ಎನ್ಎಸ್ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ಬಂಧಿಸಿದ ಸಿಬಿಐ
ನವದೆಹಲಿ, ಮಾರ್ಚ್ 7: ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಎನ್‌ಎಸ್‌ಇಯ ಹಿಮಾಲಯನ್ ಯೋಗಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣರನ್ನು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಬಂಧಿಸಿದೆ.
ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬ ನಿಗೂಢ ಪ್ರಕರಣ ಭಾರಿ ಕುತೂಹಲ ಕೆರಳಿಸಿತ್ತು.
ಫೆಬ್ರವರಿ 11 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಷೇರು ನಿಯಂತ್ರಕ ಸೆಬಿ ಆದೇಶ ಹೊರಡಿಸಿ, ಚಿತ್ರಾ ರಾಮಕೃಷ್ಣ ಅವರು ನೇಮಕಾತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 3 ಕೋಟಿ ರೂಪಾಯಿ ದಂಡವನ್ನು ವಿಧಿಸಿತ್ತು.
ಏನಿದು ಎನ್‌ಎಸ್‌ಇ ಹಗರಣ ಪ್ರಕರಣ?
ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಎನ್‌ಎಸ್‌ಇಯ ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಯೋಗಿಯ ಸಲಹೆಯನ್ನು ಪಡೆದು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತಿಳಿಸಿದೆ ಎಂದು reuters ವರದಿ ಮಾಡಿದೆ.

4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್ಎಸ್ಇ (NSE)ಗೆ ಮಾಜಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರಾ ರಾಮಕೃಷ್ಣ ತಾನು ನೋಡದ, ತನಗೆ ಪರಿಚಯವೇ ಇಲ್ಲದ ಹಿಮಾಲಯದ ಯೋಗಿಯೋರ್ವರ ಸಲಹೆಯನ್ನು ಪಡೆದುಕೊಂಡೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. NSEಯ ಪ್ರಮುಖ ವ್ಯವಹಾರ ಯೋಜನೆಗಳು ಮತ್ತು ಅಜೆಂಡಾ ಸೇರಿದಂತೆ ಹಲವಾರು ವಿಚಾರಗಳನ್ನು ಆ ಅಪರಿಚಿತ ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬ ವಿಚಾರವನ್ನು ಸೆಬಿ ಬಹಿರಂಗಪಡಿಸಿದೆ.
ಚಿತ್ರಾ ರಾಮಕೃಷ್ಣ ಅವರು 2013 ಮತ್ತು 2016 ರ ನಡುವೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ) ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿದ್ದರು ಮತ್ತು "ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.
ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರು ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ದಾಳಿ ನಡೆಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಯಾರು ಈ ಹಿಮಾಲಯನ್ ಯೋಗಿ?:
ಎನ್ಎಸ್ಇ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸುಬ್ರಮಣಿಯನ್ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಂಧಿಸಿದೆ. ಆನಂದ್ ಸುಬ್ರಮಣಿಯನ್ ಏಪ್ರಿಲ್ 1, 2013 ರಿಂದ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿದ್ದರು. ಅವರು ಏಪ್ರಿಲ್ 01, 2015 ರಿಂದ ಅಕ್ಟೋಬರ್ 21, 2016 ರವರೆಗೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾಗ ಚಿತ್ರಾ ರಾಮಕೃಷ್ಣ ಅವರಿಗೆ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಸಲಹೆಗಾರರಾಗಿ ಮರು ನೇಮಕಗೊಂಡರು.
ಸಿಬಿಐ ಅಧಿಕಾರಿಗಳು ಆನಂದ್ ಸುಬ್ರಮಣಿಯನ್ ಅವರ ನಿವಾಸದಿಂದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಆಗಿನ ಎನ್‌ಎಸ್‌ಇ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಮೇಲೆ ಪ್ರಭಾವ ಬೀರಲು 'ಯೋಗಿ'ಯಂತೆ ನಟಿಸಿದ್ದಾರೆ ಎಂದು ಸೆಬಿ ವರದಿಯಲ್ಲಿ ಹೇಳಲಾಗಿದೆ.
ಈ ಯೋಗಿಗಳೇ ಆನಂದ್ ಸುಬ್ರಮಣಿಯನ್ ಅವರ ನೇಮಕಕ್ಕೆ ಚಿತ್ರಾಗೆ ಮಾರ್ಗದರ್ಶನ ನೀಡಿದ್ದರು ಎಂದು ಕೂಡಾ ವರದಿಯು ಹೇಳಿದೆ. ಈ ಯೋಗಿಗಳು ಎಲ್ಲಾ ವಿಷಯದಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದರು, ರಾಮಕೃಷ್ಣ ಅವರು "ಕೇವಲ ಅವರ ಕೈಯಲ್ಲಿ ಬೊಂಬೆ" ಎಂದು ಸೆಬಿಯು ಹೇಳಿದೆ. ಈ ಯೋಗಿಗಳಿಗೆ ಸೇರಿದ್ದು ಎಂದು ಹೇಳಲಾದ ಇಮೇಲ್ ವಿಳಾಸಕ್ಕೆ ಸೆಬಿಯು ಕಳುಹಿಸಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.












Click it and Unblock the Notifications