ಫೆ.22ರಂದು ಈ ಖಾಸಗಿ ಬ್ಯಾಂಕ್‌ನ UPI ಸೇವೆ ಸ್ಥಗಿತ: ಗ್ರಾಹಕರೇ ಗಮನಿಸಿ!
ಬೆಂಗಳೂರು, ಫೆಬ್ರವರಿ 20: ನಾವು ಡಿಜಿಟಲ್ ಯುಗಕ್ಕೆ ಕಾಲಿಟ್ಟು ಡಿಜಿಟಲೀಕರಣಕ್ಕೆ ಹೊಂದಿಕೊಂಡು ಸಾಗುತ್ತಿದ್ದೇವೆ. ದಿನ ನಿತ್ಯದ ಬದುಕಿನಲ್ಲಿ ಡಿಜಿಟಲೀಕರಣ ಎನ್ನುವುದು ಎಷ್ಟು ಹಾಸುಹೊಕ್ಕಾಗಿದೆ ಎಂದರೆ ನಿಮಗೆ ನಗದು ಅಂದರೆ ಕೈಯಲ್ಲಿ ಕ್ಯಾಶ್ ಇಲ್ಲದವರು ಸಿಗಬಹುದು ಆದರೆ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಇಲ್ಲದವರು ಸಿಗುವುದು ತುಂಬಾ ಕಷ್ಟ.
ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) ಸೇರಿದಂತೆ ಡಿಜಿಟಲ್ ಪೇಮೆಂಟ್ ಯುಪಿಐ ಅಪ್ಲಿಕೇಶನ್ಸ್ ಬಳಸದವರೇ ಇಲ್ಲದಂತಾಗಿದೆ. ಚಿಲ್ಲರ ಅಂಗಡಿಯಿಂದ ಹಿಡಿದು ಸರ್ಕಾರಿ ಬಸ್‌ಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಈಗ ಡಿಜಿಟಲ್ ಪೇಮೆಂಟ್ ಸರ್ವೇ ಸಾಮಾನ್ಯ. ಇದೀಗ ಬ್ಯಾಂಕ್‌ವೊಂದರ ಯುಪಿಐ ಅಪ್ಲಿಕೇಶನ್ ಫೆಬ್ರವರಿ 22ರಂದು ಕೆಲ ಸಮಯ ಸ್ಥಗಿತಗೊಳ್ಳಲಿದೆ.

ಹೌದು ಎಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯವಾದ ವಿಚಾರವನ್ನು ಹಂಚಿಕೊಂಡಿದ್ದು, ಫೆಬ್ರವರಿ 22ರಂದು ಕೆಲವು ಗಂಟೆಗಳವರೆಗೆ ಯುಪಿಐ ಪಾವತಿ ಅಪ್ಲಿಕೇಶನ್ ಸೇವೆ ಇರುವುದಿಲ್ಲ ಎಂದು ತಿಳಿಸಿದೆ. ತುರ್ತು ವ್ಯವಸ್ಥೆ ನಿರ್ವಹಣೆ ಸಂಬಂಧ ಹಿನ್ನೆಲೆಯಲ್ಲಿ ಫೆಬ್ರವರಿ 22 ಅಂದರೆ ಇದೇ ಶನಿವಾರ ಬೆಳಗಿನ ಜಾವ 2.30ರಿಂದ ಬೆಳಗ್ಗೆ 7 ಗಂಟೆಯವರೆಗೆ ತಾತ್ಕಾಲಿಕವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಯುಪಿಐ ಪಾವತಿ ಅಪ್ಲಿಕೇಶನ್ ಸೇವೆ ಸ್ಥಗಿತ ಆಗಲಿದೆ.
ಈ ಸಮಯದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) ಸೇರಿದಂತೆ ಇತರ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್‌ಗಳಲ್ಲಿ ಹಣ ವರ್ಗಾವಣೆಯಾಗುವುದಿಲ್ಲ. ಹೀಗಾಗಿ ಗ್ರಾಹಕರು ಎಚ್ಚರ ವಹಿಸಬೇಕಿದೆ. ಆ ಸಮಯದಲ್ಲಿ ಎಚ್‌ಡಿಎಫ್‌ಸಿ ಬದಲಿಗೆ ಬೇರೆ ಬ್ಯಾಂಕ್‌ನಲ್ಲಿರುವ ಖಾತೆಯನ್ನು ಸಕ್ರಿಯ ಮಾಡಿಕೊಳ್ಳಿ. ಇಲ್ಲದೇ ಇದ್ದರೆ, ಫೆಬ್ರವರಿ 22ರ ಶನಿವಾರ ಬೆಳಗಿನ ಜಾವ 2.30 ರಿಂದ ಬೆಳಗ್ಗೆ 7 ಗಂಟೆಯವರೆಗೆ ವ್ಯವಹರಿಸಲೇ ಬೇಕಾದರೆ ಮೊದಲೇ ನಗದು ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಶನಿವಾರ 7 ಗಂಟೆಯ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಯುಪಿಐ ಪಾವತಿ ಅಪ್ಲಿಕೇಶನ್ ಸೇವೆ ಮತ್ತೆ ಆರಂಭವಾಗಲಿದೆ.












Click it and Unblock the Notifications