Sabarimala Gold Theft: ಶಬರಿಮಲೆ ಚಿನ್ನ ಕಳವು ಆರೋಪ, ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರಂಟಿ ಎಂದರು ಪ್ರಧಾನಿ ಮೋದಿ
ಕೇರಳ ರಾಜ್ಯ ಇಡೀ ದೇಶದಲ್ಲೇ ಅತಿಹೆಚ್ಚು ಹೆಸರು ಮಾಡಿರುವುದು ಪುಣ್ಯಕ್ಷೇತ್ರ ಶಬರಿಮಲೆ ದೇಗುಲದ ವಿಚಾರಕ್ಕೆ. ಪ್ರತಿವರ್ಷ ಶಬರಿಮಲೆ ದೇಗುಲಕ್ಕೆ ಹತ್ತಾರು ಲಕ್ಷ ಭಕ್ತರ ಭೇಟಿ ನಿಡುತ್ತಾರೆ, ಹಾಗೇ ಕೋಟಿ ಕೋಟಿ ಭಕ್ತರು ಅಯ್ಯಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುತ್ತಾರೆ. ಹೀಗಿದ್ದಾಗ ಇಂತಹ ಪುಣ್ಯಕ್ಷೇತ್ರ ಶಬರಿಮಲೆ ದೇವಸ್ಥಾನದಲ್ಲೇ ಚಿನ್ನ ಕಳವು ಆಗಿರುವ ಆರೋಪ ಕೇಳಿಬಂದಿತ್ತು. ಇದೇ ವಿಚಾರ ದೇಶದ ಮೂಲೆ, ಮೂಲೆಯಲ್ಲೂ ಕಿಚ್ಚು ಹೊತ್ತಿಸಿತ್ತು. ಹೀಗಿದ್ದಾಗ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬ ಆಗ್ರಹ ಮಾಡುತ್ತಿದ್ದರು ಭಕ್ತರು. ಇದೀಗ ಪ್ರಧಾನಿ ಮೋದಿ ಅವರೇ ಈ ವಿಚಾರದಲ್ಲಿ ಮಹತ್ವದ ಮಾತು ಕೊಟ್ಟಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಪ್ರಧಾನಿ ಮೋದಿ ಅವರು ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಮುಂಬರುವ ರಾಜ್ಯ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಶಬರಿಮಲೆ ಚಿನ್ನ ನಷ್ಟವನ್ನು ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ. ಈ ಮೂಲಕ ಅಪರಾಧಿಗಳನ್ನು ಜೈಲಿಗೆ ಹಾಕಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಪ್ರಜೆಗಳಿಗೆ ದೊಡ್ಡ ಭರವಸೆ ನೀಡಿದ್ದಾರೆ. ಅಲ್ಲದೇ "ಇದು ಮೋದಿ ಅವರ ಗ್ಯಾರಂಟಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ತಪ್ಪಿತಸ್ಥರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಹಾಗೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಈ ವಿಚಾರ ಖುಷಿ ಕೊಟ್ಟಿದೆ.

