
Invest Karnataka 2022: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ
ಬೆಂಗಳೂರು, ನ.2: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಬುಧವಾರ ನೀಡಿದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದರು.
'ಕರ್ನಾಟಕದ ಮಣ್ಣು ಎಲ್ಲಕ್ಕಿಂತ ಸುಂದರವಾಗಿದೆ. ಕನ್ನಡಿಗರು ತಮ್ಮ ಭಾಷೆಯನ್ನೇ ಜೀವಾಳವಾಗಿ ಇರಿಸಿಕೊಂಡಿದ್ದಾರೆ' ಎಂದು ಹೇಳಿದರು.
Invest Karnataka2022 - Global Investors Meet https://t.co/x915jZOVzi
— Dr. Murugesh R Nirani (@NiraniMurugesh) November 2, 2022
ಕರ್ನಾಟಕ ರಾಜಧಾನಿಯಾದ ಬೆಂಗಳೂರು ಇಡೀ ಜಗತ್ತಿನಲ್ಲಿ ಬ್ರ್ಯಾಂಡ್ ಆಗಿದೆ. ಈ ನಗರದಲ್ಲಿ ಸಂಪ್ರದಾಯ ಹಾಗೂ ತಂತ್ರಜ್ಞಾನ ಜೊತೆಯಾಗಿ ಸಾಗುತ್ತಿವೆ. ನಿಸರ್ಗ ಹಾಗೂ ಸಂಸ್ಕೃತಿ ಒಟ್ಟೊಟ್ಟಿಗೆ ಬಾಳುತ್ತಿವೆ. ನಾವು ನೈಪುನ್ಯತೆ ಹಾಗೂ ತಂತ್ರಜ್ಞಾನ ಕುರಿತು ಮಾತನಾಡುತ್ತಿರುವಾಗ, ನಮಗೆ ಮೊದಲು ನೆನಪಾಗುವುದು ಬೆಂಗಳೂರು' ಎಂದು ಹೇಳಿದರು.
ಕೊವಿಡ್‌ನಿಂದ ಜಗತ್ತು ಸಂಕಷ್ಟಕ್ಕೆ ಒಳಗಾಗಿದೆ. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲೂ ನಾವು ದೃಢವಾಗಿದ್ದೇವೆ. ಭಾರತಕ್ಕೆ ಉತ್ತಮ ಭವಿಷ್ಯ ಇದೆ ಎಂದು ಪರಿಣಿತರು ಹೇಳಿದ್ದಾರೆ. ಭಾರತದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ತಿಳಿಸಿದರು.
ಬಂಡವಾಳ ಹೂಡಿಕೆದಾರರಿಗೆ ನಾವು ಸ್ವಾತಂತ್ರ್ಯ ನೀಡಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಪ್ರೇರಣೆ ನೀಡಿದ್ದೇವೆ. ಡ್ರೋನ್, ರಕ್ಷಣೆ, ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಖಾಸಗಿ ವಲಯಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಹಳೆಯ ನೀತಿಗಳನ್ನು ತೆಗೆದುಹಾಕಿದ್ದೇವೆ ಎಂದು ಹೇಳಿದರು.

ಕರ್ನಾಟಕ ಹಾಗೂ ದೇಶದಲ್ಲಿ ಒಂದೇ ಪಕ್ಷದ ಆಡಳಿತವಿದೆ. ಕರ್ನಾಟಕ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಸ್ಟಾರ್ಟ್‌ಅಪ್‌ಗಳಲ್ಲಿ ಮುಂದಿದೆ. ಇಲ್ಲಿನ ಜನರ ಪ್ರತಿಭೆಗೆ ಜಗತ್ತು ಬೆರಗಾಗಿದೆ ಎಂದು ತಿಳಿಸಿದರು.
ಈ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯಪಾಲ ತಾವರ್‌ಚಂದ್ ಗೆಹಲೋಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.