ಪ್ರತಿ ಲೀಟರ್ ಪೆಟ್ರೋಲ್‌ಗೆ ₹10 ಲಾಭ ಮಾಡಿಕೊಂಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು- ಮಾಹಿತಿ ತಿಳಿಯಿರಿ
ನವದೆಹಲಿ, ಜನವರಿ 07: ಭಾರತದಲ್ಲಿನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಿಂದ 10 ರೂಪಾಯಿ ಲಾಭ ಗಳಿಸಿವೆ. ಇದೇ ಸಮಯದಲ್ಲಿ ಪ್ರತಿ ಲೀಟರ್ ಡಿಸೇಲ್ ಮಾರಾಟದಿಂದ 6.5 ರೂಪಾಯಿ ನಷ್ಟವನ್ನು ತೈಲ ಕಂಪನಿಗಳು ಅನುಭವಿಸಿವೆ ಎಂದು ವರದಿಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಕಳೆದ 15 ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸಿಲ್ಲ. ದರಗಳು ಹೆಚ್ಚಿರುವಾಗ ಉಂಟಾದ ನಷ್ಟವನ್ನು ಭರಿಸುತ್ತಿರುವುದರಿಂದ ಬೆಲೆಗಳನ್ನು ಪರಿಷ್ಕರಿಸಿಲ್ಲವೆಂದು ಹೇಳಿಕೊಂಡಿವೆ.
'ಜೂನ್ 24, 2022 ಕ್ಕೆ ಕೊನೆಗೊಂಡ ವಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ 17.4 ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ ರೂ 27.7 ನಷ್ಟವಾಗಿತ್ತು. 2022ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಿಂದ 10 ರೂಪಾಯಿ ಲಾಭ ಸಿಕ್ಕಿದೆ. ಪ್ರತಿ ಲೀಟರ್ ಡಿಸೇಲ್ ಮಾರಾಟದಿಂದ 6.5 ರೂಪಾಯಿ ನಷ್ಟವಾಗಿದೆ' ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿಯಲ್ಲಿ ತಿಳಿಸಿದೆ.

ಮೂರು ಇಂಧನ ವ್ಯಾಪಾರ ಕಂಪನಿಗಳು (ಐಒಸಿ, ಬಿಪಿಸಿಎಲ್, ಎಚ್‌ಪಿಸಿಎಲ್) ಏಪ್ರಿಲ್ 6, 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬದಲಾಯಿಸಿಲ್ಲ. ಇದು ಕಂಪನಿಗಳಿಗೆ ನಷ್ಟ ಮಾಡಿದೆ ಎಂದು ತಿಳಿದುಬಂದಿದೆ.

ಕಳೆದೆರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದು 2020 ರಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗದ ಪರಿಣಾಮವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. 2022 ರಲ್ಲಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ತೈಲ ಬೆಲೆಗಳಲ್ಲಿ ದಾಖಲೆಯ ಏರಿಕೆ ಕಂಡುಬಂದಿತು. ಇದು ಉಕ್ರೇನ್- ರಷ್ಯಾ ಯುದ್ಧದ ಗಂಭೀರ ಪರಿಣಾಮವಾಗಿತ್ತು. ಮಾರ್ಚ್ 2022 ರಲ್ಲಿ ಬ್ಯಾರೆಲ್‌ಗೆ ಸುಮಾರು 140 ಅಮೆರಿಕನ್ ಡಾಲರ್‌ನಷ್ಟು ಏರಿಕೆ ಕಂಡಿತ್ತು. ಕಳೆದ 14 ವರ್ಷಗಳಲ್ಲಿ ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ.

ಭಾರತದ ಮಾರುಕಟ್ಟೆಯ ಸರಿಸುಮಾರು 90 ಪ್ರತಿಶತವನ್ನು ನಿಯಂತ್ರಿಸುವ ಮೂರು ಇಂಧನ ಚಿಲ್ಲರೆ ವ್ಯಾಪಾರಿಗಳು, ಕನಿಷ್ಠ ಎರಡು ದಶಕಗಳಲ್ಲಿ ದೀರ್ಘಾವಧಿಯವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲು ಮುಂದಾಗಲಿಲ್ಲ. ನವೆಂಬರ್ 2021 ರ ಆರಂಭದಲ್ಲಿ ದೇಶಾದ್ಯಂತ ತೈಲ ದರಗಳು ಸಾರ್ವಕಾಲಿಕ ಗರಿಷ್ಠ ಬೆಲೆಗಳನ್ನು ತಲುಪಿದವು. ಆಗ ದೈನಂದಿನ ಬೆಲೆ ಪರಿಷ್ಕರಣೆಯನ್ನು ನಿಲ್ಲಿಸಲಾಯಿತು. ತಮಗಾದ ನಷ್ಟವನ್ನು ಭರಿಸುವಂತೆ ತೈಲ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ.












Click it and Unblock the Notifications