ವರಮಾನದಲ್ಲಿ ಒಂದು ಭಾಗವನ್ನು ಎತ್ತಿಡುವ ಕ್ರಿಯೆ ಉಳಿತಾಯ

By: ಜಗದೀಶ ವಡ್ಡಿನ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 30 : 'ಹನಿ ಹನಿ ಗೂಡಿದರೇ ಹಳ್ಳ, ತೆನೆ ತೆನೆ ಗೂಡಿದರೇ ಬಳ್ಳ'. ಹಿರಿಯರ ಮಾತು ಸತ್ಯ, ಪ್ರತಿಯೊಬ್ಬರು ವರಮಾನದಲ್ಲಿ ಸ್ಪಲ್ಪ-ಸ್ವಲ್ಪ ಭಾಗವನ್ನು ಉಳಿತಾಯವನ್ನು ಮಾಡಲೇಬೇಕು. ಅಕ್ಟೋಬರ್ 30 ವಿಶ್ವ ಉಳಿತಾಯ ದಿನ ಈ ಹಿನ್ನಲೆಯಲ್ಲಿ ಈ ಲೇಖನ.

ಭವಿಷ್ಯದ ಬಳಕೆಗಾಗಿ ಪ್ರಸ್ತಕ ವರಮಾನದಲ್ಲಿ ಒಂದು ಭಾಗವನ್ನು ಎತ್ತಿಡುವ ಕ್ರಿಯೆ ಉಳಿತಾಯ. ಅನುಭೋಗ ಹಾಗೂ ತೆರಿಗೆಗಳ ಪಾವತಿಗಾಗಿ ಖರ್ಚು ಮಾಡಿದ ಮೇಲೆ ಉಳಿಯತಕ್ಕದ್ದು (ಸೇವಿಂಗ್). ವರಮಾನವನ್ನು ಪಡೆಯುವ ವ್ಯಕ್ತಿಗಳು, ಕುಟುಂಬಗಳು, ವ್ಯಾಪಾರಿ ಸಂಸ್ಥೆಗಳೇ ಮುಂತಾಗಿ ಯಾರಾದರೂ ಉಳಿತಾಯ ಮಾಡುವುದು ಸಾಧ್ಯ.

ಡಿಜಿಟಲ್ ವ್ಯವಹಾರದ ಎಫೆಕ್ಟ್, ಎಟಿಎಂ ಕೇಂದ್ರಗಳಿಗೆ ಬಾಗಿಲು

ವ್ಯಕ್ತಿ ಸಂಸ್ಥೆ ಗಳಿಗಿಂತ ಭಿನ್ನವಾಗಿರುವ ಸರ್ಕಾರ ವೆಚ್ಚ ಮಾಡಿದೆ ಉಳಿಸಿದ್ದನ್ನು ಉಳಿತಾಯವೆನ್ನಬಹುದು ಎಂಬ ಬಗ್ಗೆ ಅರ್ಥಶಾಸ್ತ್ರಜ್ಞರಲ್ಲಿ ಒಮ್ಮತವಿಲ್ಲ. ಆದರೆ ಒಟ್ಟು ರಾಷ್ಟ್ರ ಉಳಿತಾಯ ಮಾಡಬಹುದು. ಒಂದು ರಾಷ್ಟ್ರದಲ್ಲಿನ ನಾನಾ ವ್ಯಕ್ತಿ ಸಂಸ್ಥೆಗಳ ಒಟ್ಟು ವರಮಾನಗಳಿಂದ ಅವುಗಳ ಖರ್ಚು ಹಾಗೂ ತೆರಿಗೆಗಳನ್ನೆಲ್ಲ ಕಳೆದರೆ ಉಳಿಯುವುದೇ ರಾಷ್ಟ್ರೀಯ ಉಳಿತಾಯ.

Savings

ಉಳಿತಾಯಕ್ಕೂ ವರಮಾನಕ್ಕೂ ನೇರ ಸಂಬಂಧವಿದೆ. ವರಮಾನ ಹಚ್ಚಿದಷ್ಟೂ ಹೆಚ್ಚು ಉಳಿತಾಯ ಸಾಧ್ಯ. ಉಳಿತಾಯ ಮಾಡುವ ಪ್ರವೃತ್ತಿಯೂ ಬಡ್ಡಿಯ ದರವೂ ಉಳಿತಾಯದ ಇನ್ನೆರಡು ಮುಖ್ಯ ನಿರ್ಣಾಯಕಗಳು. ಪ್ರಕೃತದಲ್ಲಿ ಅನುಭೋಗಿಸದೆ ವರಮಾನವನ್ನು ಹಿಡಿದಿಟ್ಟಾಗ ಇದು ಸಂಕೇತಿಸುವ ಪ್ರಮಾಣದ ಸರಕು ಸೇವೆಗಳನ್ನು ಹಿಮ್ಮೊಗನಾಗಿ ತಿರುಗಿಸಿದಂತಾಗುತ್ತದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲದ ಈ ಕ್ರಮದಿಂದ ಆರ್ಥಿಕ ಚಟುವಟಿಕೆಯ ತಾಳ ತಪ್ಪುತ್ತದೆ.

ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಮಾರಾಟಕ್ಕಿದೆ, ಜಸ್ಟ್ 500

ಉಳಿತಾಯದ ಉದ್ದೇಶಗಳು : 'ಹನಿ ಹನಿ ಗೂಡಿದರೇ ಹಳ್ಳ, ತೆನೆ ತೆನೆ ಗೂಡಿದರೇ ಬಳ್ಳ'. ಹಿರಿಯರ ಮಾತು ಸತ್ಯ, ಪ್ರತಿಯೊಬ್ಬರು ವರಮಾನದಲ್ಲಿ ಸ್ಪಲ್ಪ ಭಾಗವನ್ನು ಉಳಿತಾಯವನ್ನು ಮಾಡಲೇಬೇಕು. ಸಂಪಾದನೆಯ ಶಕ್ತಿ ಕುಂದಿ, ವರಮಾನ ಕಡಿಮೆಯಾದಾಗ ಅಥವ ನಿಂತೇ ಹೋದಾಗ ಜೀವನ ಭರಿಸುವ ಸಲುವಾಗಿಯೋ, ಮಕ್ಕಳ ವಿದ್ಯಾಭ್ಯಾಸ, ಮದುವೆ ಮುಂತಾದವಕ್ಕಾಗಿಯೇ ಮಾಡಿದ್ದು. ಈ ಬಗೆಯ ದೀರ್ಘಕಾಲಿಕ ಉಳಿತಾಯ ಅನತಿದೂರಕಾಲದಲ್ಲೇ ಹೆಚ್ಚು ಬೆಲೆಯ ವಸ್ತುಗಳನ್ನು ಕೊಳ್ಳುವ ಉದ್ದೇಶದಿಂದಲೂ ಉಳಿತಾಯ ಮಾಡುವುದು ಸಾಮಾನ್ಯವಾಗಿದೆ.

ವ್ಯಕ್ತಿಗಳು ಮಾಡುವ ಉಳಿತಾಯಗಳ ಹಿಂದೆ ಇರುವ ನಾನಾ ಬಗೆಯ ಉದ್ದೇಶಗಳನ್ನು ಕುರಿತು ಅರ್ಥಶಾಸ್ತ್ರಜ್ಞರು ದೀರ್ಘ ವಿವೇಚನೆ ನಡೆಸಿದ್ದಾರೆ. ದೀರ್ಘ ಭವಿಷ್ಯದಲ್ಲಿ ಉದ್ಭವಿಸುವ ಅಗತ್ಯಗಳ ಪೂರೈಕೆಗಾಗಿ ಸಾಮಾನ್ಯವಾಗಿ ಎಲ್ಲರೂ ಉಳಿತಾಯ ಮಾಡುತ್ತಾರೆ. ಕುಟುಂಬದಲ್ಲಿ ಮುಖ್ಯವಾಗಿ ಸಂಪಾದನೆ ಮಾಡುತ್ತಿದ್ದ ವ್ಯಕ್ತಿ ಯಾವುದಾದರೂ ಅಪಘಾತಕ್ಕೆ ತುತ್ತಾಗಿ ಸಂಪಾದನೆ ಮಾಡುವ ಶಕ್ತಿ ಕಳೆದುಕೊಳ್ಳಬಹುದು.

ಎಸ್ ಬಿಐ ಖಾತೆದಾರರಿಗೆ ಒಂದೊಳ್ಳೆ ಸುದ್ದಿ

ಮುಂದೆ ಸ್ಥಿತಿ ಉತ್ತಮಗೊಳ್ಳುವವರೆಗೂ ಅವನ ಮತ್ತು ಸಂಸಾರದ ಪೋಷಣೆಗೆ ಉಳಿತಾಯ ಮಾಡಿದ ಹಣವಿಲ್ಲದಿದ್ದರೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ, ಅನೇಕರರು ಇದನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಮಾಡುತ್ತಾರೆ. ಇದಲ್ಲದೆ ಕುಟುಂಬದಲ್ಲಿ ಕೆಲವರು ಒಂದೇ ಸಮನೆ ಅನಾರೋಗ್ಯದಿಂದ ನರಳುವ ಪರಿಸ್ಥಿತಿ ಬರಬಹುದು. ಅಂಥ ಸಮಯದಲ್ಲಿ ಉಳಿತಾಯ ಹಣವಿದ್ದರೆ ಬಹಳ ಅನುಕೂಲ ಎಂಬ ಭಾವನೆಯಿಂದ ಉಳಿತಾಯ ಸಾಗುತ್ತದೆ.

