Budget 2025: ಬಜೆಟ್ ಬಳಿಕ ಸುಧಾರಿಸುತ್ತಾ ಷೇರು ಮಾರುಕಟ್ಟೆ?
2025ರ ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನ ಬಾಕಿ ಇವೆ. ಕೇಂದ್ರ ಬಜೆಟ್ ಮೇಲೆ ಈ ಬಾರಿ ಸಾಕಷ್ಟು ನಿರೀಕ್ಷೆಗಳಿಗೆ. ಮುಖ್ಯವಾಗಿ ಆದಾಯ ತೆರಿಗೆ ವಿನಾಯಿತಿ, ಜಿಎಸ್‌ಟಿ ಕಡಿತದಂತಹ ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಬಗ್ಗೆ ವಿಶ್ವಾಸವಿದೆ. ಇನ್ನು ಬಜೆಟ್ ಮಂಡನೆಗೆ ಕೆಲವೇ ದಿನ ಇರುವಂತೆಯೇ ಷೇರು ಮಾರುಕಟ್ಟೆ ಸತತವಾಗಿ ಕುಸಿತ ಕಾಣುತ್ತಿದ್ದು ಹೂಡಿಕೆದಾರರು ಕಂಗಾಲಾಗಿದ್ದಾರೆ.
ಮಾರುಕಟ್ಟೆಗೆ ಕುಸಿತವಾಗಲೀ, ಚೇತರಿಕೆಯಾಗಲಿ ಹೊಸದಲ್ಲ. ಆದರೆ ಸತತವಾಗಿ ಕುಸಿಯುವಾಗ ಸರ್ಕಾರದ ಕೆಲವು ನೀತಿಗಳು ಷೇರು ಮಾರುಕಟ್ಟೆಗೆ ಚೇತರಿಕೆ ನೀಡುತ್ತದೆ. ಸೋಮವಾರ ಒಂದೇ ದಿನ ಸೆನ್ಸೆಕ್ಸ್ 824 ಅಂಕಗಳು ಕುಸಿತ ಕಂಡಿದ್ದು 75,366 ಅಂಕಗಳಲ್ಲಿ ವಹಿವಾಟು ಮುಗಿಸಿದೆ.

2024ರ ಸೆಪ್ಟೆಂಬರ್ ತಿಂಗಳಿನಲ್ಲಿ 85,000 ದಾಟಿದ್ದ ಸೆನ್ಸೆಕ್ಸ್ ನಾಲ್ಕು ತಿಂಗಳಿನಲ್ಲಿ 10,000 ಅಂಕಗಳು ಕುಸಿತ ಕಂಡಿದೆ. ಜಾಗತಿಕ ವಿದ್ಯಮಾನಗಳು, ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ, ಮಧ್ಯ ಪ್ರಾಚ್ಯ ದೇಶಗಳ ಬಿಕ್ಕಟ್ಟು, ಅಮೆರಿಕ ಚುನಾವಣೆ ಷೇರು ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮ ಬೀರಿವೆ.
ಷೇರು ಮಾರುಕಟ್ಟೆಗೆ ಉತ್ತೇಜನ
ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಘೋಷಿಸುವ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದು, ಒಂದು ವೇಳೆ ಸರ್ಕಾರ ವಾರ್ಷಿಕ 10 ಲಕ್ಷ ರೂಪಾಯಿ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಿಸಿದರೆ ಷೇರುಮಾರುಕಟ್ಟೆಗೆ ಉತ್ತೇಜನ ಸಿಗುತ್ತದೆ ಎಂದು ಹೇಳಲಾಗಿದೆ. ಆದಾಯ ತೆರಿಗೆ ವಿನಾಯಿತಿಯಿಂದ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದುಬರುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ಕಡಿಮೆಯಾಗುತ್ತಾ ಜನರ ಮೇಲಿನ ಹೊರೆ
ವೈದ್ಯಕೀಯ ಉಪಕರಣಗಳು, ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಆಗ್ರಹಿಸಲಾಗಿದ್ದು, ಸರ್ಕಾರ ಈ ಬಗ್ಗೆ ಗಮನ ನೀಡಿದರೆ ಜನರ ಆರೋಗ್ಯ ವೆಚ್ಚಗಳು ಕೂಡ ಕಡಿಮೆಯಾಗಲಿದೆ. ಇದು ಪರೋಕ್ಷವಾಗಿ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ.
ಮುಖ್ಯವಾಗಿ ಇಂಧನ ತೈಲಗಳ ಮೇಲಿನ ತೆರಿಗೆ ಕಡಿಮೆ ಮಾಡಲು ಕೂಡ ಒತ್ತಾಯಿಸಲಾಗಿದೆ. ಕಳೆದ ಎರಡು ವರ್ಷದಿಂದ ಕಚ್ಛಾತೈಲದ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದರೂ ಸರ್ಕಾರ ಮಾತ್ರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ಆಸಕ್ತಿ ತೋರಿಲ್ಲ. ಇಂಧನ ದರವನ್ನು ಕೂಡ ಕಡಿಮೆ ಮಾಡುವ ಮೂಲಕ ಸರ್ಕಾರ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು. ಇದರಿಂದ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ ಎಂದು ಹೇಳಿದ್ದು, ಸರ್ಕಾರ ಇದಕ್ಕೆ ಯಾವ ರೀತಿ ಸ್ಪಂದಿಸುತ್ತದೆ ಎಂದು ನೋಡಬೇಕಿದೆ.
ಫೆಬ್ರವರಿ 1 ರಂದು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಮಧ್ಯಮ ವರ್ಗವು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.












Click it and Unblock the Notifications