ಗುಜರಾತ್ ಬಗ್ಗೆ ಇದ್ದ ನಂಬಿಕೆ ಬುಡಮೇಲು
ಬೆಂಗಳೂರು, ಸೆ.27: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಗುಜರಾತ್ ರಾಜ್ಯ ಅಭಿವೃದ್ಧಿಯಲ್ಲಿ ನಂ.1 ಎಂಬ ಹಣೆಪಟ್ಟಿ ಹೊತ್ತಿರುವುದು ನಿಜಕ್ಕೂ ಸತ್ಯವೇ? ಎಂಬ ಅನುಮಾನ ಮೂಡುವಂಥ ವರದಿಯನ್ನು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ನೇತೃತ್ವದ ಸಮಿತಿ ಪ್ರಕಟಿಸಿದೆ.
ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ನೇತೃತ್ವದ ಸಮಿತಿ ನೀಡಿರುವ ವರದಿಯಂತೆ ಕರ್ನಾಟಕ ಮತ್ತು ಗುಜರಾತ್ ಕಡಿಮೆ ಅಭಿವೃದ್ಧಿ ಸಾಧಿಸಿದ ರಾಜ್ಯಗಳ ಪಟ್ಟಿಯಲ್ಲಿವೆ.
ಬಿಹಾರ ಸಹಿತ ಹಲವು ರಾಜ್ಯಗಳ ವಿಶೇಷ ಸ್ಥಾನಮಾನ ಬೇಡಿಕೆ ಕುರಿತಂತೆ ಅಧ್ಯಯನ ನಡೆಸಲು ಕೇಂದ್ರ ಸರಕಾರ ನೇಮಿಸಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ನೇತೃತ್ವದ ಸಮಿತಿಯು ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವುದನ್ನು ಕೈಬಿಡಬೇಕು ಎಂದು ಸಲಹೆ ನೀಡಿದೆ.
ಇದರ ಬದಲಿಗೆ ಬಹುಮುಖಿ ಸೂಚ್ಯಂಕವನ್ನು (ಎಂಡಿಐ) ಆಧರಿಸಿ ಆಯಾ ರಾಜ್ಯಗಳ ನಿರ್ವಹಣೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಅನುದಾನ ನೀಡಬೇಕೆಂದು ಸಮಿತಿ ಹೇಳಿದೆ.
ರಾಜ್ಯಗಳನ್ನು ಹಿಂದುಳಿದ ರಾಜ್ಯಗಳು, ಕಡಿಮೆ ಅಭಿವೃದ್ಧಿ ಸಾಧಿಸಿದ ರಾಜ್ಯಗಳು ಮತ್ತು ಅಭಿವೃದ್ಧಿ ಹೊಂದಿದ ರಾಜ್ಯಗಳು ಎಂದು ಸಮಿತಿಯು ಪಟ್ಟಿ ಮಾಡಿದ್ದು, ಕರ್ನಾಟಕ ಮತ್ತು ಗುಜರಾತ್ ಕಡಿಮೆ ಅಭಿವೃದ್ಧಿ ಸಾಧಿಸಿದ ರಾಜ್ಯಗಳ ಪಟ್ಟಿಯಲ್ಲಿವೆ.

ಎಂಡಿಐ ಆಧರಿತ ಪಟ್ಟಿಯಲ್ಲಿ ಬಿಹಾರ ಮತ್ತು ಒಡಿಶಾ ಹಿಂದುಳಿದ ರಾಜ್ಯಗಳೆಂದು ತಿಳಿದುಬಂದಿದ್ದು, ಗೋವಾ ಮತ್ತು ಕೇರಳ ಅಭಿವೃದ್ಧಿಯಲ್ಲಿ ಮುಂದಿರುವ ರಾಜ್ಯಗಳಾಗಿವೆ.
