Union Budget: ಕೇಂದ್ರ ಬಜೆಟ್ ವೇಳೆ ಅದೊಂದು ನಿರ್ಧಾರದಿಂದ ರೊಚ್ಚಿಗೆದ್ದ ಷೇರು ಮಾರುಕಟ್ಟೆ
ಭಾರತ ದೇಶದ ಆರ್ಥಿಕ ಭವಿಷ್ಯ ಹೇಳುವ, 2026-27ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡನೆ ಆಗಿದೆ. 54 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಮಂಡಿಸಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು. 85 ನಿಮಿಷಗಳ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಮಹತ್ವದ ಮಾಹಿತಿ ಹಂಚಿಕೊಂಡರು, ಆಗ ಸರಿಯಾಗಿಯೇ ಇದ್ದ ಷೇರು ಮಾರುಕಟ್ಟೆ ದಿಢೀರ್ ಎಂದು ಕೊನೆಯ ಹಂತದಲ್ಲಿ ಉರುಳಿ ಬಿತ್ತು. ನೋಡ ನೋಡುತ್ತಲೇ ಸೆನ್ಸೆಕ್ಸ್ 1,400 ಅಂಕಗಳನ್ನು ಮೀರಿ ಕುಸಿತ ಕಂಡಿತ್ತು, ಹಾಗೇ ನಿಫ್ಟಿ-50 ಕೂಡ ಕುಸಿತ ಕಂಡಿತ್ತು. ಹಾಗಾದರೆ ಇದಕ್ಕೆ ಕಾರಣ ಏನು? ಮಾಹಿತಿ ತಿಳಿಯೋಣ ಬನ್ನಿ.
ಜಾಗತಿಕ ಮಟ್ಟದಲ್ಲಿ ಯುದ್ಧ ಹಾಗೂ ತಿಕ್ಕಾಟ ನಡೆಯುತ್ತಿರುವ ಸಮಯದಲ್ಲಿ ಭಾರತದ ಬಜೆಟ್ ಎಲ್ಲವನ್ನೂ ಸಮತೋಲನದಲ್ಲಿ ತೂಗಿಸಿಕೊಂಡು ಹೋಗಿದೆ. ಅದರಲ್ಲೂ ಸಾರಿಗೆ ಕ್ಷೇತ್ರಕ್ಕೆ ಈ ಬಾರಿ ಬಜೆಟ್‌ನಲ್ಲಿ ಅತಿಹೆಚ್ಚು ಎಂದರೆ ಸುಮಾರು 6 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯನ್ನ ಮಾಡಲಾಗಿದೆ. ಹಾಗೇ 5 ಲಕ್ಷ 94 ಸಾವಿರ ಕೋಟಿ ರೂಪಾಯಿ ಪಡೆದ ರಕ್ಷಣಾ ಕ್ಷೇತ್ರವು ಪಟ್ಟಿಯ 2ನೇ ಸ್ಥಾನದಲ್ಲಿ ಇದೆ. ಇನ್ನುಳಿದಂತೆ ಗ್ರಾಮೀಣ ಅಭಿವೃದ್ಧಿಗೆ 2,73,108 ಕೋಟಿ ರೂಪಾಯಿ & ಗೃಹ ಸಚಿವಾಲಯಕ್ಕೆ 2,55,234 ಕೋಟಿ ರೂಪಾಯಿ ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಇಷ್ಟೆಲ್ಲದರ ನಡುವೆ ದಿಢೀರ್ ಷೇರು ಮಾರುಕಟ್ಟೆ ಕುಸಿದು ಬೀಳಲು ಕಾರಣ ಏನು ಗೊತ್ತೆ?

