ಆಹಾರ ಮತ್ತು ದಿನಸಿಗಳ ಬೆಲೆ ಏಕೆ ಏರುತ್ತಿದೆ..ಇಲ್ಲಿದೆ ಮಾಹಿತಿ
ವಾಷಿಂಗ್ಟನ್, ಅ.17: ಏರುತ್ತಲೇ ಇರುವ ಹಣದುಬ್ಬರವು ಅಮೆರಿಕನ್ ಕುಟುಂಬಗಳನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುವುದನ್ನು ಮುಂದುವರೆಸಿದೆ. ಕಿರಾಣಿ ಅಂಗಡಿಯಲ್ಲಿ ವ್ಯಾಪಾರಿಗಳಿಗೆ ಈ ಹೆಚ್ಚಿನ ಬೆಲೆಗಳು ಕಷ್ಟಕ್ಕೆ ನೂಕಿವೆ.
ಇತ್ತಿಚೆಗೆ ಗ್ರಾಹಕ ಬೆಲೆ ಸೂಚ್ಯಂಕ ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಹಣದುಬ್ಬರದ ಜಿಗಿತವು ಆಹಾರದ ಬೆಲೆ ಏರಿಕೆಯಿಂದ ಭಾಗಶಃ ಹೆಚ್ಚಾಗಿದೆ. ಒಟ್ಟಾರೆ ಹಣದುಬ್ಬರವು ಆಹಾರ, ಬಾಡಿಗೆ ಮತ್ತು ವೈದ್ಯಕೀಯ ಆರೈಕೆ ವೆಚ್ಚಗಳಿಂದಾಗಿ ಕಳೆದ ವರ್ಷಕ್ಕೆ ಹೊಲಿಸಿದರೆ ಶೇಕಡಾ 8.2 ರಷ್ಟು ಏರಿಕೆಯಾಗಿದೆ.
ಸೆಪ್ಟೆಂಬರ್‌ನಲ್ಲಿ, ಆಹಾರದ ಬೆಲೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 11.2 ರಷ್ಟು ಮತ್ತು ಹಿಂದಿನ ತಿಂಗಳಿಗಿಂತ ಶೇಕಡಾ 0.8 ರಷ್ಟು ಏರಿಕೆಯಾಗಿದೆ. ಮಾಂಸ, ಹಣ್ಣುಗಳು ಮತ್ತು ತರಕಾರಿಗಳು ಸೇರಿ ಎಲ್ಲವೂ ಹೆಚ್ಚು ದುಬಾರಿಯಾಗಿದೆ. ರೆಸ್ಟೋರೆಂಟ್‌ಗಳಲ್ಲಿನ ಆಹಾರದ ಬೆಲೆಗಳು ಹಿಂದಿನ ತಿಂಗಳಿಗಿಂತ ಶೇಕಡಾ 0.9 ರಷ್ಟು ಏರಿದೆ.
ವಿವಿಧ ಕಾರಣಗಳಿಗಾಗಿ ಆಹಾರವು ಹೆಚ್ಚು ದುಬಾರಿಯಾಗಿದೆ. ಹೆಚ್ಚಿದ ಅನಿಲ ಬೆಲೆಗಳು ಮತ್ತು ಕಾರ್ಮಿಕರ ಕೊರತೆಯು ವ್ಯವಹಾರಗಳ ವೆಚ್ಚವನ್ನು ಹೆಚ್ಚಿಸಿದೆ. ಉಕ್ರೇನ್‌ನಲ್ಲಿನ ಯುದ್ಧವು ಗೋಧಿ, ಸೂರ್ಯಕಾಂತಿ ಎಣ್ಣೆ ಮತ್ತು ಇತರ ಉತ್ಪನ್ನಗಳ ರಫ್ತುಗಳಿಗೆ ಅಡ್ಡಿಪಡಿಸಿದೆ. ಜಾಗತಿಕ ಆಹಾರ ಪೂರೈಕೆಯನ್ನು ತಗ್ಗಿಸಿದ್ದು, ಬೆಲೆಗಳು ಹೆಚ್ಚಾಗಿವೆ. ಇದರ ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನ ಪಶ್ಚಿಮ ಭಾಗದಲ್ಲಿ ಬರಗಾಲದಂತಹ ಹವಾಮಾನ-ಸಂಬಂಧಿತ ಸಮಸ್ಯೆಗಳು ಬೆಳೆ ಇಳುವರಿಯನ್ನು ಕಡಿಮೆ ಮಾಡಿದೆ.

