Budget 2024: ರಾಜ್ಯಕ್ಕೆ ಸಿಕ್ಕಿದ್ದು ಚೊಂಬು ಮಾತ್ರ; ಕೇಂದ್ರ ಬಜೆಟ್ ಟೀಕಿಸಿದ ಸಿಎಂ ಸಿದ್ದರಾಮಯ್ಯ
ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಕೊಡುಗೆ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ಸಿಕ್ಕಿಲ್ಲ, ಸಿಕ್ಕಿರುವುದು ಬರಿ ಚೊಂಬು ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಗಾತ್ರ 48,21,000 ಲಕ್ಷ ಕೋಟಿ ರೂಪಾಯಿ ಆಗಿದ್ದು, ಅದ್ರಲ್ಲಿ ಒಟ್ಟಾರೆ ಸ್ವೀಕೃತಿಗಳು 32.07 ಆಗಿದೆ. ಕಳೆದ ಸಲ ಮಧ್ಯಂತರ ಬಜೆಟ್ ಮಂಡಿಸಿದ್ರು,, 1,27,000 ಕೋಟಿ ಸ್ವೀಕೃತಿ ಹೆಚ್ಚಳ ಅಂತ ಹೇಳ್ತಿದ್ದಾರೆ, ಒಟ್ಟು ಬಜೆಟ್ ಗಾತ್ರದಲ್ಲಿ 14.1 ಲಕ್ಷ ಕೋಟಿ ಸಾಲ ತಗೊಂಡಿದ್ದಾರೆ ಆಂಧ್ರ, ಬಿಹಾರ ರಾಜ್ಯಕ್ಕೆ ಅನುದಾನ ಕೊಟ್ಟಿರೋದು ಬಿಟ್ರೆ ಬೇರೆ ರಾಜ್ಯಗಳಿಗೆ ಎನು ಕೊಟ್ಟಿಲ್ಲ ಎಂದರು.

ಅವರು ಪ್ರಧಾನಮಂತ್ರಿಯಾಗಿ ಉಳಿಬೇಕಾದ್ರೆ ಬಿಹಾರ ಮತ್ತು ಆಂಧ್ರಪ್ರದೇಶದ ಸಂಸದರ ಬೆಂಬಲ ಬೇಕು ಅದಕ್ಕೆ ಕೊಟ್ಟಿದ್ದಾರೆ. ನಿರ್ಮಲಾ ಸೀತರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಹೋದವರು, ಕರ್ನಾಟಕದ ಹಿತ ಕಾಪಾಡಿ ನ್ಯಾಯ ಕೊಡ್ತಾರೆ ಎಂಬ ನಿರೀಕ್ಷೆ ಇತ್ತು, ಆದರೆ ಕರ್ನಾಟಕದ ಜನತೆಗೆ ನಿರಾಸೆ ಮಾಡಿದ್ದಾರೆ ಎಂದರು.
ವಿಪತ್ತು ಪರಿಹಾರ ನಿಧಿ ಹೆಚ್ಚಳಕ್ಕೆ ಮನವಿ ಮಾಡಿದ್ದೆವು, ನೀರಾವರಿ ಯೋಜನೆಗಳ ಅನುಷ್ಠಾನದ ನಿರೀಕ್ಷೆಯಲ್ಲಿದ್ದೆವು ಆದರೆ ನಮ್ಮ ಮನವಿಯನ್ನು ಕಡೆಗಣಿಸಲಾಗಿದೆ. ನಾವು ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದವು ಅದಕ್ಕೆ ಮ್ಯಾಚಿಂಗ್ ಗ್ರ್ಯಾಂಟ್ ಕೊಡಲಿಲ್ಲ, ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯಾವುದನ್ನು ಪ್ರಸ್ತಾಪಿಸಿಲ್ಲ ಎಂದರು.
ಬಜೆಟ್‌ನಲ್ಲಿ ರೈತರಿಗೂ ಯಾವುದೂ ಪ್ರಯೋಜನ ಆಗಿಲ್ಲ, ರೈತರು ಬಡವರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಕೊಟ್ಟಿಲ್ಲ, ಸ್ವಾಮಿನಾಥನ್ ವರದಿ ಬಗ್ಗೆಯೂ ಪ್ರಸ್ಥಾಪ ಇಲ್ಲ. ಎಸ್ಸಿಎಸ್ಟಿ ಅಭಿವೃದ್ಧಿ ಬಗ್ಗೆ ಬಹಳ ಮಾತಡ್ತಾರೆ ಆದರೆ, ಕಳೆದ ಬಾರಿ ಎಸ್‌ಸಿ ಎಸ್‌ಟಿ ಅಭಿವೃದ್ಧಿಗಾಗಿ 9409 ಕೋಟಿ ಮೀಸಲು ಇಟ್ಟಿದ್ದರು, ಈ ಬಾರಿ ಕೇವಲ 6780 ಮೀಸಲು ಇಟ್ಟಿದ್ದಾರೆ ಎಂದರು.
ಕೆಲವು ಇಲಾಖೆಗಳಿಗೆಲ್ಲಾ ಫೆಬ್ರವರಿ ಬಜೆಟ್‌ಗಿಂತ ಕಡಿಮೆ ಅನುದಾನ ಕೊಟ್ಟಿದ್ದಾರೆ. ಶಿಕ್ಷಣಕ್ಕೆ 1.2 ಲಕ್ಷ ಕೋಟಿ ಇತ್ತು, 1.25 ಲಕ್ಷ ಕೋಟಿ ಮಾಡಿದ್ದಾರೆ. ಗೃಹ, ಆರೋಗ್ಯ ಕ್ಷೇತ್ರಕ್ಕೂ ಏನು ಕೊಟ್ಟಿಲ್ಲ ಎಂದರು.
ರಾಜ್ಯಕ್ಕೆ ಏನೂ ಕೊಟ್ಟಿಲ್ಲ
ಕರ್ನಾಟಕಕ್ಕೆ ಏನೇನು ಒತ್ತು ಕೊಟ್ಟಿಲ್ಲ, ಐದು ಜನ ಮಂತ್ರಿಗಳು ಇದ್ದರೂ ಕೈಗಾರಿಕಾ, ರೈಲ್ವೆಗೂ ಏನು ಕೊಟ್ಟಿಲ್ಲ. ನಿರ್ಮಲಾ ಸೀತಾರಾಮನ್ ಅವರು ಕೂಡ ಏನು ಕೊಡಿಸಿಲ್ಲ. ಇದು ನಿರಾಶಾದಾಯಕ, ಜನವಿರೋಧಿ ಬಜೆಟ್ ಇದಾಗಿದ್ದು, ಬಡವರಿಗೆ ಅನ್ಯಾಯ ಮಾಡಿದ್ದಾರೆ. ರಾಯಚೂರಿಗೆ ಏಮ್ಸ್ ಕೊಡುವಂತೆ ಕೇಳಿದ್ದೆವು ಅದನ್ನು ಕೊಟ್ಟಿಲ್ಲ ಎಂದರು.
ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಅಂತ ಹೇಳಿದ್ರೂ ಮಾಡಿದ್ರಾ ಎಂದು ಪ್ರಶ್ನೆ ಮಾಡಿದ ಅವರು, ಇವರೆದ್ದೆಲ್ಲಾ ಬರಿ ಘೋಷಣೆಗೆ ಮಾತ್ರ ಸೀಮಿತ ಎಂದರು.
ಇಂಡಸ್ಟ್ರೀಸ್ ಕಾರಿಡಾರ್ ಸ್ಥಾಪನೆಗೆ ನಮ್ಮ ವಿರೋದವಿಲ್ಲ ಆದ್ರೆ ಆದರಿಂದ ಕರ್ನಾಟಕಕ್ಕೆ ಏನ್ ಲಾಭ. ಮೋದಿ ಸರ್ಕಾರದ ಮೇಲೆ ಯಾವುದೇ ನಂಬಿಕೆ ಇಟ್ಕೊಳ್ಳೋಕೆ ಆಗಲ್ಲ, ದುಡ್ಡು ಕೊಡೋಕೆ ಯಾಕೆ ಟೆಕ್ನಿಕಲ್ ಪ್ರಾಬ್ಲಮ್ ಅವರಿಗೆ, ರಾಜ್ಯ ಸರ್ಕಾರದ ವಿರುದ್ಧ ನೀತಿ ಮಾಡೋಕೆ ಹೊರಟಿದ್ದು, ನಮ್ಮ ಮೇಲೆ ಸವಾರಿ ಮಾಡ್ತಿದ್ದಾರೆ ಎಂದರು.












Click it and Unblock the Notifications