರೆ ಇದುವರೆಗೂ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ವಾಸದ ಮನೆಗೆ ನುಗ್ಗಿದ ಚಿರತೆ
ಹಾಗೆಯೇ ವಾಸದ ಮನೆಗೆ ಚಿರತೆ ನುಗ್ಗಿದ ಘಟನೆ ಹಾಸನ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಸನ ತಾಲೂಕಿನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರು ವಾಸವಾಗಿರುವ ಮನೆಗೆ ಚಿರತೆ ನುಗ್ಗಿದೆ. ಧರ್ಮ ಅವರ ವಾಸದ ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಜಾನುವಾರುಗಳು ಇದ್ದ ಕಾರಣ ಅಹಾರ ಅರಸಿ ಚಿರತೆ ಮನೆಗೆ ನುಗ್ಗಿದೆ. ನಂತರ ಸ್ಥಳೀಯರ ಮಾಹಿತಿ ಆಧಾರಿಸಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂಧಿ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂಬ ಯುವಕ ತಮ್ಮ ಜಮೀನಿಗೆ ಬಂದ ಚಿರತೆಯನ್ನು ಸೆರೆಹಿಡಿದಿದ್ದಾನೆ. ನಂತರ ಸೆರೆಹಿಡಿದ ಚಿರತೆಯನ್ನು ತನ್ನ ಬೈಕ್‌ನಲ್ಲಿ ಕಟ್ಟಿಕೊಂಡು ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಈ ಘಟನೆ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಇನ್ನು ಚಿರತೆಯೊಂದು ತಂತಿ ಬೇಲಿಯಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿರುವ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿಕೊಂಡು ಬಂದ ವೇಳೆ ತೋಟಕ್ಕೆ ಹಾಕಿದ ಬೇಲಿಗೆ ಚಿರತೆ ಸಿಲುಕಿಕೊಂಡು ಹೊರಬರಲಾಗದೆ ಒದ್ದಾಡುತ್ತಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಚಿರತೆ ಮತ್ತೆ ಉದ್ರೇಕಕ್ಕೆ ಒಳಗಾಗಿದೆ.
ನಂತರ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಶಿವಮೊಗ್ಗದಲ್ಲಿರುವ ಅರವಳಿಕೆ ತಜ್ಞರಿಗೆ ಕರೆ ಮಾಡಿದ್ದಾರೆ. ಸದ್ಯ ಶಿವಮೊಗ್ಗ ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications