
ಹಬ್ಬದ ಸೀಸನ್‌ನಲ್ಲಿ ಅಮೇಜಾನ್ ಮೀರಿಸಿತಾ ಮೀಶೋ?
ನವದೆಹಲಿ, ಅ. 6: ಹಬ್ಬದ ಸೀಸನ್ ಬಂತೆಂದರೆ ಜನರಿಗೆ ಶಾಪಿಂಗ್ ಸಡಗರ. ಅಂಗಡಿ, ಮಳಿಗೆಗಳಲ್ಲಿ ಡಿಸ್ಕೌಂಟ್‌ಗಳ ಮೇಲೆ ಡಿಸ್ಕೌಂಟ್‌ಗಳ ಆಕರ್ಷಣೆ. ಇದೇ ವೇಳೆ ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ಮೊದಲ ಒಂದು ವಾರದಲ್ಲೇ 5.7 ಬಿಲಿಯನ್ ಡಾಲರ್‌ನಷ್ಟು ಮೌಲ್ಯದ ಸರಕುಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆಯಂತೆ. ಅಂದರೆ, ಬರೋಬ್ಬರಿ 46 ಸಾವಿರ ಕೋಟಿ ರೂನಷ್ಟು ವಹಿವಾಟನ್ನು ಇ-ಕಾಮರ್ಸ್ ಕಂಪನಿಗಳು ಒಂದು ವಾರದಲ್ಲಿ ನಡೆಸಿವೆ.
ಇ ಕಾಮರ್ಸ್ ಕಂಪನಿಗಳು ಮಾಡಿದ ಒಟ್ಟಾರೆ ಮಾರಾಟದಲ್ಲಿ ಮೊಬೈಲ್ ಫೋನ್ ಮಾರಾಟದ ಪಾಲು ಶೇ. 41ರಷ್ಟು ಇದೆ. ಇನ್ನು, ಉಡುಗೆ ತೊಡುಗೆ ಇತ್ಯಾದಿ ಫ್ಯಾಷನ್ ಐಟಂಗಳ ಪಾಲು ಶೇ. 20ರಷ್ಟು ಇದೆ. ವಿಶೇಷ ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫ್ಯಾಷನ್ ವಸ್ತುಗಳು ಶೇ. 48ರಷ್ಟು ಹೆಚ್ಚು ಮಾರಾಟವಾಗಿರುವುದು ಗಮನಾರ್ಹ.
20 ವರ್ಷಕ್ಕೆ ಗೃಹಸಾಲ ಪಡೆದು 24 ವರ್ಷ ಇಎಂಐ ಕಟ್ಟುವ ದೌರ್ಭಾಗ್ಯ..!
ಅಮೆಜಾನ್ ಮೀರಿಸಿದ ಮೀಶೋ: ಈ ವರ್ಷದ ಹಬ್ಬದ ಸೀಸನ್‌ನಲ್ಲಿ ಅತಿ ಹೆಚ್ಚು ವಹಿವಾಟು ಕಂಡ ಇಕಾಮರ್ಸ್ ಕಂಪನಿಗಳ ಪೈಕಿ ಫ್ಲಿಪ್‌ಕಾರ್ಟ್ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷವೂ ಫ್ಲಿಪ್‌ಕಾರ್ಟ್ ಅಗ್ರ ಸ್ಥಾನದಲ್ಲಿತ್ತು. ಆದರೆ, ಎರಡನೇ ಸ್ಥಾನದಲ್ಲಿ ಈ ಬಾರಿ ಅಚ್ಚರಿ ಇದೆ. ಒಟ್ಟಾರೆ ಬಂದ ಆರ್ಡರ್‌ಗಳಲ್ಲಿ ಫ್ಲಿಪ್‌ಕಾರ್ಟ್ ನಂತರ ಮೀಶೋ ಇದೆ. ಫ್ಲಿಪ್‌ಕಾರ್ಟ್ ಶೇ. 49ರಷ್ಟು ಆರ್ಡರ್‌ಗಳ ಪಾಲು ಹೊಂದಿದ್ದರೆ, ಮೀಶೋ ಶೇ. 21ರಷ್ಟು ಆರ್ಡರ್ ಪಡೆದಿದೆ ಎಂದು ರೆಡ್‌ಸೀರ್ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಆದರೆ ಒಟ್ಟಾರೆ ವಹಿವಾಟು ಮೌಲ್ಯವನ್ನು ಪರಿಗಣಿಸಿದರೆ ಫ್ಲಿಪ್‌ಕಾರ್ಟ್ ನಂತರ ಎರಡನೇ ಸ್ಥಾನ ಅಮೇಜಾನ್‌ಗೆ ಹೋಗುತ್ತದೆ. ಮೀಶೋ ಮೂರನೇ ಸ್ಥಾನಕ್ಕೆ ಬರುತ್ತದೆ. ಆರ್ಡರ್‌ಗಳ ಸಂಖ್ಯೆ ಎಣಿಸಿದರೆ ಅಮೇಜಾನ್ ಅನ್ನು ಮೀಶೋ ಮೀರಿಸುತ್ತದೆ ಎಂಬುದು ಈ ವರದಿಯಲ್ಲಿರುವ ಅಂಶ. ಆದರೆ, ಅಮೇಜಾನ್ ಸಂಸ್ಥೆ ಈ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ತನಗೆ ಹಿಂದೆಂದಿಗಿಂತ ಹೆಚ್ಚು ಆರ್ಡರ್‌ಗಳು ಸಿಕ್ಕಿವೆ ಎಂಬುದ ಅಮೇಜಾನ್ ಹೇಳಿಕೆ. ಅಮೇಜಾನ್ ನೀಡಿದ ವಿವರಣೆ ಈ ವರದಿಯ ಕೊನೆಯಲ್ಲಿದೆ.
ಫ್ಲಿಪ್‌ಕಾರ್ಟ್ ಗ್ರೂಪ್‌ನಲ್ಲಿ ಫ್ಲಿಪ್‌ಕಾರ್ಟ್, ಮಿಂತ್ರಾ ಮತ್ತು ಶಾಪ್ಸಿ ಸೈಟ್‌ಗಳಿವೆ. ಅಮೆರಿಕದ ವಾಲ್ಮಾರ್ಟ್ ಸಂಸ್ಥೆಯ ಮಾಲಕತ್ವದಲ್ಲಿ ಫ್ಲಿಪ್‌ಕಾರ್ಟ್ ಇದೆ. ಮೀಶೋ ಭಾರತದ ಐಐಟಿ ಪದವೀಧರ ವಿದಿತ್ ಆತ್ರೆ ಅವರಿಂದ ಸ್ಥಾಪಿತವಾಗಿರುವ ಕಂಪನಿ. ಸೋಷಿಯಲ್ ಮೀಡಿಯಾದ ಶಕ್ತಿ ಉಪಯೋಗಿಸಿ ಬಹಳ ವೇಗವಾಗಿ ಬೆಳೆಯುತ್ತಿದೆ ಮೀಶೋ.
RuPay Credit Cards: ₹2,000 ವರೆಗಿನ ವಹಿವಾಟಿಗೆ RuPay ಕ್ರೆಡಿಟ್ ಕಾರ್ಡ್ ಬಳಸಿದರೆ ಶುಲ್ಕವಿಲ್ಲ; ಹೇಗೆ ತಿಳಿಯಿರಿ
ಮೊಬೈಲ್ ಮಾರಾಟ ಟಾಪ್:
ಇನ್ನು, ಹಬ್ಬದ ಸೀಸನ್ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಆನ್‌ಲೈನ್‌ನಲ್ಲಿ ನಡೆದ ವಹಿವಾಟನ್ನು ಪರಿಗಣಿಸಿದರೆ ಮೊಬೈಲ್ ಮಾರಾಟ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮೊಬೈಲ್ ಮಾರಾಟ 7 ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ದೊಡ್ಡ ಗೃಹೋಪಕರಣಗಳು 5 ಪಟ್ಟು, ಪ್ಯಾಷನ್ ಐಟಂಗಳು 3ಪಟ್ಟು ಹಾಗು ಇತರ ವಿಭಾಗಗಳ ವಸ್ತುಗಳು 2 ಪಟ್ಟು ಹೆಚ್ಚು ಮಾರಾಟ ಕಂಡಿವೆ.

ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ ರೆಡ್‌ಸೀರ್ ಕಲೆಹಾಕಿದ ಅಂಕಿ ಅಂಶ ಇದು. 2022, ಸೆಪ್ಟೆಂಬರ್ 22ರಿಂದ 30ರವರೆಗೆ ನಡೆದ ಹಬ್ಬದ ವಿಶೇಷ ಮಾರಾಟದಲ್ಲಿ ಕಂಡ ಹೈಲೈಟ್‌ಗಳಿವು:
ಒಟ್ಟಾರೆ ಮಾರಾಟವಾದ ವಸ್ತುಗಳ ಮೌಲ್ಯ: 5.7 ಬಿಲಿಯನ್ ಡಾಲರ್ (48000 ಕೋಟಿ ರೂ)
ಗಂಟೆಗೆ ಮಾರಾಟವಾದ ಮೊಬೈಲ್‌ಗಳು: 56 ಸಾವಿರ
ಈ ವಾರ ಶಾಪಿಂಗ್ ಮಾಡಿದವರು: 7.5-8 ಕೋಟಿ ಜನರು
ಟಯರ್-2 ನಗರಗಳ ಗ್ರಾಹಕರು ಶೇ. 65
ಮೊದಲ ವಾರದಲ್ಲಿ 8 ಕೋಟಿಯಷ್ಟು ಜನರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 24ರಷ್ಟು ಹೆಚ್ಚಾಗಿದೆ. ಶಾಪಿಂಗ್ ಮಾಡಿದ ಪ್ರತೀ ವ್ಯಕ್ತಿ ಸರಾಸರಿಯಾಗಿ ಶಾಪಿಂಗ್‌ಗೆ ಮಾಡಿದ ವೆಚ್ಚ ಶೇ. 3ರಷ್ಟು ಹೆಚ್ಚಾಗಿರುವುದು ತಿಳಿದುಬಂದಿದೆ.
ಆಗಸ್ಟ್ ಕೊನೆಯಿಂದ ಭರ್ಜರಿ ಡಿಮ್ಯಾಂಡ್:
ರೆಡ್‌ಸೀರ್ ವರದಿಯ ಪ್ರಕಾರ, ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ವ್ಯವಹಾರ ನಡೆದಿರಲಿಲ್ಲ. ಆದರೆ, ಆಗಸ್ಟ್ ಕೊನೆಯಿಂದ ಹಿಡಿದು ಸೆಪ್ಟೆಂಬರ್‌ವರೆಗೂ ಗ್ರಾಹಕರ ಉತ್ಸಾಹ ಮತ್ತು ಖರೀದಿ ಪ್ರಮಾಣ ಹೆಚ್ಚಾಗಿದೆ. ದೀಪಾವಳಿಯವರೆಗೂ ಇದೇ ಟ್ರೆಂಡ್ ಮುಂದುವರಿಯುವ, ಅಥವಾ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈಗ 5ಜಿ ತಂತ್ರಜ್ಞಾನ ಭಾರತದಲ್ಲಿ ಅಳವಡಿಕೆ ಆಗುತ್ತಿರುವುದು 5ಜಿ ಸ್ಮಾರ್ಟ್‌ಫೋನ್ ಸೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಬರಬಹುದು. ಮುಂದಿನ ಇಕಾಮರ್ಸ್ ವಹಿವಾಟಿನಲ್ಲಿ 5ಜಿ ಸೆಟ್‌ಗಳ ಮಾರಾಟದ ಪಾಲು ಹೆಚ್ಚಾಗುವ ನಿರೀಕ್ಷೆ ಇದೆ.
ಅಮೇಜಾನ್ ಸ್ಪಷ್ಟನೆ:
ಹಬ್ಬದ ಸೀಸನ್‌ನ ಮೊದಲ ವಾರದಲ್ಲಿ ಅಮೇಜಾನ್‌ಗಿಂತ ಮೀಶೋ ಹೆಚ್ಚು ಆರ್ಡರ್‌ಗಳನ್ನು ವಹಿವಾಟು ಮಾಡಿದೆ ಎಂದು ರೆಡ್‌ಸೀರ್ ಸಂಸ್ಥೆ ಮಾಡಿದ ವರದಿ ಬಗ್ಗೆ ಅಮೇಜಾನ್ ಅನುಮಾನ ವ್ಯಕ್ತಪಡಿಸಿದೆ.
ರೆಡ್‌ಸೀರ್ ಸಂಸ್ಥೆಯ ವರದಿ ಮತ್ತು ಅದರ ಸಮೀಕ್ಷೆಗೆ ಬಳಸಲಾದ ವಿಧಾನ ತಮಗೆ ಗೊತ್ತಿಲ್ಲ. ಹೀಗಾಗಿ, ಅದರ ವರದಿ ಬಗ್ಗೆ ಪ್ರತಕ್ರಿಯಿಸುವುದಿಲ್ಲ ಎಂದು ಹೇಳಿರುವ ಅಮೇಜಾನ್, ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಫರ್ ಆರಂಭವಾದ ಮೊದಲ 12 ದಿನಗಳಲ್ಲಿ ಅತಿ ಹೆಚ್ಚು ಆರ್ಡರ್‌ಗಳು ಸಿಕ್ಕಿರುವುದಾಗಿ ಹೇಳಿಕೊಂಡಿದೆ.
(ಒನ್ಇಂಡಿಯಾ ಸುದ್ದಿ)