
ಐಬಿಎಂನ ಲಕ್ಷಾಂತರ ಉದ್ಯೋಗಿಗಳಿಗೆ ಕಹಿ ಸುದ್ದಿ!
ಬೆಂಗಳೂರು, ಜ.28: ಭಾರತ ಸೇರಿದಂತೆ ವಿಶ್ವದ ಹಲವೆಡೆ ತನ್ನ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಘಟಕಗಳಿಂದ ಲಕ್ಷಾಂತರ ಮಂದಿಯನ್ನು ಮನೆಗೆ ಕಳಿಸಲು ಸಂಸ್ಥೆ ನಿರ್ಧರಿಸಿರುವ ಸುದ್ದಿ ಬಂದಿದೆ.
ಭಾರತ ಘಟಕದಿಂದ ಸುಮಾರು 5 ಸಾವಿರ ಮಂದಿ ಉದ್ಯೋಗಿಗಳು ಸೇರಿದಂತೆ ಒಟ್ಟಾರೆ 1,11,800 ಉದ್ಯೋಗಿಗಳು ಪಿಂಕ್ ಸ್ಲಿಪ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿಡುತ್ತಿದೆ. ಈ ಬಗ್ಗೆ ಐಬಿಎಂ ಅಧಿಕೃತ ಹೇಳಿಕೆ ನೀಡಿಲ್ಲ.
ನೂರು ವರ್ಷ ದಾಟಿರುವ ಈ ಪುರಾತನ ಸಂಸ್ಥೆಯಲ್ಲಿ 4,30,000 ಮಂದಿ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ 1.3 ಲಕ್ಷ ಮಂದಿ ಇದ್ದಾರೆ. ಹೆಬ್ಬಾಳದಲ್ಲಿ ಮ್ಯಾನತಾ ಎಂಬಸಿ ಬಿಸಿನೆಸ್ ಪಾರ್ಕ್ ಮತ್ತು ದೊಮ್ಮಲೂರಿನ ಬಳಿ ಎಂಬಸಿ ಗಾಲ್ಫ್ ಲಿಂಕ್, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆಯ ಸುಬ್ರಮಣ್ಯ ಆರ್ಕೇಡ್ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಐಬಿಎಂ ಕೇಂದ್ರಗಳಿವೆ.ಈಗಿನ ಅತಿ ದೊಡ್ಡ ಕಾರ್ಪೊರೇಟ್ ಲೇ ಆಫ್ ಗಮನಿಸಿದರೆ ಶೇ 26ರಷ್ಟು ಉದ್ಯೋಗಿಗಳ ಕಡಿತ ಸಂಭವವಿದೆ. [ಟಿಸಿಎಸ್ : ಕೇವಲ ಶೇ 1 ರಷ್ಟು ಮಾತ್ರ ಉದ್ಯೋಗ ಕಡಿತ!]
ಪ್ರಾಜೆಕ್ಟ್ ಕ್ರೋಮ್ ಎಂದು ಕರೆಯಲಾಗುವ ಈ ದೊಡ್ಡ ಪಿಂಕ್ ಸ್ಲಿಪ್ ವಿತರಣೆ ಯೋಜನೆ ವಿಶ್ವದೆಲ್ಲೆಡೆ ಜಾರಿಗೊಳ್ಳಲಿದ್ದು, ಯುಎಸ್ಎ ನಲ್ಲಿ ಹೆಚ್ಚು ಮಂದಿ ಹಾನಿಗೊಳಗಾಗಲಿದ್ದಾರೆ. ಫೆಬ್ರವರಿಯಿಂದ ಹೊಸ ಉದ್ಯೋಗ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಟೆಕ್ ಪತ್ರಕರ್ತ ರಾಬರ್ಟ್ ಎಕ್ಸ್ ಕ್ರಿಂಗ್ಲೆ ಅವರು ಫೋರ್ಬ್ಸ್.ಕಾಂನಲ್ಲಿ ಬರೆದಿದ್ದಾರೆ.
ಐಬಿಎಂ ಸ್ಪಷ್ಟನೆ: ಫೋರ್ಬ್ಸ್ ನಲ್ಲಿ ಬಂದ ವರದಿಯನ್ನು ಅಲ್ಲಗೆಳೆದಿರುವ ಐಬಿಎಂ ಸಂಸ್ಥೆ, ಇಷ್ಟು ದೊಡ್ಡ ಮಟ್ಟದ ಉದ್ಯೋಗ ಕಡಿತ ಹಮ್ಮಿಕೊಂಡಿಲ್ಲ ಎಂದಿದೆ. ಐಬಿಎಂ ನೀಡಿರುವ ಸ್ಪಷ್ಟನೆ ಇಲ್ಲಿದೆ ಓದಿ
ಕಳೆದ ತ್ರೈಮಾಸಿಕದಲ್ಲಿ ಐಬಿಎಂ ಆದಾಯ ಶೇ 11ರಷ್ಟು ಇಳಿಮುಖವಾಗಿದ್ದು, ಕಾರ್ಯ ನಿರ್ವಹಣಾ ವೆಚ್ಚ 5.8 ಬಿಲಿಯನ್ ಡಾಲರ್ ನಷ್ಟಾಗಿದೆ. ಹೀಗಾಗಿ ಹೊಸ ತಂಡ ಕಟ್ಟಲು ಸಿಇಒ ಜಿನ್ನಿ ರೊಮೆಟ್ಟಿ ನಿರ್ಧರಿಸಿದ್ದಾರೆ.
ಐಬಿಎಂನ ಪರ್ಸನಲ್ ಕಂಪ್ಯೂಟರ್ ಮಾರಾಟ ಕೂಡಾ ಏಳಿಗೆ ಕಾಣುತ್ತಿಲ್ಲ. ಹೀಗಾಗಿ ಬಿಗ್ ಡಾಟಾ, ಕ್ಲೌಡ್ ಕಂಪ್ಯೂಟಿಂಗ್, ಮೊಬಿಲಿಟಿ, ಸೋಷಿಯಲ್ ಬಿಸಿನೆಸ್, ಅನಾಲಿಟಿಕ್ಸ್ ಮುಂತಾದ ಹೊಸ ಕ್ಷೇತ್ರಗಳತ್ತ ಐಬಿಎಂ ಹೆಚ್ಚಿನ ಗಮನ ಹಾಗೂ ಬಂಡವಾಳ ಹೂಡಲು ನಿರ್ಧರಿಸಿದೆ. (ಏಜೆನ್ಸೀಸ್)