ಸರ್ಕಾರಕ್ಕೆ 9,406 ಕೋಟಿ ರೂ ಡಿವಿಡೆಂಡ್ ನೀಡಿದ್ದ ಎಚ್‌ಎಎಲ್
ಬೆಂಗಳೂರು, ಜನವರಿ 8: ಮರುಖರೀದಿ ಮತ್ತು ಡಿವಿಡೆಂಡ್ ಮೇಲಿನ ತೆರಿಗೆ ಹಾಗೂ ಷೇರುಗಳ ಮರುಖರೀದಿಗಾಗಿ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) ಕಳೆದ ಮೂರು ವರ್ಷಗಳಲ್ಲಿ ಒಟ್ಟು 9,406 ಕೋಟಿ ರೂ ಮೊತ್ತವನ್ನು ಡಿವಿಡೆಂಡ್ ರೂಪದಲ್ಲಿ ಭಾರತ ಸರ್ಕಾರಕ್ಕೆ ಪಾವತಿಸಿತ್ತು ಎನ್ನುವುದು ಕಂಪೆನಿಯ ಹಣಕಾಸು ಲೆಕ್ಕಾಚಾರಗಳು ತಿಳಿಸಿವೆ.
2013-14ರ ಅವಧಿಯಿಂದ ಒಳಗೊಂಡಂತೆ ಐದು ವರ್ಷದ ಅವಧಿಯಲ್ಲಿ ಈ ಮೊತ್ತ 11,024 ಕೋಟಿ ರೂ. ತಲುಪಿದೆ. ಎಚ್‌ಎಎಲ್ ತನ್ನ ನೌಕರರಿಗೆ ವೇತನ ನೀಡಲು ಸಾಲ ಮಾಡಬೇಕಾದ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವುದಕ್ಕೆ ಇದೊಂದು ನಿದರ್ಶನವಾಗಿದೆ.
ಇದಲ್ಲದೆ, ಕಂಪೆನಿಯು ತಾನು ಪೂರ್ಣಗೊಳಿಸಿದ ಕಾರ್ಯಗಳಿಗೆ ಬರಬೇಕಾದ 15 ಸಾವಿರ ಕೋಟಿ ಬಾಕಿಯನ್ನು ಇನ್ನೂ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಇದರಲ್ಲಿ ಭಾರತೀಯ ವಾಯು ಸೇನೆಯ ಪಾಲು ಹಿರಿದಾಗಿದೆ.

ಈ ಕಾರಣಗಳಿಂದಾಗಿ ಕಂಪೆನಿ ತನ್ನ ಕಾರ್ಯಾಚರಣೆಯ ವೆಚ್ಚವನ್ನು ನಿಭಾಯಿಸಲು ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಂದ ನಿರಂತರವಾಗಿ ಸಾಲ ಪಡೆಯುವಂತಾಗಿತ್ತು.
ಎಚ್‌ಎಎಲ್‌ನ ಹಿರಿಯ ಅಧಿಕಾರಿಗಳು, ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಮುಂದಿನ ವಾರ ನವದೆಹಲಿಯಲ್ಲಿ ಸಭೆ ಸೇರಿ ಈ ಬಗ್ಗೆ ಚರ್ಚಿಸಲಿದ್ದಾರೆ.
ಈ ಸಭೆ ಮೂಲಕ ಕಂಪೆನಿಯ ಹಣಕಾಸು ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಯಲಿದೆ. ಕೆಲಸಕ್ಕೂ ಮುನ್ನವೇ ಮುಂಗಡ ಹಣ ಪಡೆದುಕೊಳ್ಳುವುದು ತಕ್ಕಮಟ್ಟಿಗೆ ಒತ್ತಡ ಕಡಿಮೆ ಮಾಡಬಹುದು ಎಂದು ಸರ್ಕಾರದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಎಚ್‌ಎಎಲ್‌ನ ವಾರ್ಷಿಕ ವರದಿ ಪ್ರಕಾರ, ಕಂಪೆನಿಯು ತನ್ನ ಕಾರ್ಯಚಟುವಟಿಕೆಗಳಿಗೆ ಹಣ ಹೊಂದಿಸಲು ಕಳೆದ ಹಣಕಾಸು ವರ್ಷದಲ್ಲಿ 9 ಬಾರಿ ಸಾಲ ಪಡೆದುಕೊಂಡಿದೆ. ಅದರಲ್ಲಿ 2018ರ ಮಾರ್ಚ್ ಒಂದರಲ್ಲಿಯೇ ಏಳು ಬಾರಿ ಸಾಲ ಪಡೆದುಕೊಂಡಿದೆ. ಹಿಂದಿನ ಹಣಕಾಸು ವರ್ಷದ ಒಂಬತ್ತು ತಿಂಗಳಿನಲ್ಲಿ 4,446.87 ಕೋಟಿ ರೂ. ಸಾಲ ತೆಗೆದುಕೊಂಡಿದೆ.
ಐಎಎಫ್ ತನ್ನ ಬಾಕಿ ಹಣ ಪಾವತಿಸದೆ ಇದ್ದರೆ ಅದರ ಮೊತ್ತ ಮಾರ್ಚ್ 31ರ ವೇಳೆಗೆ 20 ಸಾವಿರ ಕೋಟಿ ರೂ. ಗೆ ತಲುಪಲಿದೆ ಎಂದು ವರದಿ ಹೇಳಿದೆ.












Click it and Unblock the Notifications