ಉಳಿತಾಯ ಮಾಡುವುದರಿಂದ ಮುಂದೆ ಅಧಿಕ ವರಮಾನ ಪಡೆದು ಸುಖ ಜೀವನ ನಡೆಸಬಹುದು ಎಂಬ ಆಶೆಯೂ ಅನೇಕರಲ್ಲಿ ಇರುತ್ತದೆ. ಉಳಿತಾಯವೆಂಬುದು ಪ್ರಕೃತದ ಕ್ರಿಯೆ. ಇದರ ಹಿಂದಿನ ಉದ್ದೇಶ, ಪ್ರೇರಣೆ, ಭವಿಷ್ಯಕ್ಕೆ ಸಂಬಂಧಿಸಿದ್ದು. ಮುಂದೆ ತನ್ನ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದಲೇ ಈಗ ತನಗೆ ಬರುವ ವರಮಾನದಲ್ಲಿ ವ್ಯಕ್ತಿ ಸ್ವಲ್ಪ ಭಾಗ ಉಳಿತಾಯ ಮಾಡಲು ಯತ್ನಿಸುತ್ತಾನೆ.

ಭಾರತದಲ್ಲಿ ಉಳಿತಾಯಕ್ಕೆ ಉತ್ತೇಜನ ನೀಡಲು ಬಲು ಹಿಂದಿನಿಂದಲೂ ಅನೇಕ ಮಾರ್ಗಗಳನ್ನು ಅನುಸರಿಸಲಾಗುತ್ತಿವೆ. ಅಂಚೆ ಕಛೇರಿಗಳು ಬಹಳ ಕಾಲದಿಂದಲೂ ಉಳಿತಾಯ ಬ್ಯಾಂಕುಗಳ ಕೆಲಸ ನಿರ್ವಹಿಸುತ್ತಿದೆ. ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡಿದವರಿಗೂ ಭದ್ರತೆ ಒದಗಿಸಲು ಅಂಚೆ ಕಛೇರಿಗಳನ್ನು ಈ ಕಾರ್ಯ ಕೈಗೊಂಡವು.

ಇವು ಸರ್ಕಾರದ ಅಧೀನದಲ್ಲಿರುವುದರಿಂದ ಜನರಿಗೆ ತಮ್ಮ ಹಣದ ಭದ್ರತೆಯ ವಿಷಯದಲ್ಲಿ ಯಾವ ಅಂಜಿಕೆಯೂ ಇರುವುದಿಲ್ಲವೆಂಬ ಕಾರಣದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರಿಂದ ಉಳಿತಾಯ ಶೇಖರಿಸಲು ಗ್ರಾಮಾಂತರ ಪ್ರದೇಶಗಳಲ್ಲಿ ಬ್ಯಾಂಕುಗಳನ್ನು ಸ್ಥಾಪಿಸುವ ಕಾರ್ಯ ಆರಂಭವಾಗಿದೆ.

ಇದಲ್ಲದೆ ಜನರು ಉಳಿತಾಯ ಮಾಡಿದ ಹಣವನ್ನು ಸಮಾಜದ ಉಪಯೋಗಕ್ಕಾಗಿ ದೊರಕಿಸಿಕೊಳ್ಳಲು ಜೀವವಿಮಾ ಕಾರ್ಪೋರೇಷನ್ ಅನೇಕ ರೀತಿಯ ಕ್ರಮ ಕೈಗೊಂಡಿದೆ. ಕಡಿಮೆ ವರಮಾನ ಬರುವ ವರ್ಗದವರೂ ಜೀವವಿಮೆಯಲ್ಲಿ ಹಣ ತೊಡಗಿಸುವುದರ ಮೂಲಕ ತಮ್ಮ ಉಳಿತಾಯವನ್ನು ಭದ್ರವಾಗಿ ಕಾಪಾಡಿಕೊಳ್ಳ ಬಹುದಾಗಿದೆಯಲ್ಲದೆ ಭವಿಷ್ಯವನ್ನು ಸುರಕ್ಷಿಸಬಹುದಾಗಿದೆ.