ತಪ್ಪು ಮಾಡಿದವರು ಗ್ಯಾರಂಟಿ ಜೈಲಿಗೆ
ಇಡೀ ದೇಶ ಮತ್ತು ನಾವೆಲ್ಲರೂ ಭಗವಾನ್ ಅಯ್ಯಪ್ಪ ಸ್ವಾಮಿಯ ಮೇಲೆ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ಹೀಗಿದ್ದರೂ ಎಲ್‌ಡಿಎಫ್ ಸರ್ಕಾರ ಶಬರಿಮಲೆ ದೇವಸ್ಥಾನದ ಸಂಪ್ರದಾಯಗಳಿಗೆ ಹಾನಿ ಮಾಡುತ್ತಲೇ ಬಂದಿದೆ. ಈಗ ಚಿನ್ನ ಕಳ್ಳತನ ಆರೋಪ ಕೇಳಿಬಂದಿದೆ. ದೇವಾಲಯದಿಂದ, ಭಗವಂತನ ಪಕ್ಕದಿಂದ ಚಿನ್ನ ಕಳವು ಮಾಡಿದ್ದಾರೆ ಎನ್ನುತ್ತಿವೆ ವರದಿಗಳು. ನಾನು ಒಂದು ವಿಷಯ ಸ್ಪಷ್ಟಪಡಿಸಲು ಬಯಸುತ್ತೇನೆ, ಇಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕ್ಷಣ, ಚಿನ್ನ ಕಳವು ಆರೋಪದ ಕುರಿತು ಸಂಪೂರ್ಣ ತನಿಖೆ ನಡೆಯುತ್ತದೆ ಹಾಗೂ ಅಪರಾಧಿಗಳು ಜೈಲು ಸೇರುವುದು ಖಚಿತ ಎಂದಿದ್ದಾರೆ ಪಿಎಂ ಮೋದಿ ಅವರು.
ಚುನಾವಣೆ ಸಮಯದಲ್ಲಿ ಸರ್ಕಾರಕ್ಕೆ ನಷ್ಟ?
ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳವು ಮಾಡಲಾಗಿದೆ ಎಂಬ ಆರೋಪ ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಇದರ ಜೊತೆಗೆ ಚಿನ್ನ ಕಳವು ಆರೋಪ ರಾಜಕೀಯ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಸೇರಿ ದೇವಾಲಯದ ದ್ವಾರಪಾಲಕರು ಎಂದರೆ ರಕ್ಷಕರ ವಿಗ್ರಹಗಳ ಮೇಲೆ ಹಾಕಲಾಗಿರುವ ಚಿನ್ನದ ಪ್ಲೇಟ್‌ಗಳಿಂದ ಬಂಗಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಈಗ ಆರೋಪದ ಕುರಿತು ಕೇರಳ ಪೊಲೀಸರ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಕೇರಳ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ.
ಕೇರಳ ರಾಜ್ಯದ ವಿಧಾನಸಭೆ ಚುನಾವಣೆ
ಇನ್ನೇನು ಕೆಲವೇ ದಿನಗಳಲ್ಲಿ ದೇಶದ 4 ದೊಡ್ಡ ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಕ್ಕೆ ಎಲೆಕ್ಷನ್ ನಡೆಯಲಿದೆ. ಕೇರಳದಲ್ಲೂ ಚುನಾವಣೆ ನಡೆಯಲಿದ್ದು, ಇದೀಗ ಕೇರಳ ಸರ್ಕಾರಕ್ಕೆ ಶಬರಿಮಲೆಯ ದೇವಸ್ಥಾನದಲ್ಲಿ ಚಿನ್ನ ಕಳವು ಆರೋಪ ವಿಚಾರ ಹಿನ್ನಡೆ ಉಂಟುಮಾಡುವ ವಾತಾವರಣ ಸೃಷ್ಟಿಸಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಜೊತೆಗೆ ಕೇರಳ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. 140 ಸ್ಥಾನ ಹೊಂದಿರುವ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ ಬಹುಮತ ಪಡೆದು, ಸರ್ಕಾರ ನಡೆಸುತ್ತಿದೆ. ಸಿಎಂ ಪಿಣರಾಯಿ ವಿಜಯನ್ ಮತ್ತೊಂದು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದು ಕೂರಿಸುವ ಪಣತೊಟ್ಟು ಚುನಾವಣೆಗೆ ಸಜ್ಜಾಗಿದ್ದರು. ಆದರೆ ಶಬರಿಮಲೆ ವಿವಾದದ ನಂತರ ಎಲ್ಲವೂ ಬದಲಾಗುತ್ತಾ? ಎಂಬ ಚರ್ಚೆ ಶುರುವಾಗಿದೆ.












Click it and Unblock the Notifications