Gold Investment: ಚಿನ್ನ & ಬೆಳ್ಳಿ ಗಗನಕ್ಕೆ! ಹೂಡಿಕೆದಾರರಿಗೆ ಮಾರುಕಟ್ಟೆ ತಜ್ಞರ ಮಹತ್ವದ ಸಲಹೆ
ಬೆಂಗಳೂರು, ಅಕ್ಟೋಬರ್ 15: ಚಿನ್ನ ಮತ್ತು ಬೆಳ್ಳಿಗೆ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದರಿಂದಲೇ ದರ ಗಗನಕ್ಕೇರುತ್ತಿದೆ. ಹಬ್ಬ ಬಂತೆಂದರೆ ಸಾಕು ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆಗೆ ಮುಂದಾಗುತ್ತಾರೆ. ಹೂಡಿಕೆ ಎಂದರೆ ಅದು ಖರೀದಿ ಮಾತ್ರವಲ್ಲದೇ, ಚಿನ್ನದ ಶೇರುಗಳನ್ನು ಖರೀದಿಸುವುದು, ಎಸ್‌ಐಪಿ ಯಂತಹ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಹೂಡಿಕೆದಾರರು ಅಧಿಕ ಹಣ ಗಳಿಕೆಗಾಗಿ ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳತ್ತ ಒಲವು ಹೊಂದಿರುತ್ತಾರೆ. ಇತ್ತೀಚೆಗೆ ನಿರಂತರ ಮತ್ತು ದಿಢೀರ್ ಬೆಲೆ ಏರಿಕೆಯನ್ನು ನೋಡಿ ಅನೇಕರು ಈ ಲೋಹಗಳಲ್ಲಿ ಹೂಡಿಕೆ ಮಾಡುವುದೇ ಸೂಕ್ತ ಎಂದು ಭಾವಿಸಿದ್ದಾರೆ. ಇದು ಒಳಿತೇ ಎಂಬ ಪ್ರಶ್ನೆ ಮಾರುಕಟ್ಟೆ ವಲಯದಲ್ಲಿದೆ. ಹಾಗಾದರೆ ಏರುಗತಿಯ ಚಿನ್ನ-ಬೆಳ್ಳಿಯ ಮೇಲೆ ಸದ್ಯ ಹೂಡಿಕೆ ಮಾಡಬೇಕಾ? ಷೇರುಪೇಟೆಯಲ್ಲಿ ಚಿನ್ನ-ಬೆಳ್ಳಿ ಷೇರ್ ಖರೀಸಿದಿ, ಇಲ್ಲವೇ ಚಿನ್ನದ ಬಿಸ್ಕತ್ ಖರೀದಿಸಿ ಮುಂದೆ ಬೆಲೆ ಹೆಚ್ಚಳವಾದಾಗ ಮಾರಿ ಹಣ ಗಳಿಸಬೇಕಾ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಈ ಸುದ್ದಿ ನೋಡಿ.

ಮಾರುಕಟ್ಟೆ ತಜ್ಞರ ಪ್ರಕಾರ, ಸದ್ಯ ಚಿನ್ನ ಮತ್ತು ಬೆಳ್ಳಿ ಎರಡೂ ತಮ್ಮ ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿವೆ. ಇಂತಹ ಸಮಯದಲ್ಲಿ (ದೀಪಾವಳಿ ವೇಳೆ) ಹೂಡಿಕೆ ಮಾಡುವಾಗ ಹೂಡಿಕೆದಾರರು ಜಾಗರೂಕರಾಗಿರಬೇಕು. ದೊಡ್ಡ ಪ್ರಮಾಣದ ಹೂಡಿಕೆಗಳನ್ನು ತಪ್ಪಿಸಬೇಕು. ಪೂಜಾ ಉದ್ದೇಶಗಳಿಗೆ ಚಿನ್ನ ಖರೀದಿ ಮಾಡಬಹುದು. ಹೂಡಿಕೆಗೆ ಇದು ಸೂಕ್ತ ಸಮಯ ಅಲ್ಲ ಅಂತಲೂ ಹೇಳಲಾಗುತ್ತಿದೆ. ಏಕೆಂದರೆ ದಿಡೀರ್ ಏರಿಕೆಯಾದ ಯಾವುದೇ ವಸ್ತು, ಲೋಹ, ಷೇರುಗಳಾಗಲಿ ಅವು ಪುನಃ ಕೆಳಕ್ಕೆ ಇಳಿಯುವ ಸಾಧ್ಯತೆ ಇರುತ್ತದೆ. ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಶೇಕಡಾ 10-15ರಷ್ಟು ಇಳಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಚಿನ್ನ ಮತ್ತು ಬೆಳ್ಳಿಗೆ ದೀಪಾವಳಿ ವೇಳೆ ಬೇಡಿಕೆ ಹೆಚ್ಚಾಗಿದೆ. ಚೀನಾ, ಜಪಾನ್, ಭಾರತ, ಯೂರೋಪ್ ದೇಶಗಳು ಹಾಗೂ ದೊಡ್ಡ ದೊಡ್ಡ ದೇಶಗಳು ಡಾಲರ್ ಮಾರಿ ಆ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನ ಖರೀದಿಸುತ್ತಿವೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಲೋಹಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಆರ್‌ಬಿಐ ಸಹ ಚಿನ್ನ ಖರೀದಿಸುತ್ತಿದೆ. ಹೂಡಿಕೆದಾರರಿಗೆ ಕಳೆದ ಒಂದೇ ವರ್ಷದಲ್ಲಿ ಚಿನ್ನದ ಹೂಡಿಕೆದಾರರಿಗೆ 60 ರಷ್ಟು ರಿಟರ್ನ್ (ಲಾಭ) ನೀಡಿದೆ. ಬೆಳ್ಳಿಯು 70-75ರಷ್ಟು ಲಾಭ ತಂದು ಕೊಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಚಿನ್ನವು 200-300 ರೂಪಾಯಿ ಏರಿಕೆ ಆಗಬಹುದು. ಅಮೆರಿಕಾ ಟ್ಯಾರಿಫ್ ನೀತಿಗಳು, ವಿದೇಶಿ ಆರ್ಥಿಕ ಹಿಂಜರಿತ, ವಿದೇಶಿ ಯುದ್ಧಗಳ ಕಾರಣದಿಂದ ಚಿನ್ನಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಅದಕ್ಕೆ ತಕ್ಕಂತೆ ಬೆಲೆಯು ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಬಂಗಾರದ ದರ ಕೊಂಚ ಕುಸಿಯಬಹುದು. ಶೇಕಡಾ 10-15ರಷ್ಟು ಇಳಿಕೆ ಆಗಬಹುದು. ಆದರೆ ಮುಂದಿನ ಆರೇ ತಿಂಗಳಲ್ಲಿ ಮತ್ತೆ ಶೇಕಡಾ 60ರಷ್ಟು ಲಾಭ ತಂದು ಕೊಡಲಿದೆ ಎಂಬುದು ಅನುಮಾನ. ಆದರೆ ಚಿನ್ನ-ಬೆಳ್ಳಿಯಲ್ಲಿ ಭಾರೀ ಇಳಿಕೆ ಆಗುವ ಸಂಭವ ಇಲ್ಲ ಅಂತಲೂ ಷೇರುಪೇಟೆ ತಜ್ಞರು ತಿಳಿಸಿದ್ದಾರೆ.
ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 2 ಲಕ್ಷ ರೂಪಾಯಿ ತಲುಪುತ್ತದೆ ಎಂಬ ಚರ್ಚೆಗಳು ಶುರುವಾಗಿವೆ. ಹೀಗಾಗಿ ಹೂಡಿಕೆದಾರರು ಹೂಡಿಕೆಗೆ ಹೆಚ್ಚು ಒಲವು ತೋರಿಸಿದ್ದಾರೆ. ಯಾವುದೇ ಹೂಡಿಕೆಗೂ ಮುನ್ನ ಮಾರುಕಟ್ಟೆ & ತಜ್ಞರ ಮಾಹಿತಿ, ಬೇಡಿಕೆ ನೋಡಿಕೊಂಡು, ಮತ್ತಷ್ಟು ವಿಶ್ಲೇಷಿಸಿ ಹೂಡಿಕೆ ಮಾಡುವುದು ಒಳಿತು.