ತಮ್ಮ ಉಳಿತಾಯವನ್ನು ಇಟ್ಟರೆ ದೊರೆಯುವ ಬಡ್ಡಿ ದರಕ್ಕಿಂತ ಹೆಚ್ಚಿಗೆ ಸಂಪಾದಿಸಬೇಕು ಎನ್ನುವ ಅಭಿಲಾಷೆ ಕೂಡ ಇರುವುದುಂಟು. ಇಂಥ ವರ್ಗದ ಜನರ ಉಳಿತಾಯವನ್ನೂ ಸಮಾಜದ ಹಿತಕ್ಕಾಗಿ ಉಪಯೋಗಿಸಿಕೊಳ್ಳಲು ಯೂನಿಟ್ ಟ್ರಸ್ಟ್ ಸ್ಥಾಪಿತವಾಗಿದೆ.

ಉಳಿತಾಯದ ಬಗಗೆಗಳು

* ವೈಯಕ್ತಿಕ ಉದ್ದೇಶಗಳಿಗಾಗಿ ವ್ಯಕ್ತಿಗಳು ಸ್ವಂತ ಇಚ್ಛೆಯಿಂದ ಮಾಡುವ ಉಳಿತಾಯ

* ಕಂಪನಿಗಳ ಉಳಿತಾಯ ಗಳಿಸಿದ ಲಾಭವನ್ನೆಲ್ಲ ಷೇರುದಾರರಿಗೆ ಹಂಚದೆ ತಡೆದಿಟ್ಟು ಅದನ್ನು ಉದ್ಯಮಕ್ಕೆ ಮತ್ತೆ ಹರಿಯಿಸುವಂತೆ ಮಾಡುವುದು. ಈ ಬಗೆಯ ಉಳಿತಾಯವೂ ಆಯಾ ಕಂಪನಿಗಳ ಸ್ವಂತ ಇಚ್ಛೆಗೆ ಬಿಟ್ಟಿದ್ದು

* ಕಡ್ಡಾಯದ ಉಳಿತಾಯ ಸರ್ಕಾರ ಉದ್ದೇಶಪೂರ್ವಕವಾಗಿ ತೆರಿಗೆಗಳನ್ನೇರಿಸಿ ಜನರ ಅನುಭೋಗವನ್ನು ಮೊಟಕು ಮಾಡಿದಾಗ ಸಂಭವಿಸುವ ಉಳಿತಾಯ (ಕಂಪಲ್ಸರಿ ಸೇವಿಂಗ್)

* ಹಿತಮಿತವಾದ ಹಣದುಬ್ಬರ ಪರಿಸ್ಥಿತಿಯಿದ್ದು, ಬೆಲೆಗಳ ಏರಿಕೆಗೆ ಅನುಗುಣವಾಗಿ ವ್ಯಕ್ತಿಗಳ ವರಮಾನಗಳೂ ಹೆಚ್ಚದಿದ್ದ ಸಂದರ್ಭದಲ್ಲಿ ಅನುಭೋಗ ವಸ್ತುಗಳಿಗೆ ಬೇಡಿಕೆ ತಗ್ಗುವುದರಿಂದ ಸಂಭವಿಸುವ ಉಳಿತಾಯ. ಇದು ಬಲವಂತ ಉಳಿತಾಯ.

ಉಳಿತಾಯ ಪತ್ರಗಳು : ಸಣ್ಣ ಉಳಿತಾಯಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಮಾರಾಟ ಮಾಡುವ ಪತ್ರಗಳು (ಸೇವಿಂಗ್ ಸರ್ಟಿಫೀಕೆಟ್ಸ್). ಇವುಗಳ ಮೇಲೆ ನೀಡುವ ಬಡ್ಡಿಗೆ ಸಾಮಾನ್ಯವಾಗಿ ವರಮಾನ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಇದನ್ನು ಸಣ್ಣ ಧನಮಾನಗಳಲ್ಲಿ ಮಾರಬಹುದು. ಭಾರತದಲ್ಲಿ 1917ರ ಏಪ್ರಿಲ್ 1 ಪ್ರಥಮವಾಗಿ 5 ವರ್ಷಗಳ ಅಂಚೆ ಕಛೇರಿ ನಗದು ಪತ್ರಗಳನ್ನು (ಪೋಸ್ಟ್ ಆಫೀಸ್ ಕ್ಯಾಶ್ ಸರ್ಟಿಫೀಕೆಟ್ಸ್) ನೀಡಲಾಯಿತು.

