Budget 2025: ₹10 ಲಕ್ಷದವರೆಗೆ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ?
2025-2026ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಇನ್ನು ಇಂದು ವಾರವಷ್ಟೇ ಬಾಕಿ ಇದೆ. ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಈ ಬಾರಿ ಜನ ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಜನರ ಮೇಲಿನ ತೆರಿಗೆ ಹೊರೆಯನ್ನು ಮೋದಿ ಸರ್ಕಾರ ಇಳಿಸಲಿದೆ ಎನ್ನುವ ನಿರೀಕ್ಷೆ ಇದ್ದು, ಹೊಸ ತೆರಿಗೆ ಸ್ಲ್ಯಾಬ್ ಪರಿಚಯಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಫೆಬ್ರವರಿ 1ರಂದಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಆದಾಯ ತೆರಿಗೆ ಬಗ್ಗೆ ಈಗಾಗಲೇ ದುಡಿಯುವ ವರ್ಗ ಅಸಮಾಧಾನಗೊಂಡಿದ್ದು, ಮೂರನೇ ಬಾರಿಗೆ ಅಧಿಕಾರ ಕೊಟ್ಟಿರುವ ಜನರ ಮೇಲಿನ ಆದಾಯ ತೆರಿಗೆ ಹೊರೆಯನ್ನು ಸರ್ಕಾರ ಕಡಿಮೆ ಮಾಡಲಿದೆ ಎಂದು ವರದಿಯಾಗಿದೆ.

2025-2026ರನೇ ಸಾಲಿನ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ನೀಡಬಹುದಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಈ ಪ್ರಕಾರ ವಾರ್ಷಿಕ 10 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ತೆರಿಗೆಯಿಂದ ಮುಕ್ತವಾಗಲಿದ್ದಾರೆ. 15 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ತೆರಿಗೆ ಹೊಂದಿರುವವರಿಗೆ 25% ಹೊಸ ತೆರಿಗೆ ದರವನ್ನು ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.
ಆದಾಯ ನಷ್ಟ ಭರಿಸಲು ಸಿದ್ಧ
ಒಂದು ವೇಳೆ 10 ಲಕ್ಷ ರೂಪಾಯಿವರೆಗೆ ಯಾವುದೇ ಆದಾಯ ತೆರಿಗೆ ವಿಧಿಸದೇ ಇದ್ದರೆ ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ 50,000 ಕೋಟಿ ರೂ.ಗಳಿಂದ 1 ಲಕ್ಷ ಕೋಟಿ ರೂಪಾಯಿವರೆಗೆ ಆದಾಯ ನಷ್ಟ ಉಂಟಾಗಲಿದ್ದು ಇದನ್ನು ಭರಿಸಲು ಸರ್ಕಾರ ಸಿದ್ಧವಾಗಿದೆ ಎಂದು ವರದಿ ತಿಳಿಸಿದೆ.
ಸರ್ಕಾರ 10 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿದರೆ, 15 ರಿಂದ 20 ಲಕ್ಷ ರೂಪಾಯಿ ವಾರ್ಷಿಕ ಆದಾಯ ಹೊಂದಿರುವವರಿಗೆ 25% ತೆರಿಗೆ ವಿಧಿಸುವ ಸಾಧ್ಯತೆ ಇದೆ. ಪ್ರಸ್ತುತ 15 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು 30% ತೆರಿಗೆ ಪಾವತಿಸುತ್ತಿದ್ದಾರೆ. ವಾರ್ಷಿಕ 7.75 ಲಕ್ಷ ರೂ.ಗಳವರೆಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ.
ತೆರಿಗೆ ಹೊರೆಯ ವಿರುದ್ಧ ಈಗಾಗಲೇ ಜನ ಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದಾಯ ತೆರಿಗೆ ಕಟ್ಟುವ ಜೊತೆಗೆ, ಜಿಎಸ್‌ಟಿ, ರೋಡ್ ಟ್ಯಾಕ್ಸ್ ಅಂತೆಲ್ಲಾ ಸರ್ಕಾರ ಸುಲಿಗೆ ಮಾಡುತ್ತಿದೆ ಆದರೆ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮಾತ್ರ ಕೆಲಸ ಮಾಡುತ್ತಿಲ್ಲ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಡುವುದನ್ನು ನೋಡಬಹುದು.












Click it and Unblock the Notifications