ಭಾರತದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯಹರಣ: ಡಬ್ಲ್ಯೂಪಿಎಫ್ ಸಮೀಕ್ಷೆ
ನವದೆಹಲಿ, ಮೇ 4: ಭಾರತದಲ್ಲಿ ಇತ್ತೀಚೆಗೆ ಪತ್ರಿಕಾ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆಯಾಗಿದೆ ಎಂದು ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ. ವರ್ಲ್ಡ್ ಪ್ರೆಸ್ ಫ್ರೀಡಂ ಇಂಡೆಕ್ಸ್ 2022 ಪಟ್ಟಿಯಲ್ಲಿ ಭಾರತ 150ನೇ ಸ್ಥಾನಕ್ಕೆ ಕುಸಿದಿದೆ. ಇದು ಪತ್ರಿಕಾ ಸ್ವಾತಂತ್ರ್ಯ ಇರುವ ದೇಶಗಳ ಪಟ್ಟಿಯಾಗಿದೆ. ಒಟ್ಟು 180 ದೇಶಗಳಲ್ಲಿ ಭಾರತ 150ನೇ ಸ್ಥಾನ ಪಡೆದಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಭಾರತ 142ನೇ ಸ್ಥಾನ ಪಡೆದಿತ್ತು. ಈ ವರ್ಷ ಇನ್ನೂ 8 ಸ್ಥಾನಗಳಷ್ಟು ಕುಸಿದಿದೆ.
ವರ್ಲ್ಡ್ ಪ್ರೆಸ್ ಫ್ರೀಡಂ ಇಂಡೆಕ್ಸ್ ಸಮೀಕ್ಷೆ ಪ್ರಕಾರ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕೆಟ್ಟ ಕಾಲ ಇದೆ. 2016ರಲ್ಲಿ 133ನೇ ಸ್ಥಾನದಲ್ಲಿದ್ದ ಭಾರತ ಆಗಿನಿಂದ ಪ್ರತೀ ವರ್ಷವೂ ಪಟ್ಟಿಯಲ್ಲಿ ಕೆಳಗಿಳಿಯುತ್ತಲೇ ಇದೆ. ಮಾಧ್ಯಮಗಳಿಗೆ ಅತ್ಯಂತ ಅಪಾಯಕಾರಿ ಎನಿಸಿರುವ ದೇಶಗಳ ಪೈಕಿ ಭಾರತ ಇದೆ. ಇಲ್ಲಿ ಪ್ರತೀ ವರ್ಷ ಸರಾಸರಿಯಾಗಿ ಮೂರು ಅಥವಾ ನಾಲ್ಕು ಪತ್ರಕರ್ತರ ಹತ್ಯೆಯಾಗುತ್ತಿದೆ ಎಂದು ಸಮೀಕ್ಷೆಯು ಹೇಳಿದೆ.
ಏನಿದು ವರ್ಲ್ಡ್ ಪ್ರೆಸ್ ಫ್ರೀಡಂ ಇಂಡೆಕ್ಸ್?: ಪ್ರೆಸ್ ಫ್ರೀಡಂ ಇಂಡೆಕ್ಸ್ ಅನ್ನು ವಿಶ್ವಾದ್ಯಂತ ವಿವಿಧ ದೇಶಗಳ ಪತ್ರಕರ್ತರು ಸಿದ್ಧಪಡಿಸುತ್ತಾರೆ. 1985ರಲ್ಲಿ ಫ್ರಾನ್ಸ್‌ನಲ್ಲಿ ಪ್ರಾರಂಭವಾದ ಗಡಿರಹಿತ ಪತ್ರಕರ್ತರು (ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ | RSF- Reporters Sans Frontiers) ಎಂಬ ಲಾಭರಹಿತ ಎನ್‌ಜಿಒ 2002ರಿಂದಲೂ ಪ್ರತೀ ವರ್ಷ ಪ್ರೆಸ್ ಫ್ರೀಡಂ ಸೂಚಿ ಸಿದ್ಧಪಡಿಸುತ್ತಾ ಬಂದಿದೆ.