ಅಂಚೆ ಕಛೇರಿ ಉಳಿತಾಯ ಬ್ಯಾಂಕುಗಳು ಸಾರ್ವಜನಿಕರಿಗೆ ಅನೇಕ ರೀತಿಯ ಸೌಕರ್ಯ ಒದಗಿಸಿ ಉಳಿತಾಯಕ್ಕೆ ಉತ್ತೇಜನ ನೀಡುತ್ತವೆ. ಭಾರತದಲ್ಲಿ ಅಂಚೆ ಕಛೇರಿಗಳಲ್ಲಿ ಕನಿಷ್ಠ 2 ರೂಪಾಯಿ ಠೇವಣಿಯನ್ನಿಟ್ಟು ಉಳಿತಾಯ ಖಾತೆ ಆರಂಭಿಸಬಹುದು.

ವಾಣಿಜ್ಯ ಬ್ಯಾಂಕುಗಳಲ್ಲೂ ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹ ಕೊಡುವ ಸಲುವಾಗಿ ವಾಣಿಜ್ಯ ಬ್ಯಾಂಕುಗಳಲ್ಲೂ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಭಾರತದಲ್ಲಿ ಕನಿಷ್ಠ 5 ರೂ. ಠೇವಣಿಯನ್ನಿಟ್ಟು ಈ ಖಾತೆ ತೆರೆಯಬಹುದು.

ಭವಿಷ್ಯದಲ್ಲಿ ನಿಶ್ಚಿಂತೆಯಿಂದ ಇರಲು ವ್ಯಕ್ತಿಗಳು ತಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡುತ್ತಾರೆ. ಆದರೆ, ಈಗ ಅನೇಕ ದೇಶಗಳಲ್ಲಿ ಸರ್ಕಾರವೇ ವ್ಯಕ್ತಿಯ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ವ್ಯಕ್ತಿಗಳು ತಮ್ಮ ಭವಿಷ್ಯದ ಬಗ್ಗೆ ಅಷ್ಟೇನೂ ಚಿಂತಿಸಬೇಕಾಗಿಲ್ಲ.

ಸಾಲ ಸೌಲಭ್ಯ, ಕಂತು ಮಾರಾಟ ಮುಂತಾದವುಗಳ ಬೆಳವಣಿಗೆಯಿಂದ ಉಳಿತಾಯ ಬಗ್ಗೆ ವ್ಯಕ್ತಿಗಳಲ್ಲಿ ಸ್ವಲ್ಪಮಟ್ಟಿನ ಉದಾಸೀನತೆ ಕಂಡು ಬರುತ್ತಿದೆ. 'ಕೈಯ ರೊಕ್ಕವಕೊಂಡು ಕಡದ ಲೆಕ್ಕವನಗಳಿಸುವ' ಮನೋಭಾವವುಳ್ಳವರು ಮಿತವ್ಯಯವೂ ಒಂದು ಸದ್ಗುಣವೆಂದು ನಂಬುವುದಿಲ್ಲ.

ಭವಿಷ್ಯದ ಬಗ್ಗೆ ಭರವಸೆ ಸಾಧ್ಯವಿಲ್ಲದ ವ್ಯವಸ್ಥೆಗಳಲ್ಲೆಲ್ಲ ವ್ಯಕ್ತಿಗತ ಉಳಿತಾಯದ ಮಹತ್ವವಿದ್ದೇ ಇರುತ್ತದೆ. ಅರ್ಥವ್ಯವಸ್ಥೆಯ ಬೆನ್ನೆಲುಬಾದ ಬಂಡವಾಳದ ಬೆಳವಣಿಗೆಯ ದೃಷ್ಟಿಯಿಂದ ವಯಕ್ತಿಕವಾಗಿಯೋ ಸಾಂಸ್ಥಿಕವಾಗಿಯೋ ಉಳಿತಾಯ ಅತ್ಯಗತ್ಯ. ಪಚನಕ್ರಿಯೆಯಿಂದ ಶರೀರದ ಅಂಗಾಂಗಗಳಿಗೆ ಶಕ್ತಿ ಕೂಡಿಕೊಳ್ಳವ ತೆರನಾಗಿ ಉಳಿತಾಯವೂ ಒಂದು ಸಹಜ ಪ್ರಕ್ರಿಯೆಯಾಗಿ ಮುಂದುವರಿದೇ ತೀರುತ್ತದೆ.

ಲೇಖಕರು
ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
October 31 is the World Savings Day. The World Savings Day was established on October 31, 1924 during the 1st International Savings Bank Congress in Milano, Italy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