ಆರ್ ಬಿಐ ಸ್ವಾಯತ್ತತೆ, ಮೌಲ್ಯ ಎತ್ತಿ ಹಿಡಿಯುತ್ತೇನೆ: ಶಕ್ತಿಕಾಂತ ದಾಸ್
ನವದೆಹಲಿ, ಡಿಸೆಂಬರ್ 12: ಭಾರತೀಯ ರಿಸರ್ವ್ ಬ್ಯಾಂಕ್‌ನ 25ನೇ ಗವರ್ನರ್ ಆಗಿ ಬುಧವಾರ ಅಧಿಕಾರ ಸ್ವೀಕರಿಸಿದ ಶಕ್ತಿಕಾಂತ ದಾಸ್, ಕೇಂದ್ರ ಬ್ಯಾಂಕ್‌ನ ಸ್ವಾಯತ್ತತೆ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಹೇಳಿದ್ದಾರೆ.
ಅಧಿಕಾರ ಸ್ವೀಕಾರ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾಸ್, 'ಸರ್ಕಾರ ಮತ್ತು ಆರ್ ಬಿಐ ನಡುವೆ ಇರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ, ಪ್ರತಿ ಸಂಸ್ಥೆಯೂ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ತನ್ನ ಹೊಣೆಗಾರಿಕೆಗೆ ಬದ್ಧನಾಗಿರಬೇಕು. ಒಂದು ಸಂಸ್ಥೆಯಾಗಿ ರಿಸರ್ವ್ ಬ್ಯಾಂಕ್ ಸ್ವಾಯತ್ತತೆ, ವಿಶ್ವಾಸಾರ್ಹತೆ, ಮೂಲ ಮೌಲ್ಯಗಳು ಮತ್ತು ವೃತ್ತಿಪರತೆಯನ್ನು ಎತ್ತಿ ಹಿಡಿಯುತ್ತೇನೆ' ಎಂದು ಹೇಳಿದರು.
ಎಲ್ಲ ಸಮಸ್ಯೆಗಳನ್ನೂ ಮಾತುಕತೆಯ ಮೂಲಕ ಬಗೆಹರಿಸಬಹುದು. ಸಂಸ್ಥೆಯಾಗಿ ಆರ್ ಬಿಐ ಸ್ವಾತಂತ್ರ್ಯ ಬಹಳ ಮುಖ್ಯ ಮತ್ತು ಅದು ಹಾಗೆಯ ಉಳಿಯಲಿದೆ ಎಂದು ತಿಳಿಸಿದರು.

ಆರ್ ಬಿಐ ಕಾರ್ಯಾಚರಣೆಯಲ್ಲಿ ಹಣದುಬ್ಬರದ ಡಾಟಾ ಬಹುಮುಖ್ಯ ಅಂಶ. ಆರಂಭದಲ್ಲಿ ಅದು ಉತ್ತಮವಾಗಿರುವಂತೆ ಕಾಣಿಸುತ್ತಿದೆ. ಬೆಳವಣಿಗೆಗಳನ್ನು ಗಮನಿಸುತ್ತಿರುತ್ತೇನೆ ಎಂದು ತಿಳಿಸಿದರು.
ದಾಸ್ ಅವರು ಮುಂಬೈ ಮೂಲದ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರನ್ನು ನಾಳೆ (ಡಿ. 13) ಭೇಟಿ ಮಾಡಲಿದ್ದಾರೆ. ಶುಕ್ರವಾರ ನಿಯೋಜನೆಗೊಂಡಿದ್ದ ಆರ್ ಬಿಐ ಮಂಡಳಿ ಸಭೆ ನಿಗದಿಯಂತೆ ನಡೆಯಲಿದೆ ಎಂದು ಅವರು ಹೇಳಿದರು.












Click it and Unblock the Notifications