ಆರ್ ಬಿಐ ಕೃಪೆ: ಮತ್ತೆ ಗೃಹ ಸಾಲ ಏರಿಕೆ?
ಮುಂಬೈ, ಜ.29: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ರಘುರಾಮ್ ಜಿ ರಾಜನ್ ಪ್ರಕಟಿಸಿರುವ ಹೊಸ ಹಣಕಾಸು ನೀತಿಯ ತನ್ನ ಪರಿಣಾಮ ಬೀರುತ್ತಿದೆ. ಬ್ಯಾಂಕುಗಳ ಗೃಹ ಹಾಗೂ ಕಾರು ಸಾಲ ಮತ್ತಷ್ಟು ದುಬಾರಿಯಾಗಿದೆ. ಆದರೆ, ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ತಕ್ಷಣವೇ ಸಾಲ ಬಡ್ಡಿದರ ಏರಿಸುವುದಿಲ್ಲ ಎಂದು ಭರವಸೆ ನೀಡಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನುಮತ್ತೊಮ್ಮೆ ಶೇ.0.25ರಷ್ಟು ಏರಿಕೆ ಮಾಡಿದ್ದು, ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಪಾಲಿಸಿ ರೆಪೋ ದರವನ್ನು ಶೇ.8ಕ್ಕೆ ಹೆಚ್ಚಿಸಿದೆ.
'ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೊ ದರವನ್ನು ಹೆಚ್ಚಿಸಲಾಗಿದೆ ಮತ್ತು ರುಪಾಯಿ ಮೌಲ್ಯ ವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ವಿತ್ತೀಯ ನಿಧಿ ಸಂಗ್ರಹದ ಮೂಲಕ ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸಬೇಕಿದೆ' ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ರುಪಾಯಿ ಅಪಮೌಲ್ಯ ತಡೆಗಟ್ಟಲು ರಾಜನ್ ತೆಗೆದುಕೊಂಡ ನಿರ್ಣಯಗಳು ಸೂಕ್ತವೇ ಆದರೂ ಸಾಮಾನ್ಯ ಜನತೆ ಇದು ಮತ್ತೊಂದು ಹೊಡೆತ ಎನ್ನಬಹುದು. ಹಬ್ಬದ ಸಾಲುಗಳಲ್ಲಿ ಇಎಂಐ ಮೂಲಕ ಸಾಲ ಸೋಲ ಮಾಡಿಯಾದರೂ ತುಪ್ಪ ತಿನ್ನುವ ಕನಸು ಹೊತ್ತವರು ಇನ್ನಷ್ಟುಕಾಲ ಸುಮ್ಮನಿರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ

ಮೂರನೇ ತ್ರೈಮಾಸಿಕ ಅವಧಿಯಲ್ಲೂ ರೆಪೋ ಏರಿಕೆ
ಮೂರನೇ ತ್ರೈಮಾಸಿಕ ಅವಧಿಯ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ ನಗದು ಮೀಸಲು ಅನುಪಾತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್ ಬಿಐ ಮುಖ್ಯಸ್ಥ ರಘುರಾಮ್ ರಾಜನ್ ಅವರು ತಿಳಿಸಿದ್ದಾರೆ.
ಮೊದಲ ತ್ರೈಮಾಸಿಕದಲ್ಲಿ ರೆಪೊ ದರವನ್ನು ಶೇ.7.25ರಿಂದ ಶೇ.7.5ಕ್ಕೆ ಏರಿಕೆ ಮಾಡಲಾಗಿತ್ತು. ರೆಪೊ ದರವನ್ನು ಶೇ.7.50 ರಿಂದ ಶೇ.7.75ಕ್ಕೆ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಅದೇ ದರದಲ್ಲಿ ಏರಿಕೆ ಮಾಡಲಾಗಿದೆ.

ಸಿಆರ್ ಆರ್ ದರದ ಬಗ್ಗೆ
ದೈನಂದಿನ ನಗದು ಮೀಸಲು ಅನುಪಾತ(ಸಿಆರ್ ಆರ್)ದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಶೇ 99 ರಿಂದ ಶೇ 95ಕ್ಕೆ ಇಳಿಸಲಾಗಿತ್ತು. ನಂತರದ ತ್ರೈಮಾಸಿಕದಲ್ಲಿ ಸಾಮಾನ್ಯ ಸಿಆರ್ ಅರ್ ಪ್ರಮಾಣದಲ್ಲಿ ಬದಲಾವಣೆ ಕಂಡು ಬಂದಿಲ್ಲ. ನಗದು ಮೀಸಲು ಅನುಪಾತ(ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ.

ಲಿಕ್ವಿಡಿಟಿ ಅನುಪಾತದ ಪ್ರಮಾಣ
ಆರ್ ಬಿಐ ನೀತಿ ಪ್ರಕಟಿಸುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ಬಾಂಡ್ ಗಳು ಮೌಲ್ಯ ಕಳೆದುಕೊಳ್ಳುತ್ತಿದೆ. ಲಿಕ್ವಿಡಿಟಿಗೆ ಅವಕಾಶ ನೀಡಿರುವುದರಿಂದ ನೆಟ್ ಡಿಮ್ಯಾಂಡ್ ಅಂಡ ಟೈಮ್ ಲಿಯಾಬಿಲಿಟಿಸ್(NDTL) ನಂತೆ 7 ಹಾಗೂ 14 ದಿನಗಳ ಅವಧಿಯ ರೆಪೋ ದರ ಶೇ 0.25 ರಂತೆ ಬ್ಯಾಂಕ್ ಗಳು ನಿಧಿ ಪಡೆಯಬಹುದಾಗಿದೆ.

ಮಾರ್ಜಿನಲ್ ಸ್ಟಾಡಿಂಗ್ ಫೆಸಿಲಿಟಿ(ಎಂಎಸ್ ಎಫ್) ದರ
ಮಾರ್ಜಿನಲ್ ಸ್ಟಾಡಿಂಗ್ ಫೆಸಿಲಿಟಿ(ಎಂಎಸ್ ಎಫ್) ದರವನ್ನು 25 ಮೂಲಾಂಶಗಳಷ್ಟು ಇಳಿಸಲಾಗಿದೆ. ಅಂದರೆ ಶೇ 9.0 ರಿಂದ ಶೇ 8.75ಕ್ಕೆ ಇಳಿದಿದೆ.
ಮೊದಲ ತ್ರೈಮಾಸಿಕದಲ್ಲಿ 75 ಮೂಲಾಂಶಗಳಷ್ಟು ಇಳಿಸಲಾಗಿತ್ತು. ಅಂದರೆ ಶೇ 10.25 ರಿಂದ ಶೇ 9.5ಕ್ಕೆ ಇಳಿಸಲಾಗಿತ್ತು. ನಂತರ ತ್ರೈಮಾಸಿಕಗಳಲ್ಲೂ ಇದೇ ಪ್ರಮಾಣ ಮುಂದುವರೆದಿದೆ.
ರೆಪೋದರ ಆಧಾರಿಸಿ ಬ್ಯಾಂಕುಗಳು ಶೇ 10.25ರಂತೆ ಆರ್ ಬಿಐ ನಿಂದ ಬ್ಯಾಂಕುಗಳು ಹಣ ಪಡೆಯುತ್ತಿದ್ದವು. ಈಗ ಇದು 25ಮೂಲಾಂಶಗಳಷ್ಟು ಇಳಿಸಲಾಗಿದೆ. ಮಾರುಕಟ್ಟೆ ಅಂದಾಜು ಶೇ 0.25ರಷ್ಟಿತ್ತು.

ಹಣದುಬ್ಬರದ ಕಥೆ ಏನಾಗಿದೆ?
ಆರ್ ಬಿಐ ತ್ರೈಮಾಸಿಕ ನೀತಿ ಗಮನಿಸಿದರೆ ಆರ್ಥಿಕ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಹರಿಸಿದಂತೆ ಕಾಣುವುದಿಲ್ಲ. ಹಣದುಬ್ಬರದ ಜತೆ ಗುದ್ದಾಡುತ್ತಿದೆ.
ಇಂಧನ ದರ ತ್ವರಿತ ಗತಿ ಏರಿಕೆ, ರುಪಾಯಿ ಅಪಮೌಲ್ಯ, ಅಂತಾರಾಷ್ಟ್ರೀಯ ಸರಕು ಸಾಮಾಗ್ರಿ ದರ ಏರಿಕೆ ಎಲ್ಲವನ್ನು ಆರ್ ಬಿಐ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ.
CPI(ಗ್ರಾಹಕ ದರ ಸೂಚ್ಯಂಕ) ಎಣಿಕೆಯಂತೆ ರೀಟೇಲ್ ಮಟ್ಟದಲ್ಲಿ ಹಣದುಬ್ಬರ ನಾಲ್ಕು ವರ್ಷದಿಂದ ಏರಿಕೆ ಕಾಣುತ್ತಲೇ ಇದೆ. ಖಾರಿಫ್ ಬೆಳೆ ಕೊಯ್ಲಿನ ನಂತರ ಸಿಪಿಐ ಹಣದುಬ್ಬರದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು ಆರ್ ಬಿಐ ಭರವಸೆ ನೀಡಿದೆ.

ಬ್ಯಾಂಕಿಂಗ್ ಷೇರುಗಳು
ಆರ್ ಬಿಐ ನೀತಿ ಪ್ರಕಟಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಬ್ಯಾಂಕ್ ಷೇರುಗಳಲ್ಲಿ ಏರಿಳಿತ ಕಂಡು ಬಂದಿದೆ.
ಇಂಡಸ್ ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಷೇರುಗಳು ಶೇ 2 ರಷ್ಟು, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಎನ್ ಎಸ್ ಇಯಲ್ಲಿ ಇಳಿಮುಖ ಕಂಡಿದ್ದವು.











Click it and Unblock the Notifications