ಭಾರತದ ಜಿಡಿಪಿ ದರ ಶೇ. 7.5: ಎರಡನೇ ಬಾರಿ ವಿಶ್ವಬ್ಯಾಂಕ್ ಅಂದಾಜು ಬದಲಾವಣೆ
ನವದೆಹಲಿ, ಜೂನ್ 7: ಕೋವಿಡ್‌ನಿಂದ ಚೇತರಿಸಿಕೊಂಡು ಓಡಲು ಸಿದ್ಧವಾಗಿದ್ದ ಭಾರತದ ಆರ್ಥಿಕತೆಗೆ ಈಗ ಸ್ವಲ್ಪ ತೊಡರುಗಾಲು ಬಿದ್ದಿದೆ. ಈ ಹಣಕಾಸು ವರ್ಷದಲ್ಲಿ (2022 ಏಪ್ರಿಲ್‌ನಿಂದ 2023 ಮಾರ್ಚ್‌ವರೆಗಿನ ಅವಧಿ) ಭಾರತದ ಜಿಡಿಪಿ ಶೇ. 7.5ರಷ್ಟು ಮಾತ್ರ ಏರಿಕೆ ಕಾಣಬಹುದು ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ. ಈ ಹಣಕಾಸು ವರ್ಷಕ್ಕೆ ವಿಶ್ವಬ್ಯಾಂಕ್ ಎರಡನೇ ಬಾರಿ ತನ್ನ ಅಂದಾಜನ್ನು ಬದಲಾಯಿಸಿದಂತಾಗಿದೆ.
ಹಣದುಬ್ಬರ ಏರಿಕೆ, ರಷ್ಯಾ ಉಕ್ರೇನ್ ಯುದ್ಧ ಇತ್ಯಾದಿ ಕಾರಣಗಳಿಂದ ಜಾಗತಿಕವಾಗಿ ಆರ್ಥಿಕ ಹಿಂಜರಿತವಾಗಿದ್ದು, ಅದರ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ಇದೇ ಕಾರಣಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ವೇಗ ನಿರೀಕ್ಷಿತ ಮಟ್ಟದಲ್ಲಿ ಸಾಗುವುದು ಅನುಮಾನ ಇದೆ. ವಿಶ್ವಬ್ಯಾಂಕ್ ತನ್ನ ಮೂಲ ಅಂದಾಜನ್ನು ಎರಡು ಬಾರಿ ಪರಿಷ್ಕರಿಸಲು ಇದೇ ಕಾರಣವಾಗಿದೆ.
ಭಾರತದ ಜಿಡಿಪಿ 2020-22ರ ಹಣಕಾಸು ವರ್ಷದಲ್ಲಿ ಶೇ. 8.7ರಷ್ಟು ವೃದ್ಧಿ ಕಂಡಿತ್ತು. ಈ ಹಣಕಾಸು ವರ್ಷದಲ್ಲೂ ಶೇ. 8.7ರಷ್ಟು ಜಿಡಿಪಿ ವೃದ್ಧಿ ಆಗಬಹುದು ಎಂದು ವಿಶ್ವಬ್ಯಾಂಕ್ ಮೊದಲಿಗೆ ಅಂದಾಜು ಮಾಡಿತು. ನಂತರ ಏಪ್ರಿಲ್ ತಿಂಗಳಲ್ಲಿ ಆ ದರವನ್ನು ಶೇ 8ಕ್ಕೆ ಇಳಿಸಿತು. ಈಗ ಎರಡನೇ ಬಾರಿಯೂ ಬದಲಾವಣೆ ಮಾಡಿ ಶೇ 7.5ಕ್ಕೆ ಅದನ್ನು ತಗ್ಗಿಸಿದೆ.

ಹಣದುಬ್ಬರ ಹೆಚ್ಚುತ್ತಿರುವುದು, ಸರಬರಾಜು ಸರಪಳಿ ವ್ಯವಸ್ಥೆ ದುರ್ಬಲಗೊಂಡಿರುವುದು, ವಿಶ್ವ ರಾಜಕೀಯ ಸಮಸ್ಯೆಗಳು ಭಾರತದ ಆರ್ಥಿಕ ವೃದ್ಧಿಗೆ ಅಡಚಣೆ ಆಗಿವೆ ಎಂಬುದು ವಿಶ್ವಬ್ಯಾಂಕ್ ಅನಿಸಿಕೆ. ಹಾಗೆಯೇ, ಖಾಸಗಿ ವಲಯದಿಂದ ಆಗುತ್ತಿರುವ ಹೂಡಿಕೆಗಳು ಮತ್ತು ಸರಕಾರ ಭಾರತದಲ್ಲಿ ಉದ್ಯಮ ವಾತಾವರಣಕ್ಕೆ ಪೂರಕವಾದ ಸುಧಾರಣೆಗಳನ್ನು ಕೈಗೊಂಡಿರುವುದರಿಂದ ಆರ್ಥಿಕತೆಯ ವೇಗ ತೀರಾ ಕುಸಿತಕ್ಕೆ ಒಳಗಾಗುವುದಿಲ್ಲ ಎಂಬ ಆಶಯ ಇದೆ.