ರೊಚ್ಚಿಗೆದ್ದ ಷೇರುಪೇಟೆ ಹೂಡಿಕೆದಾರರು
ಅಂದಹಾಗೆ ಪ್ಯೂಚರ್ ಆಂಡ್ ಆಪ್ಷನ್ ಎಂದು ಕರೆಯುವ ಷೇರು ಮಾರುಕಟ್ಟೆ F & O ವಹಿವಾಟಿನ ಮೇಲೆ ಭದ್ರತಾ ವಹಿವಾಟು ತೆರಿಗೆ ಹಾಕಲಾಗುತ್ತದೆ. ಆದರೆ, ಇದೀಗ ಅದೇ ಭದ್ರತಾ ವಹಿವಾಟು ತೆರಿಗೆಯನ್ನು ಏರಿಕೆ ಮಾಡಿದೆ ಕೇಂದ್ರ ಸರ್ಕಾರ. ಇದೇ ವಿಚಾರವಾಗಿ ಭರ್ಜರಿ ಸಂಚಲನ ಸೃಷ್ಟಿ ಆಗಿ ಷೇರು ಪೇಟೆಯಲ್ಲಿ ಇಂದು ತಲ್ಲಣವೇ ಎದ್ದಿತ್ತು. ಹತ್ತಿರ ಹತ್ತಿರ ಸೆನ್ಸೆಕ್ಸ್ 1,400 ಅಂಕ ಮೀರಿ ಕುಸಿತ ಕಂಡಿತ್ತು. F & O ವಹಿವಾಟಿನ ಮೇಲಿನ ಭದ್ರತಾ ವಹಿವಾಟು ತೆರಿಗೆ ಈ ಮೊದಲು ಶೇ. 0.02 ರಷ್ಟು ಇತ್ತು, ಆದರೆ ಈಗ ಅದನ್ನು ಶೇ. 0.05ಕ್ಕೆ ಹೆಚ್ಚಳ ಮಾಡಿ ಘೋಷಿಸಿದ್ದೇ ತಡ ಷೇರು ಮಾರುಕಟ್ಟೆ ನಲುಗಿ ಹೋಗಿದೆ.
ಚಿನ್ನ & ಬೆಳ್ಳಿ ಬೆಲೆ ಇಳಿಕೆ
ಹೌದು, ಚಿನ್ನದ ಬೆಲೆ ದಿಢೀರ್ ಭಾರಿ ಪ್ರಮಾಣದಲ್ಲಿ ಕುಸಿದು ಬೀಳುತ್ತಿರುವ ಕಾರಣಕ್ಕೆ ಚರ್ಚೆಯು ಜೋರಾಗಿದೆ. ಇಂದು ಕೇಂದ್ರ ಬಜೆಟ್ ಮಂಡನೆ ಆಗಿದ್ದು, ಚಿನ್ನದ ಮೇಲಿನ ತೆರಿಗೆ ಇಳಿಕೆ ಸಾಧ್ಯತೆ ಬಗ್ಗೆ ಕೂಡ ಚರ್ಚೆ ಜೋರಾಗಿತ್ತು. ಆಭರಣ ಪ್ರಿಯರು ಕೇಂದ್ರ ಬಜೆಟ್ ಮೇಲೆ ತಮ್ಮ ಗಮನ ನೆಟ್ಟು ಕಾಯುತ್ತಿದ್ದರು. ಆದರೆ ಕೇಂದ್ರ ಬಜೆಟ್‌ನಲ್ಲಿ ಚಿನ್ನ & ಬೆಳ್ಳಿ ವಿಚಾರವಾಗಿ ಯಾವುದೇ ಬದಲಾವಣೆ ಆಗಿಲ್ಲ. ಹೀಗಿದ್ದರೂ ಅಂತಾರಾಷ್ಟ್ರೀಯ ಬೆಳವಣಿಗೆ ಹಾಗೂ ಚಿನ್ನ ಮತ್ತು ಬೆಳ್ಳಿ ಹೂಡಿಕೆದಾರರ ನಿರ್ಧಾರದ ಕಾರಣಕ್ಕೆ ಇಂದು ಚಿನ್ನ & ಬೆಳ್ಳಿ ಬೆಲೆ ಭರ್ಜರಿ ಕುಸಿತ ಕಂಡಿದೆ. ಬೆಲೆ ಏರಿಕೆ ಹಿನ್ನೆಲೆ ಕಂಗಾಲಾಗಿ ಹೋಗಿದ್ದ ಆಭರಣ ಪ್ರಿಯರು ಇದೀಗ ಚಿನ್ನ & ಬೆಳ್ಳಿ ಬೆಲೆಯ ಕುಸಿತದಿಂದ ಸಂತಸ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications