Get Updates
Get notified of breaking news, exclusive insights, and must-see stories!

ಶುಲ್ಕ ಹೆಚ್ಚಿಸಿ, ಸಬ್ಸಿಡಿ ಇಳಿಸಿ: ಕೇಂದ್ರದಿಂದ ರಾಜ್ಯಗಳಿಗೆ ಆರ್ಥಿಕ ಶಿಸ್ತಿನ ಪಾಠ

ನವದೆಹಲಿ, ಜುಲೈ 4: ಭಾರತದ ಅನೇಕ ರಾಜ್ಯಗಳು ಇನ್ನೂ ಕೂಡ ಆರ್ಥಿಕವಾಗಿ ಒಂದು ಹಂತಕ್ಕೆ ಏರಲು ಸಾಧ್ಯವಾಗದೇ ಹಿಂದುಳಿದ ಪ್ರದೇಶಗಳಾಗಿ ಮುಂದುವರಿದಿವೆ. ಇದು ಒಟ್ಟಾರೆ ದೇಶದ ಆರ್ಥಿಕತೆಗೆ ಹಿನ್ನಡೆಯಂತಾಗಿದೆ. ಕೇಂದ್ರ ಸರಕಾರದ ಆರ್ಥಿಕ ಗುರಿ ಈಡೇರಿಕೆಗೆ ಈ ರಾಜ್ಯಗಳು ತೊಡರುಗಾಲುಗಳಂತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ ಖುದ್ದಾಗಿ ಕೆಲ ರಾಜ್ಯಗಳಿಗೆ ಆರ್ಥಿಕ ಶಿಸ್ತಿನ ಪಾಠ ಹೇಳತೊಡಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ ತಿಂಗಳಲ್ಲಿ ಒಂದು ವಿಸ್ತೃತವಾದ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕೆಲ ರಾಜ್ಯಗಳು ಸಾಲ ಹೆಚ್ಚು ಮಾಡಿಕೊಂಡು, ಖರ್ಚನ್ನೂ ಹೆಚ್ಚಿಸಿಕೊಂಡು ಒದ್ದಾಡುತ್ತಿವೆ ಎಂದು ತಿಳಿಸಲಾಗಿತ್ತು. ಈ ರಾಜ್ಯಗಳಲ್ಲಿ ತೆರಿಗೆ ಸಂಗ್ರಹಣೆ ಕಡಿಮೆ ಆಗಿರುವುದು, ಜೊತೆಗೆ ಜನಪ್ರಿಯ ಯೋಜನೆಗಳ ಮೂಲಕ ಸಬ್ಸಿಡಿ ನೀಡುವ ಕಾರ್ಯಗಳಿಂದಾಗಿ ಸಾಲದ ಕೂಪಕ್ಕೆ ಸಿಲುಕಿವೆ ಎಂದು ಈ ಆರ್‌ಬಿಐ ವರದಿಯಲ್ಲಿ ತಿಳಿಸಲಾಗಿತ್ತು.

ಬಿಹಾರ, ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ಆಂದ್ರಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳು ಅತಿ ಹೆಚ್ಚಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿವೆ ಎಂದು ಹೇಳಲಾಗಿದೆ.

ಕಳೆದ ತಿಂಗಳ ಮಧ್ಯಭಾಗದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ವಿವಿಧ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಸೋಮನಾಥನ್ ಅವರು ರಾಜ್ಯ ಸರಕಾರಗಳಿಗೆ ವರಮಾನ ಹೆಚ್ಚಿಸುವುದು ಹೇಗೆ ಎಂದು ಹಲವು ಸಲಹೆಗಳನ್ನು ನೀಡಿದ್ದರು.

ಅದರಲ್ಲಿ ಪ್ರಮುಖವಾದದು, ನಿಯಮಿತವಾಗಿ ತೆರಿಗೆ ಹೆಚ್ಚಿಸುವುದು, ಸ್ವಾಯತ್ತ ಸಂಸ್ಥೆಗಳ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು, ನೀರು ಇತ್ಯಾದಿ ಸೇವೆಗಳಿಗೆ ಶುಲ್ಕ ಹೆಚ್ಚಿಸುವುದು, ಸಿಗರೇಟು ಮದ್ಯ ಇತ್ಯಾದಿಗಳ ಅಬಕಾರಿ ಸುಂಕ ಹೆಚ್ಚಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಕೇಂದ್ರ ಸರಕಾರದಿಂದ ಬಂದಿರುವ ಸಲಹೆಗಳು.

ದೇಶಾದ್ಯಂತ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ

 ಸ್ವಾಯತ್ತ ಸಂಸ್ಥೆಗಳ ಸುಧಾರಣೆ

ಸ್ವಾಯತ್ತ ಸಂಸ್ಥೆಗಳ ಸುಧಾರಣೆ

ರಾಜ್ಯಗಳಲ್ಲಿರುವವ ವಿವಿಧ ಸ್ವಾಯತ್ತ ಸಂಸ್ಥೆಗಳು ಕ್ಷಮತೆಯಿಂದ ಕಾರ್ಯನಿರ್ವಹಿಸುವಂತೆ ಸುಧಾರಣೆಗಳನ್ನು ತರಬೇಕು. ಅಗತ್ಯಬಿದ್ದರೆ ಸಂಸ್ಥೆಗಳನ್ನು ವಿಲೀನ ಮಾಡಬೇಕು. ಇದರಿಂದ ವಿವಿಧ ಸಂಸ್ಥೆಗಳ ನಡುವೆ ಇರುವ ತಡೆಗೋಡೆ ನಿವಾರಣೆಯಾಗಿ ಸಮನ್ವಯತೆ ಹೆಚ್ಚುತ್ತದೆ. ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಕಳೆದ ತಿಂಗಳು ಮಾಡಿದ ಸಭೆಯಲ್ಲಿ ತಿಳಿಸಿದರು.

ಈ ಸಂಬಂಧ, ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳ ಉದಾಹರಣೆಯನ್ನೂ ಅವರು ನೀಡಿದರು. ಕೇಂದ್ರ ಸರಕಾರ 231 ಸ್ವಾಯತ್ತ ಸಂಸ್ಥೆಗಳ ವಿಮರ್ಶೆ ನಡೆಸಿತ್ತು. ಬಳಿಕ ಅನಗತ್ಯ ಸಂಸ್ಥೆಗಳನ್ನು ಮುಚ್ಚಲಾಯಿತು. ಅಗತ್ಯವಿರುವೆಡೆ ವಿವಿಧ ಸಂಸ್ಥೆಗಳ ವಿಲೀನ ಮಾಡಲಾಯಿತು. ತತ್‌ಪರಿಣಾಮವಾಗಿ ಸ್ವಾಯತ್ತ ಸಂಸ್ಥೆಗಳ ಸಂಖ್ಯೆ 112ಕ್ಕೆ ಇಳಿಯಿತಂತೆ. ಈ ರೀತಿಯ ಕ್ರಮಗಳಿಂದ ಅನಗತ್ಯ ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂಬುದು ಟಿ.ವಿ. ಸೋಮನಾಥನ್ ವಾದ.

 ಯೋಜನೆಗಳಲ್ಲಿ ಸುಧಾರಣೆ

ಯೋಜನೆಗಳಲ್ಲಿ ಸುಧಾರಣೆ

ವಿವಿಧ ರಾಜ್ಯಗಳಲ್ಲಿ ಅಸಂಖ್ಯಾತ ಎನಿಸುವಷ್ಟು ಯೋಜನೆಗಳು ಇವೆ. ರೂಢಿಗತವಾಗಿ ಬಂದ ಯೋಜನೆಗಳು, ಚುನಾವಣೆಯ ವೇಳೆ ನೀಡಿದ ಭರವಸೆಗಾಗಿ ಉಳಿದಿರುವ ಯೋಜನೆಗಳು ಇವೇ ಮುಂತಾದವು ರಾಜ್ಯ ಸರಕಾರಗಳ ಖಜಾನೆಗೆ ಹೊರೆಯಾಗಿರುವುದಂತೂ ಹೌದು. ಈ ವಿಚಾರದ ಬಗ್ಗೆ ಮಾತನಾಡಿದ ಕೇಂದ್ರ ಹಣಕಾಸು ಕಾರ್ಯದರ್ಶಿ ಸೋಮನಾಥನ್, ರಾಜ್ಯ ಸರಕಾರಗಳು ತಮ್ಮ ಯೋಜನೆಗಳನ್ನು ಮತ್ತೊಮ್ಮೆ ವಿಮರ್ಶಿಸಿ, ಕಡಿಮೆ ಆಡಳಿತ ವೆಚ್ಚ ಇರುವ ಯೋಜನೆಗಳಿಗೆ ಆದ್ಯತೆ ಕೊಡಬೇಕೆಂದು ಕರೆ ನೀಡಿದರು.

ಈ ವಿಚಾರದಲ್ಲೂ ಅವರು ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳ ಉದಾಹರಣೆ ನೀಡಿದರು. 2016ರಿಂದೀಚೆ ಕೇಂದ್ರ ಸರಕಾರದ 130 ಯೋಜನೆಗಳಲ್ಲಿ 60 ಯೋಜನೆಗಳನ್ನು ವಿಲೀನಗೊಳಿಸಲಾಗಿದೆ. ಐದು ಯೋಜನೆಗಳನ್ನು ನಿಲ್ಲಿಸಲಾಗಿದೆ. ಇದರಿಂದ ಕೇಂದ್ರೀಯ ಪ್ರಾಯೋಜಿತ ಯೋಜನೆಗ ಸಂಖ್ಯೆ ೬೫ಕ್ಕೆ ಇಳಿದಿದೆ.