2022ರ ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯು ಆರ್ಥಿಕತೆಯ ವೇಗವನ್ನು ಇಳಿಸಿದೆ. ಉಕ್ರೇನ್ ಯುದ್ಧದಿಂದಾಗಿ ಸರಬರಾಜು ಸರಪಳಿ ವ್ಯವಸ್ಥೆಗೆ ಪೆಟ್ಟುಬಿದ್ದಿದೆ. ಹಾಗೂ ಹೀಗೂ ಚೇತರಿಸಿಕೊಳ್ಳಬಹುದು ಎಂದುಕೊಳ್ಳುವಾಗ ಹಣದುಬ್ಬರ ಎಂಬ ಸಮಸ್ಯೆ ಆರ್ಥಿಕತೆಯ ಮುನ್ನಡೆಗೆ ಅಡ್ಡಗಾಲಾಗಿ ನಿಂತಿದೆ ಎಂಬುದು ವಿಶ್ವಬ್ಯಾಂಕ್ ಸಿದ್ಧಪಡಿಸಿರುವ ವರದಿಯಲ್ಲಿ ವ್ಯಕ್ತವಾಗಿರುವ ಸಂಗತಿಯಾಗಿದೆ.

ಬೇರೆ ಸಂಸ್ಥೆಗಳು ಮಾಡಿರುವ ಅಂದಾಜು:
ವಿಶ್ವಬ್ಯಾಂಕ್ ಮಾತ್ರವಲ್ಲ ಇನ್ನೂ ಅನೇಕ ಗ್ಲೋಬಲ್ ರೇಟಿಂಗ್ ಸಂಸ್ಥೆಗಳೂ ಕೂಡ ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರಬಹುದು ಎಂದು ಅಭಿಪ್ರಾಯಪಟ್ಟಿವೆ. ಮೂಡೀಸ್ ಸಂಸ್ಥೆ ಈ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಶೇ. 9.1ರಷ್ಟು ಇರಬಹುದು ಎಂದು ಅಂದಾಜು ಮಾಡಿತ್ತು. ಆದರೆ, ಕಳೆದ ತಿಂಗಳು ಅದು ತನ್ನ ಅಂದಾಜಿನಲ್ಲಿ ಬದಲಾವಣೆ ಮಾಡಿದ್ದು ಪ್ರಗತಿ ದರವನ್ನು ಶೇ. 8.8ಕ್ಕೆ ಇಳಿಸಿದೆ.
ಎಸ್ ಅಂಡ್ ಪಿ ಸಂಸ್ಥೆ ಕೂಡ 2022-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ವೃದ್ಧಿ ದರ ಶೇ. 7.8 ಇರಬಹುದು ಎಂದು ಅಂದಾಜು ಮಾಡಿತ್ತು. ಈಗ ಅದನ್ನು ಶೇ. 7.3ಕ್ಕೆ ತಗ್ಗಿಸಿದೆ.
ಫಿಚ್ ಸಂಸ್ಥೆ ಬರೋಬ್ಬರಿ ಶೇ. 10.3ರಷ್ಟು ಜಿಡಿಪಿ ಬೆಳವಣಿಗೆ ಆಗಬಹುದು ಎಂದು ಅಂದಾಜು ಮಾಡಿತ್ತಾದರೂ ಮಾರ್ಚ್ ತಿಂಗಳಲ್ಲಿ ಅದನ್ನು ಶೇ. 8.5ಕ್ಕೆ ಇಳಿಸಿದೆ. ಐಎಂಎಫ್ ಶೇ. 9ರಿಂದ ಶೇ. 8.2ಕ್ಕೆ, ಎಡಿಬಿ ಶೇ. 7.5ಕ್ಕೆ ಜಿಡಿಪಿ ವೃದ್ಧಿ ದರ ಸಾಧ್ಯತೆಯನ್ನು ಉಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳಲ್ಲಿ ಮಾಡಿದ ಅಂದಾಜು ಪ್ರಕಾರ ಭಾರತದ ಜಿಡಿಪಿ ವೃದ್ಧಿ ಶೇ. 7.8ರ ಬದಲು ಶೇ. 7.2ರ ದರದಲ್ಲಿ ಆಗಬಹುದು ಎನ್ನಲಾಗಿದೆ.
ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ಆರ್ಥಿಕತೆಗಳು ಈ ವರ್ಷ ಬಹಳ ನಿಧಾನಗತಿಯ ಬೆಳವಣಿಗೆ ಕಾಣುವುದು ನಿಶ್ಚಿತವಾಗಿದೆ. ಜಾಗತಿಕ ಸರಾಸರಿ ಅಭಿವೃದ್ಧಿ 2021ರಲ್ಲಿ ಶೇ. 5.7 ಇತ್ತು. ಈ ವರ್ಷ ಅದು 2.9ಕ್ಕೆ ಇಳಿಕೆ ಕಾಣಬಹುದು ಎಂದು ಅಂದಾಜು ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications