Silver Price: ದುಬಾರಿ ಬೆಳ್ಳಿ: ಕೇಜಿಗೆ 1 ಲಕ್ಷ- ಕೊಳ್ಳುವ ಮುನ್ನ ಬೆಲೆ ಕೇಳಿ!
ಚಿನ್ನಾಭರಣಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆಭರಣ ಮತ್ತು ಕೈಗಾರಿಕೆ ಎರಡೂ ವಲಯಗಳಲ್ಲಿ ಪ್ರಮುಖವಾಗಿ ಬಳಕೆಯಾಗುವ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ಸಾರ್ವಕಾಲಿಕ ಗರಿಷ್ಠ ಎನ್ನಬಹುದಾದ 1 ಲಕ್ಷ ರೂಪಾಯಿ ತಲುಪಿದೆ.
ಇದು ಹಬ್ಬ ಮತ್ತು ಶುಭ ಸಮಾರಂಭಗಳಿಗೆ ಬೆಳ್ಳಿ ಆಭರಣ ಖರೀದಿಗೆ ಮುಂದಾಗಿದ್ದರವರಿಗೆ ಭಾರೀ ಶಾಕ್ ನೀಡಿದೆ. ತಿಂಗಳ ಹಿಂದಷ್ಟೇ ಕೆಜಿಗೆ 83,000 ರೂಪಾಯಿ ಆಸುಪಾಸಿನಲ್ಲಿದ್ದ ಬೆಳ್ಳಿ ಬೆಲೆ ಕಳೆದ 3 ದಿನಗಳಲ್ಲಿ 6000-7000 ರೂಪಾಯಿನಷ್ಟು ಹೆಚ್ಚಳವಾಗಿದೆ. ಪರಿಣಾಮ ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ 1 ಲಕ್ಷ ರೂಪಾಯಿಗಳ ಗಡಿ ದಾಟಿದೆ.

ಚಿನ್ನದ ಪ್ರಮುಖ ಮಾರುಕಟ್ಟೆಗಳಾದ ಚೆನ್ನೈ, ಹೈದ್ರಾಬಾದ್, ತಿರುವನಂತಪುರ, ಕಟಕ್ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಬೆಳ್ಳಿ ಬೆಲೆ ಕೆಜಿಗೆ 1 ಲಕ್ಷ ರೂಪಾಯಿಗಳ ಗಡಿ ದಾಟಿದೆ.
ಬೆಳ್ಳಿ ಬೆಲೆ ಏರಿಕೆ:-
ವರ್ಷ - ದರ
1980-2500
2004-10000
2010-25000
2011-50000
2024-100000
ಬೆಲೆ ಏರಿಕೆಗೆ ಕಾರಣ ಏನು?
*ಮಧ್ಯ ಪ್ರಾಚ್ಯ ಬಿಕ್ಕಟ್ಟು ಇತ್ಯಾರ್ಥವಾಗದೇ ಇರುವುದು
*ಬೇಡಿಕೆ, ಲಭ್ಯತೆ ನಡುವಿನ ವ್ಯತ್ಯಾಸ ದಿನೇ ದಿನೇ ಏರಿಕೆ
*ಕೈಗಾರಿಕಾ ವಲಯದಿಂದ ಬೆಳ್ಳಿಗೆ ಭಾರೀ ಬೇಡಿಕೆ ವ್ಯಕ್ತ

ಉಳಿದಂತೆ ದೆಹಲಿಯಲ್ಲಿ 97100 ರೂಪಾಯಿ, ಮುಂಬೈನಲ್ಲಿ 94180 ರೂಪಾಯಿ, ಬೆಂಗಳೂರಿನಲ್ಲಿ 97100 ರೂಪಾಯಿ ತಲುಪಿದೆ. ಇದೇ ವೇಳೆ ಬುಧವಾರ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250 ರೂಪಾಯಿ ಏರಿಕೆ ಕಂಡು 73200 ರೂಪಾಯಿ ತಲುಪಿದೆ.
ಬೆಲೆ ಏರಿಕೆ:
ಚಿನ್ನವನ್ನು ಕೇವಲ ಆಭರಣ ಅಥವಾ ಹೂಡಿಕೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಬೆಳ್ಳಿಯನ್ನು ಆಭರಣದ ಜೊತೆಗೆ ಕೈಗಾರಿಕಾ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.

ಕಳೆದ ಕೆಲ ವರ್ಷಗಳಿಂದ ಉತ್ಪಾದನೆ ಹಿಂದಿನ ಮಟ್ಟದಲ್ಲೇ ಮುಂದುವರೆದಿದ್ದರೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಎಲೆಕ್ಟ್ರಿಕ್ ವಾಹನಗಳು ಸೌರಫಲಕ, ಐದು ಜಿ ಆ್ಯಂಟೆನಾ, ಫೋಟೋಗ್ರಾಫಿ ಮೋದಲಾದ ವಲಯಗಳಲ್ಲಿ ಬೇಡಿಕೆ ಹೆಚ್ಚಳವಾಗಿರುವುದು ಕಳೆದ ಕೆಲ ವರ್ಷಗಳಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆ ಕಾರಣವಾಗಿದೆ.
ಮತ್ತೊಂದೆಡೆ ಮಧ್ಯಪ್ರಾಚ್ಯ ದೇಶಗಳ ಮೂಲಕ ಹಾದುಹೋಗುವ ಸರಕು ಹಡಗುಗಳ ಮೇಲೆ ಮುಂದುವರೆದ ದಾಳಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಜೊತೆಗೆ ಅಮೆರಿಕದಲ್ಲಿ ಹಣದುಬ್ಬರದ ಆತಂಕ ಮುಂದುವರೆದಿರುವುದು ಕೂಡ ಬೆಳ್ಳಿ ಬೆಲೆ ದಾಖಲೆ ಮಟ್ಟ ತಲುಪಲು ಕಾರಣವಾಗಿದೆ.












Click it and Unblock the Notifications