ಹಳದಿ ಲೋಹದ ಮೇಲಿನ ಮೋಹ ಶೇ 15ರಷ್ಟು ಏರಿಕೆ!
ಮುಂಬೈ, ಮೇ 14: ಯಾವುದೇ ಶುಭ ಸಂದರ್ಭವಿರಲಿ ಮೈಮೇಲೆ ಒಂದಷ್ಟು ಆಭರಣವಿರಲಿ ಎಂಬುದು ಭಾರತೀಯರಲ್ಲಿ ಅಘೋಷಿತ ವಾಕ್ಯವಾಗಿದೆ. ಬೆಲೆ ಎಷ್ಟೇ ಏರಿಕೆಯಾದರೂ ಭಾರತೀಯರಿಗೆ ಚಿನ್ನದ ಮೇಲಿನ ಮೋಹ ಒಂದಿಷ್ಟು ಕಡಿಮೆಯಾಗಿಲ್ಲ. ಕಳೆದ ತ್ರೈಮಾಸಿಕದಲ್ಲಿ ಚಿನ್ನದ ಮೇಲಿನ ಬೇಡಿಕೆ ಶೇ 15ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಮಾಡಿದೆ.
ಜನವರಿಯಿಂದ ಮಾರ್ಚ್ 2015 ಅವಧಿಯಲ್ಲಿ ಸುಮಾರು 191.17ಟನ್ ಚಿನ್ನ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಶೇ 15ರಷ್ಟು ಅಧಿಕ ಹೆಚ್ಚಿದೆ. 2014ರಲ್ಲಿ 167.1ಟನ್ ಮಾರಾಟ ಕಾಣಲಾಗಿತ್ತು.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಚಿನ್ನದ ಬೇಡಿಕೆ ಮೌಲ್ಯ ಸುಮಾರು 46,730 ಕೋಟಿ ರು ನಷ್ಟಿತ್ತು. ಹೊಸ ಕೊಡುಗೆಗಳು ಮತ್ತು ಸವಲತ್ತುಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿತ್ತು.
ಒಟ್ಟಾರೆ ಆಭರಣಗಳ ಬೇಡಿಕೆ ಶೇ 22 ರಷ್ಟು ಜಿಗಿತ ಕಂಡು 150.8 ಟನ್ ಗಳಷ್ಟು ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 123.5 ಟನ್ ಗಳಷ್ಟು ಮಾರಾಟವಾಗಿತ್ತು.
ಈ ವರ್ಷದಲ್ಲಿ ಒಟ್ಟಾರೆ 900ರಿಂದ 1000 ಟನ್ ಚಿನ್ನ ವಹಿವಾಟಿನ ನಿರೀಕ್ಷೆ ಇದೆ. ಪ್ರಮುಖವಾಗಿ ಹೂಡಿಕೆ ಮತ್ತು ಸಂಗ್ರಹಕ್ಕಾಗಿ ಚಿನ್ನ ಖರೀದಿ ನಡೆದಿದ್ದರೆ, ಇನ್ನು ಆಭರಣಕ್ಕೂ ಕೂಡ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದು ಭಾರತದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೋಮಸುಂದರಂ ಅಭಿಪ್ರಾಯಪಟ್ಟಿದ್ದಾರೆ. (ಐಎಎನ್ಎಸ್)












Click it and Unblock the Notifications