ಆಹಾರ ಬೆಲೆ ಏರಿಕೆಗೆ ಜಾಗತಿಕ ಸಂಘರ್ಷದ ಕೊಡುಗೆಯಿದೆ
"ಕಾರ್ಮಿಕರು, ಉತ್ಪಾದನೆಯ ಅಡೆತಡೆಗಳು, ಸಾರಿಗೆಯ ಬೇಡಿಕೆಗಳು ಮತ್ತು ಜಾಗತಿಕ ಸಂಘರ್ಷದ ಕಾರಣದಿಂದಾಗಿ ವೆಚ್ಚಗಳು ಹೆಚ್ಚಾಗಿವೆ. ಹೀಗಾಗಿ ಆಹಾರ ವ್ಯವಹಾರದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುತ್ತಿದೆ. ಈ ಮಸ್ಯೆಗಳನ್ನು ಪರಿಹರಿಸಲು ಇನ್ನೂ ಕೆಲಸ ಮಾಡಬೇಕಾಗಿದೆ " ಎಂದು ಆಹಾರ ಉದ್ಯಮ ಅಸೋಸಿಯೇಷನ್ (FMI) ನಲ್ಲಿ ತೆರಿಗೆ, ವ್ಯಾಪಾರ, ಸುಸ್ಥಿರತೆ ಮತ್ತು ನೀತಿ ಅಭಿವೃದ್ಧಿಯ ಉಪಾಧ್ಯಕ್ಷ ಆಂಡ್ರ್ಯೂ ಹರಿಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುದ್ಧ ಮತ್ತು ಬರಗಾಲವು ಬೆಲೆ ಹೆಚ್ಚಳಕ್ಕೆ ಪಾಲು ನೀಡಿವೆ
ಸಾಂಕ್ರಾಮಿಕ ಸಮಯದಲ್ಲಿ ಅನೇಕ ಕಾರಣಗಳಿಗಾಗಿ ಆಹಾರದ ಬೆಲೆಗಳು ಏರಿಕೆಯಾಗಿವೆ. ಅದರಲ್ಲೂ ಹೆಚ್ಚಿದ ಬೇಡಿಕೆಯಿಂದಾಗಿ ಅವುಗಳ ಬೆಲೆ ಏರಿಕೆ ತೀವ್ರಗತಿಯಲ್ಲಿ ಸಾಗಿತ್ತು.
ಇವೈ-ಪಾರ್ಥೆನಾನ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಗ್ರೆಗೊರಿ ಡಾಕೊ, 'ಜನರು ಕಿರಾಣಿ ಅಂಗಡಿಯಿಂದ ಆಹಾರವನ್ನು ಸಂಗ್ರಹಿಸಿದ್ದರಿಂದ ಸಾಂಕ್ರಾಮಿಕ ರೋಗದಲ್ಲಿ ಆಹಾರದ ಬೆಲೆಗಳು ಏರಲು ಪ್ರಾರಂಭಿಸಿದವು. ಇದು ಆಹಾರ ಪದಾರ್ಥಗಳ ಬೇಡಿಕೆಯಲ್ಲಿ ದೊಡ್ಡ ಏರಿಕೆಗೆ ಕಾರಣವಾಯಿತು. ಪೂರೈಕೆ ನಿರ್ಬಂಧಗಳು ಆಹಾರದ ಬೆಲೆಗಳ ಮೇಲೆ ಹೆಚ್ಚುವರಿ ಒತ್ತಡವನ್ನು ತಂದಿದೆ' ಎಂದು ಹೇಳಿದ್ದಾರೆ.

ಲಾಕ್‌ಡೌನ್‌ನಲ್ಲಿ ಪೂರೈಕೆಗೆ ಸರಪಳಿಗೆ ಭಾರೀ ತಡೆ; ಬೆಲೆ ಏರಿಕೆ
ಆಹಾರ ಅರ್ಥಶಾಸ್ತ್ರಜ್ಞ ಮತ್ತು ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕರಾಗಿರುವ ಡೇವಿಡ್ ಒರ್ಟೆಗಾ, 'ಆಹಾರದ ಬೆಲೆಗಳಲ್ಲಿ ಹೆಚ್ಚಿನ ಏರಿಕೆಯು ಸಾಂಕ್ರಾಮಿಕ ರೋಗ ಕೊರೊನಾ ಕಾಲದಲ್ಲಿ ಪೂರೈಕೆ ಸರಪಳಿಗೆ ಉಂಟಾದ ಅಡೆತಡೆಗಳ ಪರಿಣಾಮವಾಗಿದೆ' ಎಂದಿದ್ದಾರೆ.