ವಿವಿಧ ದೇಶಗಳಲ್ಲಿ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಎಷ್ಟರಮಟ್ಟಿಗೆ ವಾಕ್ ಸ್ವಾತಂತ್ರ್ಯ ಇದೆ, ಇವರ ಹಕ್ಕು ರಕ್ಷಣೆಗೆ ಸರಕಾರ ಎಷ್ಟು ಮುತುವರ್ಜಿ ತೋರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಆದರೆ, ಈ ಪಟ್ಟಿಯು ಕೇವಲ ಮಾಧ್ಯಮ ಸ್ವಾತಂತ್ರ್ಯಕ್ಕಷ್ಟೇ ಸೀಮಿತವಾಗಿದೆ. ಒಂದು ದೇಶದ ಮಾಧ್ಯಮ ಗುಣಮಟ್ಟ ಇತ್ಯಾದಿ ಅಂಶಗಳನ್ನ ಪರಿಗಣಿಸಲಾಗುವುದಿಲ್ಲ.
ಭಾರತಕ್ಕಿಂತ ಚೀನಾದ ಪರಿಸ್ಥಿತಿ ಇನ್ನೂ ಕಳಪೆ: ಮಾಧ್ಯಮ ಸ್ವಾತಂತ್ರ್ಯ ಅತ್ಯಂತ ಅಪಾಯದಲ್ಲಿರುವ ದೇಶಗಳ ಪೈಕಿ ಭಾರತದ ಜೊತೆ ಚೀನಾ, ರಷ್ಯಾವೂ ಇದೆ. ಉತ್ತರ ಕೊರಿಯಾ 180 ಮತ್ತು ಕೊನೆಯ ಸ್ಥಾನದಲ್ಲಿದೆ. ಚೀನಾ (175) ಮತ್ತು ರಷ್ಯಾ (155) ಭಾರತಕ್ಕಿಂತ ಪಟ್ಟಿಯಲ್ಲಿ ಕೆಳಗಿವೆ. ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಮಾಧ್ಯಮಗಳಿಗೆ ಅತಿ ಹೆಚ್ಚು ಸ್ವಾತಂತ್ರ್ಯ ಇರುವ ದೇಶಗಳ ಪಟ್ಟಿಯಲ್ಲಿ ನಾರ್ವೆ ಅಗ್ರಸ್ಥಾನದಲ್ಲಿದೆ. ಡೆನ್ಮಾರ್ಕ್, ಸ್ವೀಡನ್, ಎಸ್ಟೋನಿಯಾ ಮತ್ತು ಫಿನ್‌ಲೆಂಡ್ ದೇಶಗಳು ಅಗ್ರ ಐದರಲ್ಲಿ ಇರುವ ಇತರ ದೇಶಗಳಾಗಿವೆ. ಅಮೆರಿಕ 42ನೇ ಸ್ಥಾನ ಪಡೆದಿದೆ.
ಮಾಧ್ಯಮ ಸ್ವಾತಂತ್ರ್ಯ ವಿಚಾರದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಭಾರತ ನಕಾರಾತ್ಮಕವಾಗಿರಲು ಅಪಾರ ಸಂಖ್ಯೆಯ ಮಾಧ್ಯಮ ಸಂಸ್ಥೆಗಳೇ ಪ್ರಮುಖ ಕಾರಣ ಎಂದು ಭಾವಿಸಲಾಗಿದೆ. ಈ ವರದಿ ಪ್ರಕಾರ ಭಾರತದಲ್ಲಿ 36 ಸಾವಿರ ಸಾಪ್ತಾಹಿಕಗಳಿವೆ. 380 ಟಿವಿ ನ್ಯೂಸ್ ಚಾನಲ್‌ಗಳಿವೆ. ಇದು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿಯಲು ಕಾರಣ ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications