ವಿದ್ಯುತ್ ಕಣ್ಣಾಮುಚ್ಚಾಲೆ: ಕಲ್ಲಿದ್ದಲು ಆಮದಿಗೆ ಕೋಲ್ ಇಂಡಿಯಾ ನಿರ್ಧಾರ
ನವದೆಹಲಿ ಮೇ 29: ವಿಶ್ವದ ಅತಿ ದೊಡ್ಡ ಕಲ್ಲಿದ್ದಲು ಗಣಿ ಸಂಸ್ಥೆಯಾದ ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಕಂಪನಿಯು ಕಳೆದ ಏಳು ವರ್ಷಗಳಲ್ಲೇ ಮೊದಲ ಬಾರಿಗೆ ವಿದೇಶಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.
ಕಲ್ಲಿದ್ದಲು ಕೊರತೆಯಿಂದಾಗಿ ದೇಶದ ನಾನಾ ಭಾಗಗಳಲ್ಲಿ ಪದೇ ಪದೆ ವಿದ್ಯುತ್ ಕಡಿತದ ಅನುಭವವನ್ನು ನಾಗರಿಕರು ಅನುಭವಿಸಿದ್ದಾರೆ. ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ 2015 ರ ನಂತರ ಇದೇ ಮೊದಲ ಬಾರಿಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಕೋಲ್ ಇಂಡಿಯಾ ಸಂಸ್ಥೆ ನಿರ್ಧರಿಸಿದೆ.
ಕಳೆದ 5-6 ವರ್ಷಗಳಲ್ಲೇ ಏಪ್ರಿಲ್‌ನಲ್ಲಿ ಅತಿ ಹೆಚ್ಚು ಬಾರಿ ವಿದ್ಯುತ್ ಕಡಿತ ಉಂಟಾಗಿ ಜನರು ಸಂಕಷ್ಟ ಅನುಭವಿಸಿದರು. ಇದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಲ್ಲಿದ್ದಲು ಸಂಗ್ರಹಿಸಲು ಮುಂದಾಗಿವೆ.

ಕಲ್ಲಿದ್ದಲು ಆಮದಿಗೆ ನಿರ್ಧಾರ
"ಕೋಲ್ ಇಂಡಿಯಾ ಸಂಸ್ಥೆಯು ಸರಕಾರದಿಂದ ಸರಕಾರಕ್ಕೆ(ಜಿ2ಜಿ) ಆಧಾರದ ಮೇಲೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ. ಹಾಗೂ ರಾಜ್ಯದ ವಿದ್ಯುತ್ ಉತ್ಪಾದಕ ಘಟಕಗಳು ಮತ್ತು ಸ್ವತಂತ್ರ ವಿದ್ಯುತ್ ಉತ್ಪಾದಕರ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸರಬರಾಜು ಮಾಡುತ್ತದೆ,'' ಎಂದು ಮೇ 28 ರ ಪತ್ರದಲ್ಲಿ ಕೇಂದ್ರ ಇಂಧನ ಸಚಿವಾಲಯ ತಿಳಿಸಿದೆ.
ಕಲ್ಲಿದ್ದಲು ಕಾರ್ಯದರ್ಶಿ, ಕೋಲ್ ಇಂಡಿಯಾ ಅಧ್ಯಕ್ಷರು ಸೇರಿದಂತೆ ವಿದ್ಯುತ್ ಉತ್ಪಾದಕ ಘಟಕಗಳು, ಕೇಂದ್ರ ಮತ್ತು ರಾಜ್ಯ ಇಂಧನ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ಈ ಪತ್ರವನ್ನು ಕೇಂದ್ರ ಇಂಧನ ಸಚಿವಾಲಯ ಕಳುಹಿಸಿದೆ.

ವಿದ್ಯುತ್ ಬೇಡಿಕೆ ಹೆಚ್ಚಳ
2022 ರ ಮೂರನೇ ತ್ರೈಮಾಸಿಕದಲ್ಲಿ ಭಾರತವು ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಕಲ್ಲಿದ್ದಲು ಕೊರತೆ ಎದುರಿಸುವ ನಿರೀಕ್ಷೆಯಿದೆ. ವಿದ್ಯುತ್ ಕಡಿತದ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಕಲ್ಲಿದ್ದಲು ಸಂಗ್ರಹಿಸುವ ಅವಶ್ಯಕತೆಯಿದೆ. ರಾಜ್ಯಗಳಿಂದ ಅನೇಕ ಕಲ್ಲಿದ್ದಲು ಆಮದು ಟೆಂಡರ್‌ಗಳು ಗೊಂದಲಕ್ಕೆ ಕಾರಣವಾಗುತ್ತವೆ. ಹೀಗಾಗಿ ಕೋಲ್ ಇಂಡಿಯಾ ಮೂಲಕ ಕೇಂದ್ರೀಕೃತ ಕಲ್ಲಿದ್ದಲು ಸಂಗ್ರಹಣೆಗೆ ಬಹುತೇಕ ಎಲ್ಲಾ ರಾಜ್ಯಗಳು ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತಾಳಲಾಗಿದೆ ಎಂದು ಕೇಂದ್ರ ಇಂಧನ ಸಚಿವಾಲಯ ತಿಳಿಸಿದೆ.

ಕಲ್ಲಿದ್ದಲು ಪೂರೈಕೆ ಕಡಿತದ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಕಲ್ಲಿದ್ದಲಿನೊಂದಿಗೆ, ವಿದೇಶಿ ಕಲ್ಲಿದ್ದಲು ಆಮದನ್ನು ಹೆಚ್ಚಿಸಲು ಘಟಕಗಳ ಮೇಲೆ ಭಾರತ ಒತ್ತಡ ಹೇರಿತು. ವಿದ್ಯುತ್ ಸ್ಥಾವರಗಳು ಆಮದು ಮೂಲಕ ಕಲ್ಲಿದ್ದಲು ಸಂಗ್ರಹಿಸದಿದ್ದರೆ, ದೇಶೀಯವಾಗಿ ಗಣಿಗಾರಿಕೆಯ ಮಾಡಿದ ಕಲ್ಲಿದ್ದಲಿನ ಪೂರೈಕೆಯನ್ನು ಕಡಿತಗೊಳಿಸುವ ಎಚ್ಚರಿಕೆಯನ್ನು ನೀಡಿತು.

ಟೆಂಡರ್ ಪ್ರಕ್ರಿಯೆ ಸ್ಥಗಿತ
"ರಾಜ್ಯ ಘಟಕಗಳು ಮತ್ತು ಸ್ವತಂತ್ರ ವಿದ್ಯುತ್ ಉತ್ಪಾದಕಕರ ಉಷ್ಣ ವಿದ್ಯುತ್ ಸ್ಥಾವರಗಳಿಂದ ಸ್ಥಳೀಯ ಕಲ್ಲಿದ್ದಲಿನೊಂದಿಗೆ ಮಿಶ್ರಣಕ್ಕಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಪ್ರಕ್ರಿಯೆಯಲ್ಲಿರುವ ಟೆಂಡರ್ ಗಳನ್ನು ಅಮಾನತಿನಲ್ಲಿಡಲಾಗುವುದು. ಜಿ2ಜಿ ಮೂಲಕ ಕೋಲ್ ಇಂಡಿಯಾದಿಂದ ಬೆಲೆ ನಿಗದಿಗಾಗಿ ಹೀಗೆ ಮಾಡಲಾಗಿದೆ. ಇದರಿಂದ ಕನಿಷ್ಠ ದರದಲ್ಲಿ ಕಲ್ಲಿದ್ದಲು ಸಂಗ್ರಹಿಸಬಹುದು,'' ಎಂದು ಕೇಂದ್ರ ಇಂಧನ ಸಚಿವಾಲಯ ತಿಳಿಸಿದೆ.












Click it and Unblock the Notifications