ಚಿನ್ನ vs ಬೆಳ್ಳಿ: ಯಾವುದು ಹೆಚ್ಚು ಸುರಕ್ಷಿತ
ಮೂಲಗಳ ಪ್ರಕಾರ, ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿ ಹೆಚ್ಚು ಸುರಕ್ಷಿತ ಹೂಡಿಕೆಯ ಸರಕು. ಬೆಳ್ಳಿಯ ಕೈಗಾರಿಕಾ ಬಳಕೆ ಅಧಿಕವಾಗಿದೆ. ಅದು ಕಡಿಮೆ ಅಪಾಯ ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಚಿನ್ನವು ಹೆಚ್ಚು ಲಾಭ ತಂದುಕೊಟ್ಟರು ಸಹಿತ ಜಾಗತಿಕ ಅನಿಶ್ಚಿತತೆಗಳಿಂದ ಕೂಡಿದೆ. ವಿಶ್ವಾಸಾರ್ಹವಾದರೂ ಹೂಡಿಕೆ, ಲಾಭ -ನಷ್ಟದ ಸವಾಲುಗಳು ಹೆಚ್ಚಿರುತ್ತದೆ. ಐತಿಹಾಸಿಕ ಚಿನ್ನ-ಬೆಳ್ಳಿ ಅನುಪಾತವನ್ನು ಪರಿಗಣಿಸಿದರೆ, ಸದ್ಯಕ್ಕೆ ಚಿನ್ನಕ್ಕಿಂತ ಬೆಳ್ಳಿ ಉತ್ತಮ ಮೌಲ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ.
ಹೂಡಿಕೆಯ ವಿಧಾನ, ಸವಾಲುಗಳು
ಭೌತಿಕ ಲೋಹಗಳ ಉದ್ದೇಶ ಅಂದರೆ ಚಿನ್ನ ಖರೀದಿಗಿಂತ ಗೋಲ್ಡ್ ಇಟಿಎಫ್ (Gold ETF) ಅಥವಾ ಗೋಲ್ಡ್ ಫಂಡ್-ಆಫ್-ಫಂಡ್‌ಗಳ (FOF) ಮೂಲಕ ಹೂಡಿಕೆ ಮಾಡುವುದು ಹೆಚ್ಚು ಪರಿಣಾಮಕಾರಿ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೊರತೆಯಿಂದಾಗಿ, ಎಸ್‌ಬಿಐ, ಕೋಟಕ್ ಸೇರಿದಂತೆ ನಾಲ್ಕು ಪ್ರಮುಖ ಎಎಂಸಿಗಳು ಸಿಲ್ವರ್ ಇಟಿಎಫ್ ಎಫ್‌ಒಎಫ್‌ಗಳಲ್ಲಿ ಹೊಸ ಚಂದಾದಾರಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಹೀಗಾಗಿ ಬೆಳ್ಳಿಯನ್ನು ನೀವು ಖರೀದಿಸಬಹುದೆಂದು ತಜ್ಞರು ಶಿಫಾರಸು ಮಾಡುತ್ತಾರೆ. ಚಿನ್ನದ ಷೇರು ಖರೀದಿ, ವ್ಯವಸ್ಥಿತ ಹೂಡಿಕೆ ಯೋಜನೆ (SIP) ಸಹ ಮಾಡಬಹುದಾಗಿದೆ. ಹೈರಿಸ್ಕ, ಮೀಡಿಯಂ ರಿಸ್ಕ್, ರಿಟರ್ನ್ ನೋಡಿಕೊಂಡು ಹೂಡಿಕೆ ಮಾಡಬಹುದು..
ಚಿನ್ನದ ದರದಲ್ಲಿ ಪ್ರತಿ ನಿತ್ಯವು ಏರಿಕೆ ಆಗುತ್ತಿದೆ. ದಿನದಿಂದ ದಿನಕ್ಕೆ ಗ್ರಾಹಕರಿಗೆ ಚಿನ್ನ-ಬೆಳ್ಳಿ ಆಘಾತ ನೀಡುತ್ತಿದೆ. ಈ ಸಂದರ್ಭದಲ್ಲಿ ಇಳಿಕೆ ಆಗುವವರೆಗೆ ಕಾಯುವುದು ಉತ್ತಮ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ದೀಪಾವಳಿ ಪ್ರಯುಕ್ತ ಖರೀದಿದಾರರು ಈ ಮೇಲಿನ ಅಂಶಗಳನ್ನು ಗಮನಿಸಿ ಚಿನ್ನ ಖರೀದಿಸಬೇಕೋ? ಬೇಡವೋ ಎಂದು ನಿರ್ಧರಿಸಬೇಕಿದೆ.
(ವಿಶೇಷ ಸೂಚನೆ: ಈ ಮಾಹಿತಿ ಸಾರ್ವಜನಿಕರ ತಿಳುವಳಿಕೆಗೆ ವಿನಃ ಖರೀದಿಗೆ, ಹೂಡಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದಲ್ಲ. ಲಾಭ, ನಷ್ಟವು ಹೂಡಿಕೆದಾರರ ವೈಯಕ್ತಿಕವೇ ವಿನಃ ವೆಬ್‌ಸೈಟ್ ಹೊಣೆಗಾರ ಅಲ್ಲ)












Click it and Unblock the Notifications