ಉದಾಹರಣೆಗೆ, ಪಶುಸಂಗೋಪನಾ ಇಲಾಖೆಯಲ್ಲಿದ್ದ 10 ಯೋಜನೆಗಳನ್ನು ವಿಲೀನಗೊಳಿಸಿ ರಾಷ್ಟ್ರೀಯ ಪಶುಧನ್ ವಿಕಾಸ್ ಯೋಜನಾ ಎಂಬ ಒಂದು ಸಮಗ್ರ ಯೋಜನೆ ರೂಪಿಸಲಾಗಿದೆ. ಇದರಿಂದ ಯೋಜನೆಯ ಪರಿಣಾಮ ಹೆಚ್ಚುತ್ತದೆ, ಮತ್ತು ಅನಗತ್ಯ ಆಡಳಿತ ವೆಚ್ಚ ತಪ್ಪುತ್ತದೆ ಎಂದು ಸೋಮನಾಥನ್ ಹೇಳಿದರು.

 ಅನಗತ್ಯ ಸಬ್ಸಿಡಿ ನಿಲ್ಲಿಸಿ

ಅನಗತ್ಯ ಸಬ್ಸಿಡಿ ನಿಲ್ಲಿಸಿ

ಕೇಂದ್ರದ ಪ್ರಕಾರ ರಾಜ್ಯ ಸರಕಾರಗಳ ಆದಾಯ ಕೊರತೆ ನೀತಿಸಲು ಇರುವ ಪ್ರಮುಖ ಆಯ್ಕೆಗಳಲ್ಲಿ ಸಬ್ಸಿಡಿಗೆ ಕಡಿವಾಣ ಹಾಕುವುದೂ ಒಂದು. ಅಂದರೆ, ಅನಗತ್ಯ ಸಬ್ಸಿಡಿ ಅಥವಾ ಅಸಮರ್ಪಕ ಸಬ್ಸಿಡಿಯನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು.

ನಿಶ್ಚಿತ ಗುರಿ ಇಲ್ಲದೇ ನೀಡುವ ಸಬ್ಸಿಡಿಯಿಂದ ಏನೂ ಪ್ರಯೋಜನ ಇಲ್ಲ. ಸಬ್ಸಿಡಿಯಿಂದಾಗಿ ಪರಿಸರಕ್ಕೆ ಹಾನಿಯಾಗುವುದಾದರೆ ಅಥವಾ ಸಂಪನ್ಮೂಲಗಳ ಅತಿ ಬಳಕೆಯಾಗುವುದಾದರೆ ಅಂಥ ಸಬ್ಸಿಡಿಯನ್ನು ಕಡಿಮೆ ಮಾಡಬೇಕು ಎಂದು ಕೇಂದ್ರ ಸರಕಾರದ ಈ ಉನ್ನತ ಅಧಿಕಾರಿ ತಿಳಿಸಿದರು.

ರೈತರಿಗೆ ನೀಡುವ ಉಚಿತ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸೋಮನಾಥನ್ ಉದಾಹರಣೆಯಾಗಿ ನೀಡಿದರು. ರೈತರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿರುವುದರಿಂದ ಆದಾಯಕ್ಕೆ ಧಕ್ಕೆಯಾಗುತ್ತದೆ, ದುರ್ಬಳಕೆ ಹೆಚ್ಚಾಗುತ್ತದೆ. ಅತಿಯಾಗಿ ನೀರಿನ ಬಳಕೆಗೆ ಉತ್ತೇಜನ ಕೊಟ್ಟಂತಾಗುತ್ತದೆ. ಕೃಷಿ ಬಳಕೆ ಹೆಸರಿನಲ್ಲಿ ವಿದ್ಯುತ್ ಕಳ್ಳತನ ಹೆಚ್ಚುತ್ತದೆ ಎಂದ ಅವರು, ವಿದ್ಯುತ್ ಮೀಟರ್ ಅಳವಡಿಸಿದರೆ ವಿದ್ಯುತ್ ಪೋಲು ತಡೆಯಬಹುದು ಎಂದರು.

 ಸಾಲದ ಶೂಲ

ಸಾಲದ ಶೂಲ

ರಾಜ್ಯ ಸರಕಾರಗಳ ಶೇ. 90ರಷ್ಟು ಆದಾಯವು ಸಂಬಳ, ಪಿಂಚಣಿ, ಸಬ್ಸಿಡಿಗಳಿಗೇ ವೆಚ್ಚವಾಗುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳ ಉಳಿಯುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅಭಿಪ್ರಾಯಪಟ್ಟರು.

ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ, ನೀರಿನ ಶುಲ್ಕ ಇತ್ಯಾದಿ ಸರಕಾರಿ ಸೇವೆಗಳ ಬೆಲೆಯನ್ನು ನಿಯಮಿತವಾಗಿ ಹೆಚ್ಚಿಸಬೇಕು. ಇದರಿಂದ ಹಣದುಬ್ಬರದ ಸ್ಥಿತಿಗೆ ಸರಿಹೊಂದಿಸಬಹುದು. ಹಾಗೆಯೇ, ಸಿಗರೇಟು, ಮದ್ಯ ಇತ್ಯಾದಿ ಮೇಲೂ ಆಗಾಗ್ಗೆ ಅಬಕಾರಿ ಸುಂಕ ಹೆಚ್ಚಿಸಬೇಕು ಎಂದೂ ಆದಾಯ ಸಾಧ್ಯತೆಗಳನ್ನು ಅವರು ರಾಜ್ಯ ಸರಕಾರಗಳಿಗೆ ತೆರೆದಿಟ್ಟರು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+