ಜಿಎಸ್‌ಟಿ ಎಫೆಕ್ಟ್: ಸೋಮವಾರದಿಂದ ನಂದಿನಿ ಮೊಸರು, ಮಜ್ಜಿಗೆ ದುಬಾರಿ
ಬೆಂಗಳೂರು, ಜುಲೈ 17: ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ದರ ಸೋಮವಾರ (ಜುಲೈ 18) ದಿಂದ ಅನ್ವಯವಾಗಲಿದೆ. ಹಾಲಿನ ಉತ್ಪನ್ನಗಳ ಮೇಲೂ ಕೇಂದ್ರ ಸರ್ಕಾರ ಶೇಕಡ 5 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ತನ್ನ ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ನೂತನ ದರ ಜಾರಿಯಿಂದ ಪ್ರತಿ ಉತ್ಪನ್ನಗಳ ಮೇಲೆ 1 ರು.ನಿಂದ 4 ರುಪಾಯಿವರೆಗೆ ಬೆಲೆ ಹೆಚ್ಚಾಗಲಿದೆ.
ಈ ಮೊದಲು ಒಂದು ಲೀಟರ್ ನಂದಿನಿ ಮೊಸರಿನ ದರ 43 ರುಪಾಯಿ ಇತ್ತು ಜಿಎಸ್‌ಟಿ ವಿಧಿಸಿದ ನಂತರ 3 ರುಪಾಯಿ ಹೆಚ್ಚಳವಾಗಲಿದ್ದು, 46 ರುಪಾಯಿ ಆಗಲಿದೆ. ಅರ್ಧ ಲೀಟರ್ ಮೊಸರಿನ ಬೆಲೆ 22 ರುಪಾಯಿಗಳಿಂದ 24 ರುಪಾಯಿಗೆ ಹೆಚ್ಚಳವಾಗಿದೆ. 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಬೆಲೆ 1 ರುಪಾಯಿ ಹೆಚ್ಚಳವಾಗಲಿದೆ. ನೂತನ ದರಗಳು ಸೋಮವಾರದಿಂದ ಜಾರಿಗೆ ಬರಲಿದೆ.

ನೂತನ ಪಾಕೆಟ್‌ಗಳು ಇನ್ನೂ ಮುದ್ರಣವಾಗಿಲ್ಲವಾದ್ದರಿಂದ ಪಾಕೆಟ್‌ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತದೆ. ಆದರೆ ಗ್ರಾಹಕರು ನೂತನವಾಗಿ ನಿಗದಿಪಡಿಸಿದ ದರಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕನ ಮೇಲೆ ಹೆಚ್ಚಿನ ಹೊರೆ; ಹಾಲಿನ ಉತ್ಪನ್ನಗಳು ಮತ್ತು ಆಹಾರ ಧಾನ್ಯಗಳಿಗೆ ನೀಡಿದ್ದ ಜಿಎಸ್‌ಟಿ ವಿನಾಯಿತಿಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಪ್ರಮುಖ ಆಹಾರ ಧಾನ್ಯಗಳು, ಮೂಲಭೂತ ವಸ್ತುಗಳು ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟಿದ್ದು, ಗ್ರಾಹಕನ ಜೇಬಿಗೆ ಕತ್ತರಿ ಬೀಳಲಿದೆ.

ಜೂನ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 47ನೇ ಸಭೆಯು ಹಾಲಿನ ಉತ್ಪನ್ನಗಳು ಹಾಗೂ ಆಹಾರ ಧಾನ್ಯಗಳಿಗೆ ನೀಡಿದ್ದ ತೆರಿಗೆ ವಿನಾಯಿತಿ ಹಿಂಪಡೆದಿತ್ತು. ಮಾತ್ರವಲ್ಲದೆ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ.
ತಮ್ಮ ಮೇಲೆ ಬೀಳುವ ಜಿಎಸ್‌ಟಿ ಹೊರೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಲಿವೆ. ನಂದಿನಿ ಮಾತ್ರವಲ್ಲದೆ, ಖಾಸಗಿ ಡೇರಿ ಕಂಪನಿಗಾಳದ ದೊಡ್ಲ, ಆರೋಗ್ಯ, ಹೆರಿಟೇಜ್ ಸಹ ಮೊಸರು, ಮಜ್ಜಿಗೆ ದರಗಳು ಏರಿಕೆಯಾಗಲಿವೆ ಎಂದು ವರದಿಯಾಗಿದೆ.

ಸದ್ಯಕ್ಕೆ ಹಾಲಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೂ, ಹಾಲಿನ ದರ ಹೆಚ್ಚಳಕ್ಕೆ ರೈತರು ಒತ್ತಾಯ ಮಾಡುತ್ತಿದ್ದು, ಹಾಲಿನ ದರ ಹೆಚ್ಚಿಸುವಂತೆ ಕೆಎಂಎಫ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ,
ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಹಾಲಿನ ದರ ಹೆಚ್ಚಳ ಅನಿವಾರ್ಯ ಎಂದು ಅದು ಸರ್ಕಾರಕ್ಕೆ ಕೇಳಿದೆ. ಆದರೆ ಹಾಲಿನ ದರ ಹೆಚ್ಚಳದ ಕುರಿತು ಸರ್ಕಾರ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.












Click it and Unblock the Notifications