ಫ್ಲಿಪ್ ಕಾರ್ಟ್‌ನಲ್ಲಿ ಬದಲಾವಣೆ: ಕೆಲಸ ಕಳೆದುಕೊಳ್ಳಲಿದ್ದಾರೆ 200 ಮಂದಿ
ನವದೆಹಲಿ, ನವೆಂಬರ್ 16: ಫ್ಲಿಪ್ ಕಾರ್ಟ್ ಸಮೂಹದ ಭಾಗವಾದ ಆನ್‌ಲೈನ್ ಫ್ಯಾಷನ್ ಮಾರಾಟ ಸಂಸ್ಥೆ ಜಬೊಂಗ್ ತನ್ನ ಅರ್ಧದಷ್ಟು ಉದ್ಯೋಗ ಕಡಿತ ಮಾಡಲು ಮುಂದಾಗಿದ್ದು, ಇದರಿಂದ ಸುಮಾರು 200 ಮಂದಿ ಉದ್ಯೋಗ ನಷ್ಟದ ಭೀತಿಗೆ ಒಳಗಾಗಿದ್ದಾರೆ.
ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನ ಬನ್ಸಲ್ ಅವರು ವೈಯಕ್ತಿಕ ದುರ್ನಡತೆ ಆರೋಪದ ಕಾರಣ ಸಿಇಒ ಸ್ಥಾನ ತ್ಯಜಿಸಿ ಹೊರನಡೆದ ಬೆನ್ನಲ್ಲೇ, ಫ್ಲಿಪ್ ಕಾರ್ಟ್‌ನ ಪ್ರಮುಖ ಷೇರುದಾರ, ಅಮೆರಿಕದ ವಾಲ್ ಮಾರ್ಟ್ ಭಾರಿ ಬದಲಾವಣೆಗಳಿಗೆ ಮುಂದಾಗಿದೆ.
ಫ್ಲಿಪ್ ಕಾರ್ಟ್ ಸಮೂಹದ ಭಾಗವಾದ ಜಬೊಂಗ್ ಅನ್ನು ಮಿಂತ್ರಾದೊಂದಿಗೆ ವಿಲೀನಗೊಳಿಸಲು ವಾಲ್ ಮಾರ್ಟ್ ಮುಂದಾಗಿದೆ. ಈ ಎರಡೂ ಸಂಸ್ಥೆಗಳನ್ನು ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರ ನಿಯಂತ್ರಣಕ್ಕೆ ತರಲಾಗಿದೆ.

ಜಬೊಂಗ್ ವೆಬ್‌ಸೈಟ್ ಕಾರ್ಯನಿರ್ವಹಣೆ ಮುಂದುವರಿಸಲಿದೆ. ಆದರೆ, ಖರೀದಿದಾರರನ್ನು ಅದು ಮಿಂತ್ರಾ ವೆಬ್ ಸೈಟ್‌ಗೆ ಸಂಪರ್ಕಿಸಲಿದೆ.
ಅಲ್ಲದೆ, ಜಬೊಂಗ್ ಗುರುಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರ ನೆಲೆಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಈ ನಡುವೆ ಮಿಂತ್ರಾ- ಜಬೊಂಗ್‌ನ ಮುಖ್ಯಸ್ಥ ಅನಂತ್ ನಾರಾಯಣ್, ತಾವು ಎರಡೂ ಸಂಸ್ಥೆಗಳ ಮುಖ್ಯಸ್ಥರಾಗಿ ಮುಂದುವರಿಯಲಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಬಿನ್ನಿ ಅವರ ರಾಜೀನಾಮೆ ಬಳಿಕ ಅನಂತ್ ನಾರಾಯಣ್, ತಮ್ಮ ಕಾರ್ಯಚಟುವಟಿಕೆಗಳಿಗಾಗಿ ಕಲ್ಯಾಣ್ ಕೃಷ್ಣಮೂರ್ತಿ ಅವರಿಗೆ ವರದಿ ಮಾಡುವಂತೆ ಸೂಚನೆ ಬಂದಿರುವುದರಿಂದ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಪ್ರಕಟವಾಗಿದ್ದವು.












Click it and Unblock the Notifications