ವಿಶೇಷ ಸ್ಥಾನಮಾನ ನೀಡುವಂತೆ ಹಲವು ರಾಜ್ಯಗಳು ಆಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಆಗ ವಿಶೇಷ ಆರ್ಥಿಕ ಸಲಹೆಗಾರರಾಗಿದ್ದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ನೇತೃತ್ವದಲ್ಲಿ ಸಮಿತಿ ರಚಿಸಿ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಮೂರು ವರ್ಗಗಳಾಗಿ ವಿಂಗಡಣೆ : ''ಎಂಡಿಐ ಸೂಚ್ಯಂಕಗಳ ಅನ್ವಯ ದೇಶದ 28 ರಾಜ್ಯಗಳನ್ನು ಹಿಂದುಳಿದ, ಕಡಿಮೆ ಅಭಿವೃದ್ಧಿ ಹಾಗೂ ಮುಂದುವರಿದ ರಾಜ್ಯಗಳೆಂದು ವಿಂಗಡಿಸಲಾಗಿದೆ,'' ಎಂದು ವರದಿ ಕುರಿತಂತೆ ವಿವರಣೆ ನೀಡಿದ ವಿತ್ತ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
''ಪ್ರತಿಯೊಂದು ರಾಜ್ಯಕ್ಕೂ ನಿಗದಿತ ಪ್ರಮಾಣದ ಅನುದಾನವನ್ನು ಕಡ್ಡಾಯವಾಗಿ ನೀಡಬೇಕು. ಇನ್ನು ಹಿಂದುಳಿದ ರಾಜ್ಯಗಳಿಗೆ ಆಯಾ ರಾಜ್ಯಗಳ ನಿರ್ವಹಣೆ ಮತ್ತು ಆಭಿವೃದ್ಧಿ ಅಗತ್ಯಗಳನ್ನು ಆಧರಿಸಿ ಹೆಚ್ಚುವರಿ ನೆರವು ಒದಗಿಸಬಹುದು,'' ಎನ್ನುವುದು ಸಮಿತಿ ನೀಡಿರುವ ವರದಿಯ ಸಾರಾಂಶ ಎಂದು ಚಿದು ತಿಳಿಸಿದರು. ಆರ್ಥಿಕ ವ್ಯವಹಾರಗಳ ಇಲಾಖೆಯು ವರದಿಯ ಸಮಗ್ರ ಅಧ್ಯಯನ ನಡೆಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ನುಡಿದರು.
ಎಂಡಿಐ: ಜನರ ತಲಾ ಆದಾಯ, ಬಡತನ ರೇಖೆ, ರಾಜ್ಯಗಳ ಆರ್ಥಿಕ ನಿರ್ವಹಣೆ ಮೊದಲಾದ ಅಂಶಗಳನ್ನು ಆಧರಿಸಿ ಬಹುಮುಖಿ ಸೂಚ್ಯಂಕ ಸಿದ್ಧಪಡಿಸಲಾಗಿದೆ.
ಹಿಂದುಳಿದ 10 ರಾಜ್ಯಗಳು: ಒಡಿಶಾ, ಬಿಹಾರ, ಮಧ್ಯಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಉತ್ತರ ಪ್ರದೇಶ, ರಾಜಸ್ಥಾನ.
ಕಡಿಮೆ ಅಭಿವೃದ್ಧಿ ಹೊಂದಿರುವ ರಾಜ್ಯಗಳು: ಮಣಿಪುರ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಆಂಧ್ರಪ್ರದೇಶ, ಜಮ್ಮು ಕಾಶ್ಮೀರ, ಮಿಜೋರಾಂ, ಗುಜರಾತ್, ತ್ರಿಪುರಾ, ಕರ್ನಾಟಕ, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ.
ಅಭಿವೃದ್ಧಿ ರಾಜ್ಯಗಳು: ಗೋವಾ, ಕೇರಳ, ತಮಿಳುನಾಡು, ಪಂಜಾಬ್, ಮಹಾರಾಷ್ಟ್ರ, ಉತ್ತರಾಖಂಡ್ ಮತ್ತು ಹರಿಯಾಣ.












Click it and Unblock the Notifications