ಸತತ ಮೂರನೇ ದಿನದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ
ನವದೆಹಲಿ, ನ. 22: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರುಪೇರು ಉಂಟಾಗುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶುಕ್ರವಾರದಿಂದ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುತ್ತಿವೆ. ಭಾನುವಾರ(ನ.22) ಕೂಡಾ ಇಂಧನ ದರ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಮಾಹಿತಿ ಪ್ರಕಾರ, ಭಾನುವಾರದಂದು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್ ಮೇಲೆ 8 ಪೈಸೆ ಹಾಗೂ ಡೀಸೆಲ್ ದರದಲ್ಲಿ 19ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಎರಡು ತಿಂಗಳ ನಂತರ ತೈಲ ದರದಲ್ಲಿ ಏರಿಕೆ ಕಾಣಲಾಗುತ್ತಿದೆ. ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ 81.38 ರು/1 ಲೀಟರ್ ಇದ್ದ ಪೆಟ್ರೋಲ್ ದರ 81.46 ರು ಆಗಿದೆ. ಇದೇ ವೇಳೆ ಡೀಸೆಲ್ ದರ ಪ್ರತಿ ಲೀಟರ್ 70. 88ರು ನಿಂದ 71. 07ರು ಪ್ರತಿ ಲೀಟರ್ ಆಗಿದೆ.
ಸತತ ಮೂರು ದಿನಗಳಿಂದ ರೀಟೈಲರ್ಸ್ ಬೆಲೆ ಏರಿಕೆ ಮಾಡುತ್ತಿದ್ದು, ಒಟ್ಟಾರೆ ಪೆಟ್ರೋಲ್ ಬೆಲೆ 40 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ 61 ಪೈಸೆ ಏರಿಕೆ ಕಂಡಿದೆ. ಸೆಪ್ಟೆಂಬರ್ 22ರಿಂದ ಪೆಟ್ರೋಲ್ ದರ ಹಾಗೂ ಅಕ್ಟೋಬರ್ 2ರಿಂದ ಡೀಸೆಲ್ ದರದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿರಲಿಲ್ಲ. ಆದರೆ, ಈಗ ಸತತ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ.

ಕೊವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ಜೂನ್ 30 ರಿಂದ ಆಗಸ್ಟ್ 15ರ ಅವಧಿಯಲ್ಲಿ ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸತತ 85ದಿನಗಳ ಕಾಲ (ಮಾರ್ಚ್ 17 ರಿಂದ ಜೂನ್ 6 ಸೇರಿಸಿ) ವಾಹನ ಸವಾರರ ಹಿತ ಕಾಯಲಾಗಿತ್ತು.












Click it and Unblock the Notifications