ಭಾರತೀಯರಿಂದ ಈ 5 ಕಾರಣಕ್ಕೆ ಹೆಚ್ಚು ಸಾಲ, ಪ್ರಾಪರ್ಟಿ ವಿಚಾರವೂ ಇದೆ!
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ ಹಾಗೂ ವೆಚ್ಚಗಳು ಸೇರಿದಂತೆ ವಿವಿಧ ಕಾರಣಗಳಿಗೆ ಸಾಲ ಮಾಡುವುದು ಇದೆ. ಅಲ್ಲದೇ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ಸಾಲ ಮಾಡಿವೆ. ಇದೀಗ ಭಾರತೀಯರು ಯಾವ ಕಾರಣಕ್ಕೆ ಸಾಲ ಮಾಡುತ್ತಿದ್ದಾರೆ ಎನ್ನುವ ವಿಷಯವೊಂದು ಭಾರೀ ಚರ್ಚೆ ಆಗುತ್ತಿದೆ. ಈ ಬಗ್ಗೆ Ind Money ವರದಿ ಮಾಡಿದೆ.
ಭಾರತೀಯರು ಯಾವ ಕಾರಣಕ್ಕೆ ಹೆಚ್ಚು ವೈಯಕ್ತಿಕ ಸಾಲವನ್ನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ (Personal loans) ಬಗ್ಗೆ ವರದಿ ಮಾಡಲಾಗಿದ್ದು, ಇದೀಗ ಈ ಕಾರಣಗಳಿಗೂ ಭಾರತೀಯರು ಸಾಲ ಮಾಡುತ್ತಿದ್ದಾರೆಯೇ ಎನ್ನುವ ವಿಚಾರ ಅಚ್ಚರಿ ಹಾಗೂ ಕುತೂಹಲಕ್ಕೆ ಸಹ ಕಾರಣವಾಗಿದೆ.

INDmoney ವರದಿಯ ಪ್ರಕಾರ, ಭಾರತೀಯರು ವೈಯಕ್ತಿಕ ಸಾಲಗಳನ್ನು ಕೇವಲ ಅಗತ್ಯ ಅಥವಾ ಅನವಶ್ಯಕತೆಗಾಗಿ ಮಾತ್ರ ಮಾಡುತ್ತಿಲ್ಲ. ಬದಲಾಗಿ, ಜೀವನಶೈಲಿ ಸುಧಾರಣೆ ಮತ್ತು ಐಷಾರಾಮಿ ವಿಷಯಗಳಿಗೂ ಖರ್ಚು ಮಾಡುತ್ತಿದ್ದಾರೆ. ಹಬ್ಬ ಮತ್ತು ಐಷಾರಾಮಿ ಜೀವನ ಶೈಲಿಗಾಗಿಯೂ ಕೆಲವರು ವೈಯಕ್ತಿಕ ಸಾಲಗಳನ್ನು ಮಾಡುತ್ತಿರುವುದು ಇದೆ. ವೈಯಕ್ತಿಕ ಸಾಲಗಳಲ್ಲಿ 51% ಕ್ಕಿಂತ ಹೆಚ್ಚು ಮೊತ್ತವನ್ನು ಟ್ರಾವೆಲ್ ಹಾಗೂ ಮನೆ ಬದಲಾವಣೆಗಾಗಿ ತೆಗೆದುಕೊಳ್ಳಲಾಗಿದೆ. ಆದರೆ ಕೇವಲ 15% ಮಾತ್ರ ಶಿಕ್ಷಣ ಮತ್ತು ಆರೋಗ್ಯ ಸುರಕ್ಷತೆಯಂತಹ ತುರ್ತು ಬಳಕೆಗಾಗಿ ತೆಗೆದುಕೊಳ್ಳಲಾಗಿದೆ. ಈ ಮಾದರಿಯ ಪ್ರವೃತ್ತಿಯು ಸಂಬಳ ಪಡೆಯುವ / ಕೆಲಸಕ್ಕೆ ಹೋಗುವವರಲ್ಲಿ ಹೆಚ್ಚಾಗಿದೆ ಎಂದು ಉಲ್ಲೇಖಿಸಲಾಗಿದೆ.
ವೈಯಕ್ತಿಕ ಸಾಲಗಳಿಗೆ ಪ್ರಮುಖ ಕಾರಣಗಳು
1. ಪ್ರಯಾಣ ಮತ್ತು ರಜಾದಿನಗಳು: ಭಾರತೀಯರು ಕೋವಿಡ್ ನಂತರದಲ್ಲಿ ಅಥವಾ ಇತ್ತೀಚಿನ ದಿನಗಳಲ್ಲಿ ಪ್ರವಾಸ ಮಾಡುವುದು ಹೆಚ್ಚಾಗಿದೆ. ಬೇರೆ ಬೇರೆ ರಾಜ್ಯಗಳು ಹಾಗೂ ದೇಶಗಳಿಗೂ ಭಾರತೀಯರು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಇದಕ್ಕಾಗಿ ಅವರು ವೈಯಕ್ತಿಕ ಸಾಲಗಳ ಮೊರೆ ಹೋಗುತ್ತಿರುವುದು ಆರ್ಥಿಕತೆಯ ಪ್ಲ್ಯಾನ್‌ನಲ್ಲಿನ ಲೋಪ ಎಂದೇ ಪರಿಗಣಿಸಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.
