ಬೆಂಗಳೂರಿಗರಿಗೆ ಮಳೆ ಕೊಟ್ಟ 'Offer': ಈ ಕಂಪನಿ ಉದ್ಯೋಗಿಗಳಿಗೆ "Work From Home"
ಬೆಂಗಳೂರು, ಸೆಪ್ಟೆಂಬರ್ 7: ಐಟಿ ಹಬ್ ಎನಿಸಿಕೊಂಡಿರುವ ಸಿಲಿಕಾನ್ ಸಿಟಿಯಲ್ಲಿ ವರುಣನ ಖೇಲ್ ಶುರುವಾಗಿದೆ. ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆ ಹೋಗಲು ಆಗದಂಥ ಪರಿಸ್ಥಿತಿ ಬೆಂಗಳೂರಿನಲ್ಲಿ ಸೃಷ್ಟಿಯಾಗಿದೆ. ಅತಿಹೆಚ್ಚು ಐಟಿ ಕಂಪನಿಗಳಿರುವ ಪ್ರದೇಶದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡಿವೆ.
ರಾಜ್ಯ ರಾಜಧಾನಿಯ ವಾಸ್ತವ ಸ್ಥಿತಿಯನ್ನು ಅರಿತುಕೊಂಡಿರುವ ಐಟಿ ಕಂಪನಿಗಳು ಮತ್ತೊಮ್ಮೆ ತಮ್ಮ ಉದ್ಯೋಗಿಗಳಿಗೆ Work From Home ಆಫರ್ ಕೊಟ್ಟಿವೆ. ಮಳೆ ಹೊಡೆತಕ್ಕೆ ಮನೆಯಿಂದ ಹೊರ ಬಾರದಂಥ ಸ್ಥಿತಿ ನಿರ್ಮಾಣವಾಗಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿವೆ.
ಬೆಂಗಳೂರಿನ ಸರ್ಜಾಪುರ, ಬೆಳ್ಳಂದೂರು, ವರ್ತೂರು, ವೈಟ್‌ಫೀಲ್ಡ್ ಮತ್ತು ಹೊರ ವರ್ತುಲ ರಸ್ತೆಯಂತಹ ಕೆಲವು ಪ್ರದೇಶಗಳ ಸ್ಥಿತಿ ಘನ ಗಂಭೀರವಾಗಿದೆ. ಸಮುದ್ರದ ರೀತಿ ಗೋಚರಿಸುತ್ತಿರುವ ರಸ್ತೆಗಳಲ್ಲಿ ಓಡಾಡುವುದೇ ಕಷ್ಟಸಾಧ್ಯವಾಗುತ್ತಿದೆ. ಉದ್ಯೋಗಿಗಳ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡ ಐಟಿ ಕಂಪನಿಗಳು ಮಹತ್ವದ ನಿರ್ಧಾರ ತೆಗೆದುಕೊಂಡಿವೆ. ಹೀಗಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ವಿಪ್ರೋ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಘೋಷಿಸಿವೆ.

ಬೆಂಗಳೂರಿನಲ್ಲಿ ಸುರಕ್ಷತೆಗೆ ಆದ್ಯತೆ ಕೊಟ್ಟ ಕಂಪನಿ
ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಮಳೆರಾಯ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ. ಇದರ ಮಧ್ಯೆ ಉದ್ಯೋಗಿಗಳ ಸುರಕ್ಷತೆ ಮತ್ತು ಕೆಲಸವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಐಟಿ ಕಂಪನಿಗಳು ಮತ್ತೊಮ್ಮೆ ವರ್ಕ್ ಫ್ರಾಮ್ ಹೋಮ್ ಅನ್ನು ಘೋಷಿಸಿವೆ. ಟಿಸಿಎಸ್ ಹಾಗೂ ವಿಪ್ರೋ ಕಂಪನಿಗಳು ತಮ್ಮ ಉದ್ಯೋಗಿಗಳ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿವೆ.
''ಬೆಂಗಳೂರಿನಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ವಿತರಣಾ ತಂಡಗಳಿಗೆ ಸರಿಯಾದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ,'' ಎಂದಿರುವ ಟೆಕ್ ವಕ್ತಾರರು ಮನೆಯಿಂದ ಕೆಲಸ ಮಾಡುವ ಯೋಜನೆ ಬಗ್ಗೆ ದೃಢೀಕರಿಸಿದ್ದಾರೆ.

ವಿಪ್ರೋ ಕಂಪನಿಯಿಂದ ವರ್ಕ್ ಫ್ರಾಮ್ ಹೋಮ್
ಬೆಂಗಳೂರಿನಲ್ಲಿ ವಿಪ್ರೋ ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. "ವಹಿವಾಟು ಮುಂದುವರಿಕೆ ಯೋಜನೆಗಳನ್ನು ಆಹ್ವಾನಿಸಲಾಗಿದ್ದು, ವ್ಯಾಪಾರಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ'' ಎಂದು ವಿಪ್ರೋ ವಕ್ತಾರರು ತಿಳಿಸಿದ್ದಾರೆ.

ಯಾರೂ ತಲುಪದ ಪ್ರದೇಶಗಳಲ್ಲಿ ಇ-ಕಾಮರ್ಸ್ ಸೇವೆ ಸ್ಥಗಿತ
''ಸಿಲಿಕಾನ್ ಸಿಟಿಯ ಹೊರ ವರ್ತುಲ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಹಲವೆಡೆ ತಲುಪುವುದಕ್ಕೂ ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಇ-ಕಾಮರ್ಸ್ ಕಂಪನಿಗಳು ತಮ್ಮ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು. ಈ ಕುರಿತು ಪ್ರತಿಕ್ರಿಯೆ ನೀಡಿದ ಉದ್ಯೋಗಿಯೊಬ್ಬರು ಕೆಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಗೆ ಯಾರೊಬ್ಬರೂ ತಲಪಲು ಸಾಧ್ಯವಾಗುತ್ತಿಲ್ಲ, ಹೀಗಾಗಿಯೇ ಸೇವೆಯನ್ನು ಸ್ವಲ್ಪ ಸಮಯದವರೆಗೂ ನಿಲ್ಲಿಸಲಾಗಿತ್ತು. ಆದರೆ ಕೆಲವು ಸ್ಥಳಗಳಲ್ಲಿ ಈಗ ಪರಿಸ್ಥಿತಿ ಸುಧಾರಿಸುತ್ತಿದೆ," ಎಂದರು.

ಬೆಂಗಳೂರು ಮಳೆ ಬಗ್ಗೆ ಅಮೆಜಾನ್ ಅಭಿಪ್ರಾಯ!
''ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯ ಮಧ್ಯೆ ನಮ್ಮ ಉದ್ಯೋಗಿಗಳ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆ ಆಗಿರುತ್ತದೆ ಎಂದು ಅಮೆಜಾನ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದು, ಅತಿಹೆಚ್ಚು ಜಲಾವೃತಗೊಂಡ ಪ್ರದೇಶ ಹಾಗೂ ಮಳೆ ಆಗುತ್ತಿರುವ ಸ್ಥಳದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ. ಸಾಹಸ ತೋರಿಸುವ ಮೂಲಕ ಸೇವೆ ಒದಗಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದೇವೆ. ಇದರಿಂದ ಗ್ರಾಹಕರ ವಿತರಣೆಯ ಮೇಲೆ ಪರಿಣಾಮ ಬೀರಲಿದ್ದು, ಅದರ ಬಗ್ಗೆ ಪೂರ್ವಭಾವಿಯಾಗಿ ಮಾಹಿತಿ ನೀಡಿದ್ದೇವೆ," ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ.












Click it and Unblock the Notifications