'ಹೆಚ್ಚಿದ ಪೆಟ್ರೋಲ್, ಡಿಸೇಲ್ ಬೆಲೆಗಳು, ರೈತರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಆಹಾರ ಉತ್ಪನ್ನಗಳನ್ನು ದೇಶಾದ್ಯಂತ ಸಾಗಿಸಲು ಭಾರೀ ದುಬಾರಿಯಾಗಿತ್ತು. ಕಾರ್ಮಿಕರ ಕೊರತೆಯಿಂದಾಗಿ ವ್ಯಾಪಾರಿಗಳು ಬರುವ ಕಾರ್ಮಿಕರಿಗೆ ಹೆಚ್ಚಿನ ಹಣವನ್ನು ಪಾವತಿಸುತ್ತಿದ್ದಾರೆ. ರೈತರು ರಸಗೊಬ್ಬರದಂತಹ ವಸ್ತುಗಳಿಗೆ ಹೆಚ್ಚಿನ ಹಣ ಹಾಕಲಾಗುತ್ತಿದೆ. ಪೂರೈಕೆ ಸರಪಳಿಯಲ್ಲಿ ಪ್ರತಿಯೊಂದು ಹಂತದಲ್ಲೂ ವೆಚ್ಚಗಳು ಏರಿಕೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಜಾಗತಿಕ ಆಹಾರ ಪೂರೈಕೆಯನ್ನು ಬಿಗಿಗೊಳಿಸಿದ ಯುದ್ಧ
ಉಕ್ರೇನ್ ಗೋಧಿ, ಸೂರ್ಯಕಾಂತಿ ಎಣ್ಣೆ ಮತ್ತು ಇತರ ಆಹಾರ ಉತ್ಪನ್ನಗಳ ಪ್ರಮುಖ ಉತ್ಪಾದಕವಾಗಿದೆ. ಆದರೆ ರಷ್ಯಾ -ಉಕ್ರೇನ್ ಯುದ್ಧದಿಂದ ಧಾನ್ಯ ರಫ್ತಿಗೆ ತಡೆಯಾಯಿತು. ಇದು ಜಾಗತಿಕ ಆಹಾರ ಬೆಲೆಗಳಲ್ಲಿ ಏರಿಕೆಗೆ ಕಾರಣವಾಯಿತು.
ಹವಾಮಾನ ಸಂಬಂಧಿತ ಸಮಸ್ಯೆಗಳು ಆಹಾರ ಪೂರೈಕೆಯ ಮೇಲೂ ಪರಿಣಾಮ ಬೀರಿವೆ. ಕ್ಯಾಲಿಫೋರ್ನಿಯಾದಲ್ಲಿ ಉಂಟಾದ ಬರವು ಬೆಳೆ ಇಳುವರಿಗೆ ಕಾರಣವಾಗಿದೆ. ಟೊಮ್ಯಾಟೊ ಮತ್ತು ಈರುಳ್ಳಿಯಂತಹ ಬೇಸಿಗೆ ಬೆಳೆಗಳು ಒಣಗಿಹೋಗಿವೆ ಎಂದು ತಜ್ಞರು ಹೇಳಿದ್ದಾರೆ.
ಮುಂದಿನ ವರ್ಷ ಜಾಗತಿಕ ಆಹಾರ ಸರಕುಗಳ ಬೆಲೆಗಳು ದಿನಸಿ ಅಂಗಡಿಯಲ್ಲಿನ ಇಳಿಯಬಹುದು ಮತ್ತು ಪೂರೈಕೆ ಸರಪಳಿ ಸಮಸ್ಯೆಗಳು ನಿಧಾನವಾಗಿ ಸರಿಯಾಗಬಹುದು. ಆದರೆ ರಜಾದಿನಗಳು ಹೆಚ್ಚಿರುವ ಕಾರಣ ಕನಿಷ್ಠ ವರ್ಷದ ಅಂತ್ಯದವರೆಗೆ ಆಹಾರದ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.












Click it and Unblock the Notifications