2. ಮನೆಗಳ ನವೀಕರಣಗಳು: ಇನ್ನು ಭಾರತೀಯರು ಹೆಚ್ಚಾಗಿ ಸಾಲ ಮಾಡುವ ವಿಚಾರದಲ್ಲಿ ಮನೆಗಳ ನವೀಕರಣ ಎರಡನೇ ಸ್ಥಾನದಲ್ಲಿದೆ. ಮನೆಗಳ ನವೀಕರಣ ಹಾಗೂ ಬದಲಾವಣೆಗಾಗಿಯೂ ಜನ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳುವುದು ಇದೆ.
3. ವೈದ್ಯಕೀಯ ತುರ್ತುಸ್ಥಿತಿಗಳು: ವೈಯಕ್ತಿಕ ಸಾಲಗಳು ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಗೆ ಬಳಕೆ ಮಾಡಲಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಐಷಾರಾಮಿ ಖರ್ಚಿಗಾಗಿಯೂ ಕೆಲವರು ಈ ವೈಯಕ್ತಿಕ ಸಾಲಗಳ ಸುಳಿಗೆ ಸಿಲುಕಿರುವುದು ಇದೆ.
4. ಮದುವೆ: ಭಾರತೀಯರು ಮನೆ ಕಟ್ಟುವುದರಲ್ಲಿ ಹಾಗೂ ಮದುವೆ ಮಾಡುವುದರಲ್ಲಿ ಮಾಡುವಷ್ಟು ಖರ್ಚನ್ನು ಮತ್ಯಾವುದಕ್ಕೂ ಮಾಡುವುದಿಲ್ಲ. ಈ ಎರಡೂ ವಿಚಾರಗಳಲ್ಲಿ ಭಾರತೀಯರು ಹೆಚ್ಚು ದುಡ್ಡು ಖರ್ಚು ಮಾಡುತ್ತಾರೆ ಎನ್ನುವುದುನ್ನು ಈ ವರದಿ ಮತ್ತೆ ಸಾಬೀತಾಗಿಸಿದೆ. ಮದುವೆ ಸಂಭ್ರಮಾಚರಣೆ ವೆಚ್ಚ ಸರಿದೂಗಿಸುವುದಕ್ಕೆ ಜನ ಸಾಲ ಮಾಡುತ್ತಿದ್ದಾರೆ.
5. ಸಾಲ ತಪ್ಪಿಸುವುದಕ್ಕೆ ಸಾಲ: ಇನ್ನು ಇದು ತೀರ ವಿಚಿತ್ರವೆನಿಸಿದರೂ ನಿಜ. ಜನ ಸಾಲ ತೀರಿಸುವುದಕ್ಕೆ ಮತ್ತೊಂದು ಸಾಲ ಮಾಡುತ್ತಿದ್ದಾರೆ. ಅನೇಕರು ಕ್ರೆಡಿಟ್ ಕಾರ್ಡ್ ಬಾಕಿಗಳಂತಹ ಹೆಚ್ಚಿನ ಬಡ್ಡಿದರದ ಸಾಲಗಳನ್ನು ಪಾವತಿಸಲು ವೈಯಕ್ತಿಕ ಸಾಲವನ್ನು ಮಾಡುತ್ತಿದ್ದಾರೆ.
6. ಉನ್ನತ ಶಿಕ್ಷಣ: ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಜನ ಸಾಲ ಮಾಡುವ ಆಯ್ಕೆ ಕೊನೆಯದಾಗಿದೆ. ಈ ವಿಚಾರದಲ್ಲಿ ಜನ ಸಾಲ ಮಾಡುತ್ತಿದ್ದರೂ ಉಳಿದ ವಿಚಾರಗಳಿಗಿಂತ ಈ ವಿಷಯದಲ್ಲಿ ಸಾಲ ಮಾಡುವುದು ವಿರಳವಾಗಿದೆ.
ಸಾಲದ ಸಾರಾಂಶ: ಇನ್ನು ಭಾರತೀಯರಲ್ಲಿ ಹಲವರು ಅನವಶ್ಯಕ ಕಾರಣಗಳಿಗೆ ಸಾಲವನ್ನು ಮಾಡುವುದು ಹೆಚ್ಚಾಗಿದೆ. ಗೃಹೋಪಯೋಗಿ ಉಪಕರಣಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಂತಹ ದೊಡ್ಡ-ಟಿಕೆಟ್ ವಸ್ತುಗಳ ಖರೀದಿಗೂ ಜನ ಸಾಲ ಮಾಡುತ್ತಿದ್ದಾರೆ. ಹೆಚ್ಚು ಬಿಸಾಡಬಹುದಾದ, ಒಮ್ಮೆ ಬಳಸಬಹುದಾದ ಅಥವಾ ಹೆಚ್ಚು ಅವಶ್ಯವಲ್ಲದ ವಸ್ತುಗಳನ್ನು ಜನ ಖರೀದಿ ಮಾಡುತ್ತಿದ್ದಾರೆ.












Click it and Unblock the Notifications