ರೂಪಾಯಿ ಮೌಲ್ಯ ಕುಸಿತದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?
ಬೆಂಗಳೂರು, ಮೇ 9: ಭಾರತದ ರೂಪಾಯಿ ಕರೆನ್ಸಿ ಇಂದು ಅಮೆರಿಕದ ಡಾಲರ್ ಎದುರು ಅತೀ ಹೀನಾಯ ಮಟ್ಟಕ್ಕೆ ಕುಸಿದಿದೆ. ಪ್ರತೀ ಡಾಲರ್‌ಗೆ ಈಗ 77.52 ರೂ ಆಗಿದೆ. ಇತಿಹಾಸದಲ್ಲೇ ಇದು ಅತ್ಯಂತ ಕಳಪೆ ರೂಪಾಯಿ ಮೌಲ್ಯವಾಗಿದೆ.
ಅಮೆರಿಕದ ಉದ್ಯೋಗ ಪ್ರಮಾಣದಲ್ಲಿ ಗಣನೀಯ ಚೇತರಿಕೆ ಆಗಿರುವುದು ಹಾಗೂ ಅಲ್ಲಿನ ಸೆಂಟ್ರಲ್ ಬ್ಯಾಂಕ್ ವಿವಿದ ದರಗಳನ್ನು ಏರಿಕೆ ಮಾಡಿರುವುದು ಡಾಲರ್ ಚೇತರಿಕೆಗೆ ಕಾರಣವಾಗಿದೆ. ಅದೇ ಹೊತ್ತಲ್ಲಿ, ಡಾಲರ್ ಬಲಿಷ್ಠಗೊಂಡಿದ್ದು, ಭಾರತದಿಂದ ವಿದೇಶೀ ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು, ಕಚ್ಛಾ ತೈಲ ಬೆಲೆ ಹೆಚ್ಚುತ್ತಿರುವುದು ಇದು ರೂಪಾಯಿ ಮೌಲ್ಯ ಕುಸಿಯಲು ಕಾರಣವೆಂದು ವಿಶ್ಲೇಷಿಸಲಾಗಿದೆ.

ಷೇರುಪೇಟೆ ತಲ್ಲಣ
ರೂಪಾಯಿ ಮೌಲ್ಯ ಬೀಳುವುದರ ಜೊತೆಗೆ ಭಾರತದಲ್ಲಿ ಇಂದು ಸೋಮವಾರ ಷೇರುಪೇಟೆ ತಲ್ಲಣಗೊಂಡಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳಲ್ಲಿ ಬಹಳಷ್ಟು ಹೂಡಿಕೆದಾರರು ಸಾವಿರಾರು ಕೋಟಿ ರೂ ಹಣ ಕಳೆದುಕೊಂಡರು. ಈಗ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಮಟ್ಟಕ್ಕೆ ಕುಸಿತ ಕಂಡಿರುವುದರ ಪರಿಣಾಮ ಹಲವೆಡೆ ಕಾಣಬಹುದು. ಇದಕ್ಕೆ ತದ್ವಿರುದ್ಧವಾಗಿ ಕೆಲ ವಲಯಗಳಿಗೆ ಇದು ಲಾಭವೂ ತರಲಿದೆ.

ಚಿನ್ನದ ಬೆಲೆ ಏರಲಿದೆ:
ಭಾರತ ಸಾಕಷ್ಟು ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗೆ ಆಮದು ಮಾಡಿಕೊಳ್ಳುವಾಗ ಡಾಲರ್ ಕರೆನ್ಸಿಯಲ್ಲಿ ವ್ಯವಹಾರ ನಡೆಯುತ್ತದೆ. ಹೀಗಾಗಿ, ಡಾಲರ್ ಮೌಲ್ಯ ಹೆಚ್ಚಿರುವುದು ಮತ್ತು ರೂಪಾಯಿ ಮೌಲ್ಯ ಕುಸಿದಿರುವುದು ಚಿನ್ನ ಆಮದನ್ನು ದುಬಾರಿಯಾಗಿಸುತ್ತದೆ.

ಹಿಮ್ಮುಖಗೊಂಡ ವಿದೇಶೀ ಹೂಡಿಕೆದಾರರು:
ಅಮೆರಿಕದಲ್ಲಿ ತುಸು ಆಶಾದಾಯಕ ಸ್ಥಿತಿ ನಿರ್ಮಾಣವಾಗಿದ್ದು, ರೂಪಾಯಿ ಮೌಲ್ಯ ಕುಸಿದಿದ್ದು, ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಲಕ್ಷಣ ತೋರದೇ ಇದ್ದದ್ದು ಎಫ್‌ಪಿಐನಿಂದ ಬಂಡವಾಳ ಹಿಂತೆಗೆತಕ್ಕೆ ಕಾರಣವಾಗಿದೆ. ಭಾರತದ ಈಕ್ವಿಟಿ ಮಾರುಕಟ್ಟೆಯಿಂದ 6,400 ಕೋಟಿ ರೂ ಹಣವನ್ನು ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆದಾರರು ಹಿಂತೆಗೆದುಕೊಂಡಿದ್ದಾರೆ.

ಡಾಲರ್ ಗಟ್ಟಿಕೊಂಡಿದ್ದು ಭಾರತದ ಕೆಲ ವಲಯಗಳಿಗೆ ಅನುಕೂಲ:
ರೂಪಾಯಿ ಮೌಲ್ಯ ಕುಸಿದಿದ್ದರಿಂದ ಎಲ್ಲವೂ ಸರ್ವನಾಶ ಆಗುತ್ತದೆ ಎಂದಲ್ಲ. ಈ ಬೆಳವಣಿಗೆಯಿಂದ ಭಾರತದ ಕೆಲ ವಲಯಗಳಿಗೆ ಅನುಕೂಲವಾಗುತ್ತದೆ. ಕರೆನ್ಸಿ ಮೌಲ್ಯ ಕುಸಿದರೆ ಆಮದು ಉದ್ಯಮಕ್ಕೆ ಹೇಗೆ ಹೊಡೆತ ಬೀಳುತ್ತದೋ ಹಾಗೇ ರಫ್ತು ಉದ್ಯಮಕ್ಕೆ ಅನುಕೂಲವನ್ನೂ ಮಾಡುತ್ತದೆ.
ಮಾಹಿತಿ ತಂತ್ರಜ್ಞಾನ, ಔಷಧೋದ್ಯಮ, ಜವಳಿ ಮೊದಲಾದ ರಫ್ತು ಪ್ರಾಮುಖ್ಯತೆ ಇರುವ ವಲಯಗಳು ಡಾಲರ್ ಮೂಲಕ ವಹಿವಾಟು ನಡೆಯುವುದರಿಂದ ಹೆಚ್ಚು ಲಾಭ ಆಗಲಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications