ಒಂದು ದಿನದ ಮುಷ್ಕರಕ್ಕೆ ಕರೆನೀಡಿದ ಬ್ಯಾಂಕ್ ಯೂನಿಯನ್ ಒಕ್ಕೂಟ
ಮುಂಬೈ, ಡಿ 2: ಕ್ರಿಸ್ಮಸ್ ಹಬ್ಬದ ಮರುದಿನ ಅಂದರೆ, ಡಿಸೆಂಬರ್ 26ರಂದು ಒಂದು ದಿನದ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕರೆನೀಡಿದೆ.
ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡವನ್ನು ವಿಲೀನಗೊಳಿಸುವುದನ್ನು ವಿರೋಧಿಸಿ ಬ್ಯಾಂಕ್ ಮುಷ್ಕರಕ್ಕೆ ಕರೆನೀಡಲಾಗಿದೆ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಶೋಷಿಯೇಶನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಸೆಪ್ಟಂಬರ್ ತಿಂಗಳಲ್ಲಿ ಸಾರ್ವಜನಿಕ ವಲಯದ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸುವುದಾಗಿ, ಕೇಂದ್ರ ಸರಕಾರ ಪ್ರಕಟಿಸಿತ್ತು. ಈ ಮೂರು ಬ್ಯಾಂಕುಗಳಲ್ಲಿ ಲಾಭದಲ್ಲಿ ನಡೆಯುತ್ತಿದ್ದ ಬ್ಯಾಂಕ್ ಎಂದರೆ ಅದು ವಿಜಯಾ ಬ್ಯಾಂಕ್. ಈಗ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನಗೊಳಿಸಲಾಗುತ್ತಿದೆ.

ಕರ್ನಾಟಕದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಿಜಯಾ ಬ್ಯಾಂಕ್ ಅನ್ನು ಇತರ ಬ್ಯಾಂಕ್ ಜೊತೆ ವಿಲೀನಗೊಳಿಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿಲೀನದ ಬಗ್ಗೆ ಪ್ರಸ್ತಾವ ಬಂದ ನಂತರ ಸಾರ್ವಜನಿಕ ವಲಯದ ಬ್ಯಾಂಕ್ ಷೇರುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿತ್ತು. ಅದರಲ್ಲೂ ವಿಜಯಾ ಬ್ಯಾಂಕ್ ಷೇರು ಇಪ್ಪತ್ತು ಪರ್ಸೆಂಟ್ ಗೂ ಹೆಚ್ಚು ಕುಸಿತ ಕಂಡಿದೆ.
ವಿಜಯಾ ಬ್ಯಾಂಕಿನ ಅನುತ್ಪಾದಕ ಆಸ್ತಿ ಬಹಳ ಕಡಿಮೆ ಇದ್ದು, ಸರಕಾರಕ್ಕೆ ಲಾಭಾಂಶ ನೀಡುತ್ತಿರುವ ಬ್ಯಾಂಕ್ ಗಳಲ್ಲಿ ವಿಜಯಾ ಬ್ಯಾಂಕ್ ಕೂಡ ಒಂದು.












Click it and Unblock the Notifications